ADVERTISEMENT

ಸಿವಿಲ್ ವ್ಯಾಜ್ಯ: ತನಿಖೆಗೆ ಕಾನೂನಿನ ಚೌಕಟ್ಟು

ಭೂವಿವಾದದ ದೂರುಗಳಲ್ಲಿ ಪೊಲೀಸರ ಕೆಲಸಗಳೇನು? * ಮಾರ್ಗಸೂಚಿ ಹೊರಡಿಸಿದ ಡಿಜಿಪಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 20:42 IST
Last Updated 29 ನವೆಂಬರ್ 2018, 20:42 IST

ಬೆಂಗಳೂರು: ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರು ಮೂಗು ತೂರಿಸುತ್ತಿರುವುದಕ್ಕೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಎಚ್ಚೆತ್ತಿರುವ ಪೊಲೀಸ್ ಇಲಾಖೆ, ಇಂತಹ ದೂರುಗಳನ್ನು ಕಾನೂನಿನ ಚೌಕಟ್ಟಿನೊಳಗೆ ನಿಭಾಯಿಸುವ ಬಗ್ಗೆ ಪೊಲೀಸರಿಗೆ ತಿಳಿವಳಿಕೆ ನೀಡಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಡಿಜಿಪಿ ನೀಲಮಣಿ ಎನ್‌.ರಾಜು, ‘ಪೊಲೀಸರು ಭೂ ವ್ಯಾಜ್ಯಗಳಲ್ಲಿ ಕೈ ಹಾಕಿ ಅಕ್ರಮವಾಗಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಆರೋಪಗಳಿವೆ. ಇದು ಇಲಾಖೆಯ ವರ್ಚಸ್ಸಿಗೆ ಮಸಿ ಬಳಿಯುವಂತಹ ವಿಚಾರ. ಹೀಗಾಗಿ, ಕೃಷಿ/ಕೃಷಿಯೇತರ ಭೂಮಿಗೆ ಸಂಬಂಧಿಸಿದ ದೂರುಗಳನ್ನು ನ್ಯಾಯ ಸಮ್ಮತವಾಗಿ ಇತ್ಯರ್ಥಪಡಿಸಲು ಮಾರ್ಗಸೂಚಿ ನೀಡಲಾಗಿದೆ. ಅವುಗಳನ್ನು ಮೀರಿದರೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.

‘ಕೃಷಿಭೂಮಿಗೆ ಸಂಬಂಧಿಸಿದಂತೆ ಜಿಪಿಎ, ಸೇಲ್ ಡೀಡ್ ಅಥವಾ ಯಾವುದೇ ಭೂಮಿಯನ್ನು ಖರೀದಿಸಲು ಮುಂಗಡವಾಗಿ ಹಣ ನೀಡಿದ ಬಗ್ಗೆ ಯಾರೇ ದಾಖಲೆಗಳನ್ನು ಹಾಜರುಪಡಿಸಿದರೂ, ಪೊಲೀಸರು ಅವುಗಳನ್ನು ಪುರಸ್ಕರಿಸಬಾರದು. ಇಂಥ ದಾಖಲೆಗಳನ್ನು ಸಲ್ಲಿಸುವ ವ್ಯಕ್ತಿಗೆ, ಕಂದಾಯ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಹಿಂಬರಹ ಬರೆದುಕೊಡಬೇಕು.’

ADVERTISEMENT

‘ಕೃಷಿ ಭೂಮಿಗೆ ಸಂಬಂಧಿಸಿದಂತೆ ಮಾಲೀಕತ್ವ ಮತ್ತು ಸ್ವಾಧೀನತೆಯ ವಿವಾದಗಳನ್ನು ವಿಚಾರಣೆ ಮಾಡುವ ಅಧಿಕಾರ ಇರುವುದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾತ್ರ. ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ.’

‘ಹಿಡುವಳಿ, ಗೇಣಿ ಸೇರಿದಂತೆ ಬೆಳೆ ಹಂಚಿಕೊಳ್ಳುವ ಯಾವುದೇ ವ್ಯವಸ್ಥೆಗೆ ರಾಜ್ಯದಲ್ಲಿ ಮಾನ್ಯತೆ ಇಲ್ಲ. ಹೀಗಾಗಿ, ಈ ವಿಚಾರಗಳಲ್ಲಿ ವಿವಾದಗಳು ಬಂದಾಗ ಪೊಲೀಸರು ಜಮೀನಿನ ಸ್ವಾಧೀನತೆಯ ಹಕ್ಕನ್ನು ಹೊಂದಿರುವ ಮಾಲೀಕನಿಗೇ ರಕ್ಷಣೆ ನೀಡಬೇಕು’ ಎಂದು ಡಿಜಿಪಿ ಸೂಚಿಸಿದ್ದಾರೆ.

**

ಇಲಾಖೆಯ ಮಾರ್ಗಸೂಚಿಗಳು

* ಭೂಮಿಯನ್ನು ಹೊಸದಾಗಿ ಸ್ವಾಧೀನ ಪಡೆಯಲು ಬಯಸುವ ವ್ಯಕ್ತಿಗೆ ರಕ್ಷಣೆ ನೀಡಬಾರದು. ಜಮೀನಿಗೆ ಸಂಬಂಧಿಸಿದ ಖಾತೆ ಬದಲು ಮಾಡಿಕೊಂಡು, ಪ್ರಮಾಣೀಕೃತ ಪ್ರತಿಯನ್ನು ಹಾಜರುಪಡಿಸುವಂತೆ ಸೂಚಿಸಬೇಕು.

* ಕೃಷಿ ಜಮೀನಿನ ಗಡಿಗಳ ವಿಚಾರದಲ್ಲಿ ವಿವಾದಗಳು ಬಂದಾಗ, ಆ ಜಮೀನಿನ ಮೋಜಣಿ ಕಾರ್ಯ ಮಾಡುವಂತೆ ತಹಶೀಲ್ದಾರ್‌ಗೆ ವಿನಂತಿಸಬೇಕು. ಮೋಜಣಿ ನಂತರ ಗಡಿಗಳನ್ನು ಗುರುತಿಸಿ, ಪಹಣಿಯನ್ನು ಪರಿಶೀಲಿಸಬೇಕು. ಜಮೀನಿನ ಸ್ವಾಧೀನತೆ ಹೊಂದಿದವರಿಗೇ ರಕ್ಷಣೆ ಕೊಡಬೇಕು.

* ಸುಳ್ಳು ದಾಖಲೆಗಳನ್ನು ಸಲ್ಲಿಸಿದರೆ, ಮುಲಾಜಿಲ್ಲದೆ ವಂಚನೆ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಅಸಲಿ ಪಹಣಿ ಸಲ್ಲಿಸಿದ ವ್ಯಕ್ತಿಗಳಿಗೆ ರಕ್ಷಣೆ ನೀಡಬೇಕು.

* ಜಮೀನು, ನಿವೇಶನ ಅಥವಾ ಕಟ್ಟಡಗಳನ್ನು ಕರಾರಿನ ಮೂಲಕ ಬಾಡಿಗೆ ಅಥವಾ ಭೋಗ್ಯಕ್ಕೆ ಪಡೆದು, ವಾಯಿದೆ ಮುಗಿದ ನಂತರ ಕರಾರನ್ನು ನವೀಕರಿಸದಿದ್ದರೆ ನಿಯಮಬಾಹಿರವಾಗುತ್ತದೆ. ಈ ಸಂಬಂಧ ನೈಜ ಮಾಲೀಕ ದೂರು ಕೊಟ್ಟರೆ, ಅನಧಿಕೃತ ಸ್ವಾಧೀನ ಅನುಭವ ಪಡೆಯುತ್ತಿರುವ ವ್ಯಕ್ತಿಗಳ ವಿರುದ್ಧ ಐಪಿಸಿ 447 ಅಡಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.