ADVERTISEMENT

ಚಿತ್ರದುರ್ಗ | ಕುಡಿಯುವ ನೀರಿಗೆ ಸ್ಮಾರ್ಟ್‌ ಕಾರ್ಡ್‌: ಜಿ.ಪಂ. ಅಧ್ಯಕ್ಷರ ವಿರೋಧ

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಡಿಜಿಟಲ್‌ ಸ್ಪರ್ಶ, ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 11:25 IST
Last Updated 15 ಜೂನ್ 2020, 11:25 IST
ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷೆ ಶಶಿಕಲಾ ಮಾತನಾಡಿದರು. ಉಪಾಧ್ಯಕ್ಷೆ ಸುಶೀಲಮ್ಮ ಇದ್ದಾರೆ.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷೆ ಶಶಿಕಲಾ ಮಾತನಾಡಿದರು. ಉಪಾಧ್ಯಕ್ಷೆ ಸುಶೀಲಮ್ಮ ಇದ್ದಾರೆ.   

ಚಿತ್ರದುರ್ಗ: ಶುದ್ಧ ಕುಡಿಯುವ ನೀರಿನ ಘಟಕದ (ಆರ್‌ಒ) ನೀರು ಪಡೆಯಲು ರೂಪಿಸಿರುವ ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ವಿರೋಧ ವ್ಯಕ್ತಪಡಿಸಿದರು. ಸ್ಮಾರ್ಟ್‌ಕಾರ್ಡ್‌ ಬದಲು ಕಾಯಿನ್‌ ಬಳಕೆಗೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಚರ್ಚೆ ನಡೆಯಿತು. ಸ್ಮಾರ್ಟ್‌ ಕಾರ್ಡ್‌ ವ್ಯವಸ್ಥೆಯಿಂದ ಜನರಿಗೆ ಉಂಟಾಗುತ್ತಿರುವ ತೊಂದರೆಯ ಕುರಿತು ಅಧ್ಯಕ್ಷರು ಬೆಳಕು ಚೆಲ್ಲಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಶುದ್ಧ ಕುಡಿಯುವ ನೀರನ ಘಟಕದಲ್ಲಿ ₹ 20 ಲೀಟರ್‌ ನೀರು ಪಡೆಯಲು ₹ 5 ನಿಗದಿಪಡಿಸಲಾಗಿದೆ. ಇತ್ತೀಚೆಗೆ ಇಂತಹ ಘಟಕದಲ್ಲಿ ಸ್ಮಾರ್ಟ್‌ ಕಾರ್ಡ್‌ ಬಳಕೆಗೂ ಅವಕಾಶ ಕಲ್ಪಿಸಲಾಗಿದೆ. ಹೆಸರು ನೋಂದಣಿ ಮಾಡಿಕೊಂಡು ಸ್ಮಾರ್ಟ್‌ ಕಾರ್ಡ್‌ ಪಡೆಯಬೇಕು. ಮೊಬೈಲ್‌ ರೀತಿಯಲ್ಲಿ ಪ್ರತಿ ತಿಂಗಳು ಇದಕ್ಕೆ ಹಣ ತುಂಬಿಸಿಕೊಳ್ಳಬೇಕು.

ADVERTISEMENT

‘ಕುಡಿಯುವ ನೀರಿಗೆ ಹಳ್ಳಿ ಜನರು ಮಾಸಿಕ ₹ 150ರಿಂದ 200 ಖರ್ಚು ಮಾಡುವುದು ಅಸಾಧ್ಯ. ಸ್ಮಾರ್ಟ್‌ ಕಾರ್ಡ್‌ ಬಳಕೆ ಕಡ್ಡಾಯಗೊಳಿಸಿದರೆ ಶುದ್ಧ ಕುಡಿಯುವ ನೀರು ಬಳಕೆ ಮಾಡುವವರ ಪ್ರಮಾಣ ಕಡಿಮೆಯಾಗಲಿದೆ. ಈ ಬಗ್ಗೆ ಹಲವು ದೂರುಗಳು ಕೇಳಿ ಬರುತ್ತಿವೆ. ಕಾಯಿನ್‌ ಬಳಸಿ ನೀರು ಪಡೆಯುವುದು ಸುಲಭ ಮಾರ್ಗ. ಈ ವ್ಯವಸ್ಥೆಯನ್ನೇ ಉಳಿಸಿಕೊಳ್ಳಿ’ ಎಂದು ತಾಕೀತು ಮಾಡಿದರು.

12 ಮಿ.ಮೀ. ಮಳೆ ಕೊರತೆ:ಜಿಲ್ಲೆಯಲ್ಲಿ ವಾಡಿಕೆಯಂತೆ 134 ಮಿ.ಮೀ ಮಳೆ ಆಗಬೇಕಿತ್ತು. ಆದರೆ, ಈವರೆಗೆ 122 ಮಿ.ಮೀ ಮಳೆಯಾಗಿದ್ದು, 12 ಮಿ.ಮೀ ಮಳೆ ಕೊರತೆಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಸದಾಶಿವ ಸಭೆಗೆ ಮಾಹಿತಿ ನೀಡಿದರು.

‘ರಾಗಿ, ಜೋಳ, ಶೇಂಗಾ, ತೊಗರಿ, ಹೆಸರು ಸೇರಿ ಹಲವು ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. 22 ರೈತ ಸಂಪರ್ಕ ಕೇಂದ್ರಗಳ ಜೊತೆಗೆ 18 ಹೆಚ್ಚುವರಿ ಕೇಂದ್ರಗಳನ್ನು ತೆರೆಯಲಾಗಿದೆ. ಮೆಕ್ಕೆಜೋಳ, ಹತ್ತಿ ಸೇರಿ ಏಕದಳ ಧಾನ್ಯದ ಬಿತ್ತನೆ ಶೇ 7ರಷ್ಟು ಪೂರ್ಣಗೊಂಡಿದೆ. ಮಳೆ ಸುರಿದಂತೆ ಬಿತ್ತನೆ ಪ್ರಮಾಣ ಹೆಚ್ಚಾಗಲಿದೆ’ ಎಂದು ಸದಾಶಿವ ಅವರು ತಿಳಿಸಿದರು.

ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. 47 ಸಾವಿರ ಮೆಕ್ಕೆಜೋಳ ಬೆಳೆಗಾರರ ಬ್ಯಾಂಕ್‌ ಖಾತೆಗೆ ಮೂರು ದಿನಗಳಲ್ಲಿ ₹ 5 ಪರಿಹಾರ ಧನ ಜಮಾ ಆಗಲಿದೆ. 2,419 ತೋಟಗಾರಿಕಾ ಬೆಳೆಗಾರರಿಗೂ ಪರಿಹಾರ ಸಿಗಲಿದೆ. ಹೂ ಬೆಳೆಗಾರರಿಗೆ ಹೆಕ್ಟೇರ್‌ಗೆ ₹ 25 ಸಾವಿರ ಹಾಗೂ ಹಣ್ಣು ಬೆಳೆಗಾರರಿಗೆ ಹೆಕ್ಟೇರ್‌ಗೆ ₹ 15 ಸಾವಿರ ಪರಿಹಾರ ಸಿಗಲಿದೆ.

ಸಾವಿರ ಮಕ್ಕಳಿಗೆ ಲಸಿಕೆ ಬಾಕಿ:ಲಾಕ್‌ಡೌನ್‌ ಕಾರಣಕ್ಕೆ ಜಿಲ್ಲೆಯಲ್ಲಿ ಇನ್ನೂ ಒಂದು ಸಾವಿರ ಮಕ್ಕಳಿಗೆ ಲಸಿಕೆ ಹಾಕುವುದು ಬಾಕಿ ಉಳಿದಿದೆ. ಕೆಲ ದಿನಗಳಲ್ಲಿ ಲಸಿಕೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ ತಿಳಿಸಿದರು.

‘9,600 ಮಕ್ಕಳಿಗೆ ಲಸಿಕೆ ಹಾಕಬೇಕಿತ್ತು. ಲಾಕ್‌ಡೌನ್‌ ಕಾರಣಕ್ಕೆ ತಾತ್ಕಾಲಿಕವಾಗಿ ಇದು ಸ್ಥಗಿತಗೊಂಡಿತ್ತು. ಲಾಕ್‌ಡೌನ್‌ ಸಡಿಲಗೊಂಡ ಬಳಿಕ ಎಲ್ಲ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 8,600 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರದಲ್ಲಿಯೂ ಲಸಿಕೆ ಅಭಿಯಾನ ನಡೆಯುತ್ತಿದೆ’ ಎಂದು ವಿವರಿಸಿದರು.

ಇಒಗಳಿಗೆ ನೋಟಿಸ್‌:ಮಾಸಿಕ ಕೆಡಿಪಿ ಸಭೆಗೆ ಗೈರು ಹಾಜರಾಗಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (ಇಒ) ನೋಟಿಸ್‌ ನೀಡುವಂತೆ ಅಧ್ಯಕ್ಷೆ ಶಶಿಕಲಾ ಸೂಚನೆ ನೀಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್‌ ಮಾಡುವಂತೆ ಡಿಡಿಪಿಐ ಕೆ.ರವಿಶಂಕರ ರೆಡ್ಡಿ ಮಾಡಿದ ಮನವಿ ಬಗ್ಗೆ ಚರ್ಚಿಸಲು ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಅಧ್ಯಕ್ಷರು ವಿಚಾರಿಸಿದರು. ಆಗ ಯಾವೊಬ್ಬ ಇಒ ಕೂಡ ಸಭೆಗೆ ಬಾರದಿರುವುದು ಗಮನಕ್ಕೆ ಬಂದಿತು.

‘ಕೆಡಿಪಿ ಸಭೆಗೆ ಹಾಜರಾಗುವುದು ಕಡ್ಡಾಯ. ಅನುಮತಿ ಪಡೆಯದೇ ಹೇಗೆ ಗೈರಾಗಿದ್ದಾರೆ? ಚಳ್ಳಕೆರೆ ಇಒ ಮಾತ್ರ ಪೂರ್ವಾನುಮತಿ ಪಡೆದಿದ್ದಾರೆ. ಅವರನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ನೋಟಿಸ್‌ ಜಾರಿ ಮಾಡಿ’ ಎಂದು ತಾಕೀತು ಮಾಡಿದರು.

ಉಪಾಧ್ಯಕ್ಷೆ ಸುಶೀಲಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.