ADVERTISEMENT

ಚಿತ್ರದುರ್ಗ: ಕ್ಷೇತ್ರ ವಿಂಗಡಣೆಗೆ ನಡೆಯುತ್ತಿದೆ ಕಸರತ್ತು

27 ತಾಪಂ ಕ್ಷೇತ್ರ ರದ್ದು, 4 ಜಿಪಂ ಕ್ಷೇತ್ರ ಸೇರ್ಪಡೆ

ಜಿ.ಬಿ.ನಾಗರಾಜ್
Published 16 ಫೆಬ್ರುವರಿ 2021, 19:30 IST
Last Updated 16 ಫೆಬ್ರುವರಿ 2021, 19:30 IST
ಕವಿತಾ ಎಸ್‌.ಮನ್ನಿಕೇರಿ
ಕವಿತಾ ಎಸ್‌.ಮನ್ನಿಕೇರಿ   

ಚಿತ್ರದುರ್ಗ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆ ನಡೆಸಿರುವ ಚುನಾವಣಾ ಆಯೋಗ, ಕ್ಷೇತ್ರ ಪುನರ್‌ ವಿಂಗಡಣೆಗೆ ಸೂಚನೆ ನೀಡಿದೆ. ಇದರಿಂದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು 37ರಿಂದ 41ಕ್ಕೆ ಏರಿಕೆಯಾಗಲಿದ್ದು, ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು 136ರಿಂದ 109ಕ್ಕೆ ಇಳಿಕೆ ಆಗಲಿವೆ.

ಆಡಳಿತ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಚುನಾವಣಾ ಆಯೋಗ ಕ್ಷೇತ್ರ ಪುನರ್‌ ವಿಂಗಡಣೆ ಪ್ರಕ್ರಿಯೆ ಆರಂಭಿಸಿದೆ. ಪುನರ್‌ ವಿಂಗಡಣೆ ಮಾಡಿದ ಕ್ಷೇತ್ರದ ನಕ್ಷೆ, ಜನಸಂಖ್ಯೆ ಸೇರಿದಂತೆ ಸಮಗ್ರ ಮಾಹಿತಿಯೊಂದಿಗೆ ಫೆ.22ರಂದು ಆಯೋಗದ ಎದುರು ಹಾಜರಾಗುವಂತೆ ಜಿಲ್ಲಾ ಚುನಾವಣಾ ಶಾಖೆಗೆ ಸೂಚನೆ ನೀಡಲಾಗಿದೆ. ಕ್ಷೇತ್ರ ಮರು ಹೊಂದಾಣಿಕೆಗೆ ಕಸರತ್ತು ನಡೆಯುತ್ತಿದೆ.

2011ರ ಜನಗಣತಿ ಆಧಾರದ ಮೇರೆಗೆ ಜಿಲ್ಲೆಯಲ್ಲಿ 37 ಜಿಲ್ಲಾ ಪಂಚಾಯಿತಿ ಹಾಗೂ 136 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿವೆ. ನಾಲ್ಕು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹೆಚ್ಚಾಗಲಿದ್ದು, 27 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಕಡಿಮೆ ಆಗಲಿವೆ. ಯಾವ ಕ್ಷೇತ್ರ ಕೈಜಾರಿ ಹೋಗಲಿದೆ ಎಂಬ ಆತಂಕ ರಾಜಕಾರಣಿಗಳನ್ನು ಕಾಡಲಾರಂಭಿಸಿದೆ. ಹೊಸ ಕ್ಷೇತ್ರದ ಸೃಷ್ಟಿಗೆ ತೆರೆಮರೆಯಲ್ಲಿ ಒತ್ತಡಗಳು ಹೆಚ್ಚಾಗುತ್ತಿವೆ.

ADVERTISEMENT

ಕ್ಷೇತ್ರಕ್ಕೆ ಮಾನದಂಡ ಏನು?

ಜನಸಂಖ್ಯೆ ಆಧಾರದ ಮೇರೆಗೆ ಕ್ಷೇತ್ರ ಪುನರ್‌ ವಿಂಗಡಣೆ ಮಾಡಲಾಗುತ್ತಿದೆ. 35ಸಾವಿರದಿಂದ 42 ಸಾವಿರ ಜನಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ ಹಾಗೂ 12ಸಾವಿರದಿಂದ 15 ಸಾವಿರ ಜನಸಂಖ್ಯೆಗೆ ಒಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರ ರಚನೆಗೆ ಆಯೋಗ ಸೂಚನೆ ನೀಡಿದೆ.

ಇದರಂತೆ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಹಾಗೂ ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ತಲಾ ಒಂದು ಹೊಸ ಜಿಲ್ಲಾ ಪಂಚಾಯಿತಿ ಕ್ಷೇತ್ರ ರಚನೆಯಾಗಲಿದೆ. ಹೊಸದುರ್ಗ ಹಾಗೂ ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

ಕ್ಷೇತ್ರ ವಿಂಗಡಣೆಯಲ್ಲಿ ಗ್ರಾಮ ಪಂಚಾಯಿತಿ ವಿಭಜನೆ ಆಗದಂತೆ ಎಚ್ಚರ ವಹಿಸುವಂತೆ ಆಯೋಗ ಸೂಚನೆ ನೀಡಿದೆ. ಕ್ಷೇತ್ರ ವ್ಯಾಪ್ತಿಯ ರಸ್ತೆ, ನದಿ, ಬೆಟ್ಟ, ಜಲಾಶಯ ಹಾಗೂ ಅರಣ್ಯ ಸೇರಿದಂತೆ ಭೌಗೋಳಿಕ ಅಂಶಗಳನ್ನು ಪರಿಗಣಿಸುವಂತೆ ಸಲಹೆ ಕೊಟ್ಟಿದೆ. ಪ್ರತಿ ಕ್ಷೇತ್ರದ ಪ್ರತ್ಯೇಕ ನಕ್ಷೆ ಸಿದ್ಧಪಡಿಸುವಂತೆ ಹೇಳಿದೆ.

ಕುಗ್ಗಿದ ತಾಲ್ಲೂಕು ಪಂಚಾಯಿತಿ

ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಮೊದಲು ನಿಗದಿಪಡಿಸಿದ್ದ ಜನಸಂಖ್ಯೆಯ ಮಾನದಂಡವನ್ನು ಬದಲಾವಣೆ ಮಾಡಿದ ಪರಿಣಾಮವಾಗಿ ಕ್ಷೇತ್ರಗಳು ಕಡಿಮೆಯಾಗಿವೆ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಒಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರವನ್ನು ಸೃಜಿಸಲಾಗಿತ್ತು. ಪುನರ್‌ ವಿಂಗಡಣೆ ಸಂದರ್ಭದಲ್ಲಿ ಪ್ರತಿ 12ರಿಂದ 15 ಸಾವಿರಕ್ಕೆ ಒಂದು ಕ್ಷೇತ್ರ ಸೃಷ್ಟಿಸುವಂತೆ ಆಯೋಗ ಸೂಚನೆ ನೀಡಿದೆ. ಅಲ್ಲದೇ, ನಗರ, ಪಟ್ಟಣ ಪ್ರದೇಶಗಳು ಹಿಗ್ಗುತ್ತಿದ್ದು, ಗ್ರಾಮೀಣ ಪ್ರದೇಶ ನಗರ ವ್ಯಾಪ್ತಿಗೆ ಸೇರ್ಪಡೆಗೊಳ್ಳುತ್ತಿದೆ. ಇದು ಕೂಡ ತಾಲ್ಲೂಕು ಪಂಚಾಯಿತಿ ಕ್ಷೇತ್ರ ಕಡಿಮೆಯಾಗಲು ಪ್ರಮುಖ ಕಾರಣ ಎಂಬುದು ರಾಜಕಾರಣಿಗಳ ವಾದ.

***

ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಆರಂಭವಾಗಿದೆ. ಸಮಗ್ರ ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಲಾಗುತ್ತದೆ. ಬಳಿಕ ಕ್ಷೇತ್ರಗಳ ಮಾಹಿತಿ ಸಾರ್ವಜನಿಕವಾಗಿ ಲಭ್ಯವಾಗಲಿದೆ.

–ಕವಿತಾ ಎಸ್‌.ಮನ್ನಿಕೇರಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.