ADVERTISEMENT

ಅಬ್ಬಕ್ಕ ಉತ್ಸವ ಸರ್ಕಾರಿ ಕಾರ್ಯಕ್ರಮ: ಸಿಎಂ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 8:35 IST
Last Updated 13 ಫೆಬ್ರುವರಿ 2012, 8:35 IST

ಮಂಗಳೂರು:ವೀರರಾಣಿ ಅಬ್ಬಕ್ಕ ಉತ್ಸವವನ್ನು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಕಾರ್ಯಕ್ರಮವಾಗಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಭರವಸೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಸೋಮೇಶ್ವರ ಸಂಕೊಳಿಗೆ ಉಚ್ಚಿಲ ಬೋವಿ ಶಾಲೆ ಮೈದಾನದಲ್ಲಿ ಭಾನುವಾರ ನಡೆದ ಒಂಬತ್ತನೇ ವರ್ಷದ ವೀರ ರಾಣಿ ಅಬ್ಬಕ್ಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಉತ್ಸವಕ್ಕೆ ವರ್ಷದಲ್ಲಿ ನಿರ್ದಿಷ್ಟ ದಿನ ನಿಗದಿ ಮಾಡಬೇಕು. ಒಂದೋ ಸಮರ್ಪಣಾ ದಿನ ಅಥವಾ ಹುಟ್ಟಿದ ದಿನವನ್ನು ನಿಗದಿಪಡಿಸಬೇಕು. ಆಗ ಸರ್ಕಾರಿ ಕಾರ್ಯಕ್ರಮವನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ರಾಣಿ ಅಬ್ಬಕ್ಕ ಉತ್ಸವ ಸಮಿತಿಯವರು ಬೇಡಿಕೆಯ ಪಟ್ಟಿ ಹಿಡಿದುಕೊಂಡು ಬೆಂಗಳೂರಿಗೆ ನಿಯೋಗ ಬರಬೇಕು. ಅಲ್ಲಿ ಕುಳಿತು ಚರ್ಚಿಸಿ ನೆರವು ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಈ ಕಾರ್ಯಕ್ರಮದ ಮಾದರಿ ಬದಲಾಗಬೇಕು. ಮಹಿಳೆಯರೇ ಮುಂದಾಳತ್ವ ವಹಿಸಬೇಕು. ಆಗ ರಾಣಿ ಅಬ್ಬಕ್ಕನಿಗೆ ಹೆಚ್ಚು ಗೌರವ ಸಿಗುತ್ತದೆ. ಈ ಉತ್ಸವ ರಾಷ್ಟ್ರೀಯ ಉತ್ಸವವಾಗಿ ಬದಲಾಗಬೇಕು. ಮನೆ ಮನೆಗೆ ಹೋಗಿ ಮುಟ್ಟಬೇಕು ಎಂದು ಸಲಹೆ ನೀಡಿದರು.

`ಜಗತ್ತು ಬದಲಾಗುತ್ತಿದ್ದು, ಮನುಷ್ಯ ಮನುಷ್ಯತ್ವ ಕಳೆದುಕೊಳ್ಳುತ್ತಿದ್ದಾನೆ. ಮಕ್ಕಳಲ್ಲಿ ಸ್ವಾಭಿಮಾನ, ಸ್ವಂತಿಕೆ ಕಿಚ್ಚು ಮೂಡಿಸುವ ಬದಲು ಬದುಕಲು ಬೇಕಾದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಎಲ್ಲ ಶಕ್ತಿ ಧಾರೆ ಎರೆಯಲಾಗುತ್ತಿದೆ~ ಎಂದು ವಿಷಾದಿಸಿದರು.

ಈ ಸಂದರ್ಭ ಸಾಹಿತಿ ಲಲಿತಾ ರೈ ಅವರಿಗೆ ವೀರರಾಣಿ ಅಬ್ಬಕ್ಕ ಪ್ರಶಸ್ತಿ, ರಂಗ ಕಲಾವಿದೆ ಜಯಶೀಲ ಅವರಿಗೆ ಅಬ್ಬಕ್ಕ ಪುರಸ್ಕಾರವನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಪ್ರದಾನ ಮಾಡಿದರು. ಪ್ರಶಸ್ತಿ ರೂ 10 ಸಾವಿರ ಮೊತ್ತವನ್ನು ಒಳಗೊಂಡಿದೆ.

ಶಾಸಕ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲು, ವಿಧಾನಸಭೆ ಉಪಸಭಾಧ್ಯಕ್ಷ ಎನ್. ಯೋಗೀಶ್ ಭಟ್, ವಿಧಾನ ಪರಿಷತ್ ಸದಸ್ಯ ಗಣೇಶ ಕಾರ್ಣಿಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಬಾಲಭವನ ಸೊಸೈಟಿ ಅಧ್ಯಕ್ಷ ಸುಲೋಚನಾ ಜಿ.ಕೆ. ಭಟ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹಿಂ ಉಚ್ಚಿಲ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಜಿ.ಪಂ. ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್, ಸ್ವಾತಂತ್ರ್ಯ ಹೋರಾಟಗಾರ ಕರುಣಾಕರ ಉಚ್ಚಿಲ್, ಜಾನಪದ ವಿದ್ವಾಂಸ ಪ್ರೊ.ಎ.ವಿ. ನಾವಡ, ಜಿ.ಪಂ. ಸದಸ್ಯ ಸತೀಶ್ ಕುಂಪಲ, ತಾ.ಪಂ. ಅಧ್ಯಕ್ಷೆ ಭವ್ಯಾ ಗಂಗಾಧರ, ಲಯನ್ಸ್ ಜಿಲ್ಲಾ ಗವರ್ನರ್ ಕಿಶೋರ್ ಕುಮಾರ್, ಸ್ವಾಗತಾಧ್ಯಕ್ಷ ಕೆ. ಜಯರಾಮ ಶೆಟ್ಟಿ, ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಇದ್ದರು. ಈ ಸಂದರ್ಭ ವಿವಿಧ ಬೇಡಿಕೆ ಒಳಗೊಂಡ ಮನವಿ ಸಲ್ಲಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.