ADVERTISEMENT

ಅಬ್ಬರದ ಚುನಾವಣಾ ಪ್ರಚಾರಕ್ಕೆ ತೆರೆ

ಮನೆ, ಮನೆ ಪ್ರಚಾರಕ್ಕೆ ಮಾತ್ರವೇ ಅವಕಾಶ– ಕಟ್ಟುನಿಟ್ಟಿನ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಮೇ 2018, 6:38 IST
Last Updated 11 ಮೇ 2018, 6:38 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಅಬ್ಬರದಿಂದ ನಡೆಯುತ್ತಿದ್ದ ಚುನಾವಣಾ ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ 6 ಗಂಟೆಗೆ ತೆರೆಬಿದ್ದಿದೆ. ಶುಕ್ರವಾರ ಒಂದು ದಿನ ಮಾತ್ರ ಮನೆ, ಮನೆ ಪ್ರಚಾರಕ್ಕೆ ಅವಕಾಶವಿದ್ದು, ಚುನಾವಣಾ ಕಣದಲ್ಲಿರುವವರು ಮತ್ತು ಅವರ ಬೆಂಬಲಿಗರು ಕೊನೆಯ ಕ್ಷಣದ ಕಸರತ್ತುಗಳತ್ತ ಮುಖ ಮಾಡಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ಚುನಾವಣಾ ವೇಳಾ ಪಟ್ಟಿ ಪ್ರಕಟಿಸುವ ಬಹುದಿನಗಳ ಮೊದಲೇ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ಕಾವು ಏರಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಒಂದಾದ ಮೇಲೊಂದರಂತೆ ಯಾತ್ರೆಗಳನ್ನು ಆಯೋಜಿಸುವ ಮೂಲಕ ಪೈಪೋಟಿಯಲ್ಲಿ ಚುನಾವಣಾ ಪೂರ್ವ ಪ್ರಚಾರ ಆರಂಭಿಸಿದ್ದವು. ಚುನಾವಣೆ ಘೋಷಣೆಯಾದ ಬಳಿಕ ಪ್ರಚಾರದ ಕಾವು ಮತ್ತಷ್ಟು ಏರಿತ್ತು. ಕೆಲವು ದಿನಗಳಿಂದ ಈಚೆಗೆ ಅಬ್ಬರದ ಬಹಿರಂಗ ಸಭೆಗಳು, ರ‍್ಯಾಲಿ, ರೋಡ್‌ ಶೋಗಳಿಗೆ ಜಿಲ್ಲೆ ಸಾಕ್ಷಿಯಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಎಲ್ಲ ಅಭ್ಯರ್ಥಿಗಳ ಉಪಸ್ಥಿತಿಯಲ್ಲಿ ಬೃಹತ್‌ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಮಂಗಳೂರಿನಲ್ಲಿ ಒಮ್ಮೆ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದರೆ, ಇನ್ನೊಮ್ಮೆ ಪಕ್ಷದ ಪ್ರಣಾಳಿಕೆ ಬಿಡುಗಡೆಯಲ್ಲಿ ಭಾಗಿಯಾಗಿದ್ದರು. ಬಂಟ್ವಾಳದಲ್ಲಿ ಚುನಾವಣಾ ‍ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳೂರು, ಸುಳ್ಯ, ಬಂಟ್ವಾಳದಲ್ಲಿ ಪ್ರಚಾರ ಸಭೆಗಳಲ್ಲಿ ಭಾಗಿಯಾಗುವ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೂ ಮೊದಲೇ ಸಾಧನಾ ಸಮಾವೇಶದಲ್ಲಿ ಭಾಗಿಯಾಗುವ ಮೂಲಕ ಕೆಲವು ಕ್ಷೇತ್ರಗಳಲ್ಲಿ ಚುನಾವಣಾ ಪೂರ್ವ ಪ್ರಚಾರ ನಡೆಸಿದ್ದರು. ನಂತರ ರಾಹುಲ್‌ ಗಾಂಧಿಯವರ ಎಲ್ಲ ಸಭೆಗಳಲ್ಲಿ ಭಾಗಿಯಾಗಿ ಮತ ಯಾಚಿಸಿದ್ದರು. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವರು ಜಿಲ್ಲೆಗೆ ಬಂದು ಕಾಂಗ್ರೆಸ್ ಪರ ಮತ ಯಾಚಿಸಿದ್ದಾರೆ.

ಗೃಹ ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಹಲವು ಮಂದಿ ಕೇಂದ್ರ ಸಚಿವರು ಜಿಲ್ಲೆಯಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ಭಾಗಿಯಾಗಿದ್ದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಘಟಾನುಘಟಿ ನಾಯಕರು ಜಿಲ್ಲೆಯಾದ್ಯಂತ ಸಂಚರಿಸಿ ಕಮಲಕ್ಕೆ ಶಕ್ತಿ ತುಂಬಲು ಯತ್ನಿಸಿದ್ದಾರೆ.

ಕಾಂಗ್ರೆಸ್‌ ಮತ್ತು ಬಿಜೆಪಿ ಜಿಲ್ಲೆಯಲ್ಲಿ ಎಲ್ಲ ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಸಿಪಿಎಂ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಜೆಡಿಎಸ್‌ನ ಅಭ್ಯರ್ಥಿಗಳು ನಾಲ್ಕು ಕ್ಷೇತ್ರಗಳಲ್ಲಿ ಮತ್ತು ಅದರೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಎಸ್‌ಪಿ ಒಂದು ಕ್ಷೇತ್ರದಲ್ಲಿ ಕಣದಲ್ಲಿವೆ. ಆದರೆ, ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಯಾವುದೇ ಪ್ರಮುಖ ನಾಯಕರು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಿಲ್ಲ.

1,090 ಸಭೆ:

ಎಂಟು ಕ್ಷೇತ್ರಗಳಲ್ಲಿ ಒಟ್ಟು 58 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ವಿಭಾಗದ ಮಾಹಿತಿ ಪ್ರಕಾರ, ನೀತಿಸಂಹಿತೆ ಜಾರಿಯಾದ ದಿನದಿಂದ ಗುರುವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆಬೀಳುವವರೆಗೆ ಬಹಿರಂಗ ಸಭೆ, ಪಾದಯಾತ್ರೆ, ರೋಡ್‌ ಶೋ ಸೇರಿದಂತೆ 1,090 ಕಾರ್ಯಕ್ರಮಗಳು ನಡೆದಿವೆ.

ಕಣದಲ್ಲಿರುವ ಪ್ರಬಲ ಅಭ್ಯರ್ಥಿಗಳೆಲ್ಲರೂ ಗುರುವಾರ ಜಿದ್ದಿಗೆ ಬಿದ್ದವರಂತೆ ಬಹಿರಂಗ ಪ್ರಚಾರದಲ್ಲಿದ್ದರು. ಪ್ರತಿ ನಿಮಿಷವನ್ನೂ ಬಿಡದಂತೆ ಉಪಯೋಗಿಸಿಕೊಳ್ಳಲು ಯತ್ನಿಸಿದರು. ಸಂಜೆ 6 ಗಂಟೆಯಾಗುತ್ತಿದ್ದಂತೆ ಎಲ್ಲರೂ ಪ್ರಚಾರ ಅಂತ್ಯಗೊಳಿಸಿದರು. ಕೆಲವೆಡೆ ಸೆಕ್ಟರ್‌ ಅಧಿಕಾರಿಗಳು ಧಾವಿಸಿ ಪ್ರಚಾರ ಅಂತ್ಯಗೊಳಿಸುವಂತೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.