ಮಂಗಳೂರು: ಪೆರ್ಮುದೆಯ ವ್ಯಕ್ತಿ ಯೊಬ್ಬರನ್ನು ಅಪಹರಿಸಿ ರೂ. 6 ಕೋಟಿ ವಸೂಲಿ ಮಾಡುವ ಸಂಚು ರೂಪಿಸಿದ್ದ ಭೂಗತ ಪಾತಕಿ ಕೊರಗ ವಿಶ್ವನಾಥ ಶೆಟ್ಟಿಯ ಇಬ್ಬರು ಸಹಚರರನ್ನು ಬಜ್ಪೆ ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದಾರೆ. ಬಂಧಿತರಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪುತ್ರನೂ ಸೇರಿದ್ದಾನೆ.
ಕುದ್ರೋಳಿ ಅಳಿಕೆ ಮೇಲ್ಮನೆ ಕಂಪೌಂಡ್ ನಿವಾಸಿ ಶಂಕರ್ ಶೆಟ್ಟಿ ಎಂಬವರ ಪುತ್ರ ಮನೋಜ್ ಶೆಟ್ಟಿ (34) ಹಾಗೂ ನಗರದ ಪೊಲೀಸ್ ಲೇನ್‌ನ ಬ್ಲಾಕ್ 16 ಮನೆ ರೂಂ. ನಂ. 11ರ ಎಂ.ಗಂಗಾಧರ ರಾವ್ ಎಂಬವರ ಪುತ್ರ ದೀಪಕ್ ಜಿ.ರಾವ್ (27) ಬಂಧಿತರು. ಗಂಗಾಧರ ರಾವ್ ನಗರದಲ್ಲಿ ರಿಸರ್ವ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿದ್ದಾರೆ.
ಪ್ರಕರಣದ ಮತ್ತೊಬ್ಬ ಆರೋಪಿ ಕಿಶೋರ್ ಕಾವೂರು ಎಂಬಾತ ಪರಾರಿಯಾಗಿದ್ದಾನೆ. ಬಂಧಿತರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಗಳು ವಿದೇಶದಲ್ಲಿರುವ ಭೂಗತ ಪಾತಕಿ ವಿಶ್ವನಾಥ ಕೊರಗ ಶೆಟ್ಟಿಯ ಸಹಚರರು. ಕೊರಗ ಶೆಟ್ಟಿ ಸೂಚನೆ ಮೇರೆಗೆ ಇಲ್ಲಿ ಇವರು ಅಪರಾಧ ಕೃತ್ಯ ನಡೆಸುತ್ತಿದ್ದರು. ದೀಪಕ್ ರಾವ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಮೂರು, ಉಳ್ಳಾಲದಲ್ಲಿ ಒಂದು ಸೇರಿ ಆರಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ.
ಇನ್ನೂ ಹಲವು ಬೆದರಿಕೆ ಪ್ರಕರಣಗಳಲ್ಲಿ ಈತ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ವಿಚಾರಣೆ ಮುಂದುವರಿದಿದೆ. ಬೆದರಿಕೆ ಕರೆ, ಹಫ್ತಾ ವಸೂಲಿ ಮತ್ತಿತರ ಪ್ರಕರಣಗಳಲ್ಲಿ ಈತ ಪ್ರಮುಖ ಆರೋಪಿ. ಈತ ಪದವೀಧರನಾಗಿದ್ದು, ಠಾಣೆಗೆ ಕರೆಸಿ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಈತ ತನ್ನ ಚಾಳಿ ಬಿಟ್ಟಿರಲಿಲ್ಲ. ಕಿಶೋರ್ ಕಾವೂರು ಸಹ ನಾಲ್ಕೈದು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
ಘಟನೆ ಹಿನ್ನೆಲೆ: ದುಬೈಯಲ್ಲಿ ಜೋಸೆಫ್ ಡಿಸೋಜ ಎಂಬವರು ಕಂಪೆನಿ ನಡೆಸು ತ್ತಿದ್ದರು. ಆ ಕಂಪೆನಿಯಲ್ಲಿ ಪೆರ್ಮುದೆಯ ನಿವಾಸಿ ಜೇಸನ್ ನಝ್ರತ್ ಮ್ಯಾನೇಜರ್ ಆಗಿದ್ದರು. ಈ ಕಂಪೆನಿಗೆ ವಿನೋದ್ ಎಂಬವರು ರೂ 60 ಕೋಟಿ ಮೌಲ್ಯದ ಸಾಮಗ್ರಿ ಪೂರೈಕೆ ಮಾಡಿದ್ದರು. ಕಂಪೆನಿ ನಷ್ಟಕ್ಕೀಡಾದ ಹಿನ್ನೆಲೆಯಲ್ಲಿ ಜೋಸೆಫ್ ಕಂಪೆನಿಗೆ ಬೀಗ ಹಾಕಿ ಊರು ಬಿಟ್ಟಿದ್ದರು. ಕಂಪೆನಿ ಯಲ್ಲಿದ್ದ ಜೇಸನ್ ಸಹ ಊರಿಗೆ ಬಂದಿದ್ದರು.
ಹಣ ವಾಪಸ್ ಬಾರದ ಹಿನ್ನೆಲೆಯಲ್ಲಿ ವಿಶ್ವನಾಥ ಕೊರಗ ಶೆಟ್ಟಿ ಬಳಿ ವಿನೋದ್ ದೂರಿಕೊಂಡು ಹಣ ವಸೂಲಿ ಮಾಡಿಕೊಡುವಂತೆ ವಿನಂತಿಸಿದ್ದರು. ಕಂಪೆನಿಯ ಹಣವನ್ನು ಜೇಸನ್ ಹಿಡಿದುಕೊಂಡು ಹೋಗಿದ್ದಾನೆ ಎಂದೂ ತಿಳಿಸಿದ್ದರು.
ಕೊರಗ ಶೆಟ್ಟಿ ತನ್ನ ಸಹಚರರಾದ ದೀಪಕ್, ಮನೋಜ್ ಹಾಗೂ ಕಿಶೋರ್‌ಗೆ ಈ ವಿಷಯ ತಿಳಿಸಿ ಹಣ ವಸೂಲಿ ಮಾಡುವಂತೆ ತಿಳಿಸಿದ್ದ. ಪೆರ್ಮುದೆಯ ಕ್ರಾಸ್ ಪದವಿನ ಮನೆಯ ಬಳಿ ಜೇಸನ್ ಮನೆ ಇದ್ದು, ಆತ ವಿದೇಶದಿಂದ ಬರುವಾಗ ರೂ ಆರು ಕೋಟಿ ತಂದಿದ್ದಾನೆ.
ಅದನ್ನು ಆತನಿಂದ ವಸೂಲಿ ಮಾಡುವಂತೆ, ಕೊಡದಿದ್ದರೆ ಅಪಹರಿಸಿ ಕೊಲೆ ಮಾಡುವಂತೆ ಕೊರಗ ಶೆಟ್ಟಿ ಸೂಚಿಸಿದ್ದ. ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳು ಗುರುವಾರ ಜೇಸನ್ ಮನೆಗೆ ಹೋಗಿ ಆತನಿಂದ ಕೊರಗ ಶೆಟ್ಟಿಗೆ ಕರೆ ಮಾಡಿಸಿದ್ದರು.
ಆತನನ್ನು ಅಪಹರಿಸುವ ಹುನ್ನಾರ ನಡೆಸಿದ್ದರು. ಈ ವಿಚಾರ ತಿಳಿದ ಸ್ಥಳೀಯರು ಮನೆ ಸಮೀಪ ಜಮಾಯಿಸಿದ್ದರು. ಆರೋಪಿಗಳು ಸ್ಥಳದಿಂದ ಕಾಲು ಕಿತ್ತಿದ್ದರು. ಶುಕ್ರವಾರ ರಾತ್ರಿ 7 ಗಂಟೆಗೆ ಮತ್ತೆ ಅದೇ ಕಾರಿನಲ್ಲಿ ಮೂವರು ಆರೋಪಿಗಳು ಪೆರ್ಮುದೆಗೆ ಹೋಗಿದ್ದರು.
ಖಚಿತ ಮಾಹಿತಿಯ ಮೇರೆಗೆ ಬಜ್ಪೆ ಇನ್ಸ್‌ಪೆಕ್ಟರ್ ದಿನಕರ ಶೆಟ್ಟಿ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಕಿಶೋರ್ ಕಾರಿನೊಂದಿಗೆ ಪರಾರಿಯಾಗಿದ್ದ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ದಯಾನಂದ, ರಾಮಣ್ಣ, ರಾಜೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.