ADVERTISEMENT

ಸವಾಲು ಎದುರಿಸುವ ಸಾಮರ್ಥ್ಯ ಎನ್‍ಇಪಿಗೆ ಇಲ್ಲ: ನ್ಯಾಯಮೂರ್ತಿ ನಾಗಮೋಹನ್ ದಾಸ್‌

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 19:08 IST
Last Updated 12 ಸೆಪ್ಟೆಂಬರ್ 2020, 19:08 IST
ನ್ಯಾಯಮೂರ್ತಿ ನಾಗಮೋಹನ್ ದಾಸ್‌
ನ್ಯಾಯಮೂರ್ತಿ ನಾಗಮೋಹನ್ ದಾಸ್‌   

ಬೆಂಗಳೂರು: 'ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‍ಇಪಿ) ದೇಶದ ಅಭಿವೃದ್ಧಿಯ ಸವಾಲುಗಳಾದ ಭಯೋತ್ಪಾದನೆ, ಕೋಮುವಾದ, ಅಪರಾಧ, ಮೂಲಭೂತವಾದ, ಭ್ರಷ್ಟಾಚಾರ, ಬಡತನ ಹಾಗೂ ನಿರುದ್ಯೋಗ ಸಮಸ್ಯೆಗಳನ್ನು ಎದುರಿಸುವುದಕ್ಕೆ ಪೂರಕವಾಗಿಲ್ಲ' ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ತಿಳಿಸಿದರು.

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ), ಸಿಐಟಿಯು, ರಾಜ್ಯ ಅಂಗನವಾಡಿ ಹಾಗೂ ಅಕ್ಷರ ದಾಸೋಹ ನೌಕರರ ಸಂಘಗಳ ಜಂಟಿ ಆಶ್ರಯದಲ್ಲಿ 'ಪೂರ್ವ ಪ್ರಾಥಮಿಕ ಮತ್ತು ಶಾಲಾ ಶಿಕ್ಷಣದ ಕುರಿತು ಹೊಸ ಶಿಕ್ಷಣ ನೀತಿ-2020 ಹೇಳುವುದೇನು?' ಎಂಬ ವಿಷಯದ ಬಗ್ಗೆ ಶನಿವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

'ಒಕ್ಕೂಟ ವ್ಯವಸ್ಥೆ ಇರುವ ಭಾರತದಲ್ಲಿ ರಾಜ್ಯಗಳ ಅಧಿಕಾರವನ್ನು ಈ ನೀತಿ ಮೊಟಕುಗೊಳಿಸಿದೆ. ಜನಸಾಮಾನ್ಯರ ಬದಲಿಗೆ ಕಾರ್ಪೊರೇಟ್ ಒಳಿತು ಬಯಸುವ ನೀತಿಯನ್ನು ಸಮಗ್ರ ಚರ್ಚೆಗೆ ಒಳಪಡಿಸಬೇಕು' ಎಂದು ಒತ್ತಾಯಿಸಿದರು.

ADVERTISEMENT

ಸಿಬಿಪಿಎಸ್ ನಿರ್ದೇಶಕಿ ಜೋತ್ಸ್ನಾ ಝಾ, 'ಶಿಕ್ಷಣ ನೀತಿಯಲ್ಲಿ ವಿಧೇಯತೆ ಅಗತ್ಯ. ಅಂಗನವಾಡಿ ಕೇಂದ್ರಗಳ ನೌಕರರ ಸಾಮರ್ಥ್ಯ ಹಾಗೂ ಕೌಶಲಗಳನ್ನು ಗುರುತಿಸಬೇಕು. ಇದಕ್ಕಾಗಿ ಅಂಗನವಾಡಿಗಳಲ್ಲಿ ಮೌಲ್ಯಮಾಪನ ಆಗಬೇಕು' ಎಂದರು.

'3ರಿಂದ 8 ವರ್ಷದೊಳಗಿನ ಮಕ್ಕಳಿಗೆ ಬಾಲ್ಯಾವಸ್ಥೆಯನ್ನು ವ್ಯವಸ್ಥಿತವಾಗಿ ರೂಪಿಸುವ ಅಗತ್ಯವಿದೆ. ನೂತನ ಶಿಕ್ಷಣ ನೀತಿಯನ್ನು ಸಾಮಾಜಿಕ ನ್ಯಾಯದ ಮಾರ್ಗದಲ್ಲಿ ಜಾರಿಗೊಳಿಸಲು ಸಾಧ್ಯವೇ' ಎಂದು ಸಾಹಿತಿ ಕೋಡಿ ರಂಗಪ್ಪ ಪ್ರಶ್ನಿಸಿದರು.

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ,'ಜಿಡಿಪಿಯ ಶೇ 6ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಿ, ಮುಂದುವರಿಸಬೇಕು. 'ಸ್ವತಂತ್ರ' ಶಾಲಾಪೂರ್ವ ಶಿಕ್ಷಣಕ್ಕೆ ಅವಕಾಶ ನೀಡಬಾರದು. ರಾಷ್ಟ್ರೀಯ ಶಿಕ್ಷಣ ನೀತಿಯ ಅಪಾಯಗಳ ವಿರುದ್ಧ ಎಲ್ಲ ಸಮಾನ ಮನಸ್ಕ ಸಂಘಟನೆಗಳು ಒಗ್ಗೂಡಬೇಕು' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.