ADVERTISEMENT

ಅಮೆರಿಕದಲ್ಲಿ ಪ್ರಾಚೀನ ಬಾಹುಬಲಿ ಪ್ರತಿಮೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 10:35 IST
Last Updated 6 ಫೆಬ್ರುವರಿ 2012, 10:35 IST

ವೇಣೂರು: ಜಗತ್ತಿನಲ್ಲಿ ಬಾಹುಬಲಿಯ ಸಾವಿರಾರು ಪ್ರತಿಮೆಗಳು ಇವೆ. ಆದರೆ ಅತ್ಯಂತ ಪ್ರಾಚೀನ ಪ್ರತಿಮೆ ಇರುವುದು ಅಮೆರಿಕದಲ್ಲಿ ಎಂದು ಹಿರಿಯ ಸಾಹಿತಿ ನಾಡೋಜ ಡಾ. ಹಂಪ ನಾಗರಾಜಯ್ಯ ಕುತೂಹಲಕರ ಮಾಹಿತಿ ಒದಗಿಸಿದರು.

ವೇಣೂರಿನಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ- 2012 ಅಂಗವಾಗಿ ಭಾನುವಾರ ನಡೆದ ಭಾವೈಕ್ಯ ಸಮ್ಮೇಳನದಲ್ಲಿ ಮಾತನಾಡಿದರು.

1600 ವರ್ಷ ಹಿಂದಿನ 3.5 ಅಡಿ ಎತ್ತರದ ಲೋಹದ ಪ್ರತಿಮೆ ಇರುವುದು ನ್ಯೂಯಾರ್ಕ್ ಮೆಟ್ರೋಪಾಲಿಟನ್ ಮ್ಯೂಸಿಯಂನಲ್ಲಿ. ಬಾಹುಬಲಿಗೂ ಕರ್ನಾಟಕಕ್ಕೂ ನಿಕಟ ಸಂಬಂಧ ಇದೆ. ನಮ್ಮ ರಾಜ್ಯ ತವರು ಮನೆ ಇದ್ದಂತೆ. ಪ್ರಾಚೀನ ಪ್ರತಿಮೆ ರಾಜ್ಯದ ಯಾವುದೋ ಭಾಗದಲ್ಲಿ ನಿರ್ಮಾಣವಾಗಿರುವಂತಹುದು  ಎಂದು ಅವರು ತಿಳಿಸಿದರು.

ಭಾರತದ ಪ್ರಾಚೀನ ಬಾಹುಬಲಿ ಪ್ರತಿಮೆ ಇರುವುದು ಐಹೊಳೆಯಲ್ಲಿ. ಅದರ ಎತ್ತರ ಎಂಟು ಅಡಿ. ಆ ಪ್ರತಿಮೆಯ ಎದುರಿನಲ್ಲಿ ಪಾರ್ಶ್ವನಾಥ ಪ್ರತಿಮೆ ಇದೆ. ಈ ಪ್ರತಿಮೆಗಳು ಕ್ರಿ.ಶ. ಎಂಟನೇ ಶತಮಾನಕ್ಕೆ ಸೇರಿದ್ದು. ಬಾಹುಬಲಿ ಗುಹೆಯಿಂದ ಬಯಲಿಗೆ ಬಂದುದು ಕ್ರಿ.ಶ. 981ರಲ್ಲಿ. ಶ್ರವಣಬೆಳಗೋಳದಲ್ಲಿ ಚಾವುಂಡರಾಯ ಈ ಪ್ರತಿಮೆ ನಿರ್ಮಿಸಿದರು. ಕದಂಬರ ಕಾಲದಲ್ಲಿ ಜೈನ ಧರ್ಮ ರಾಜ ಧರ್ಮ ಆಗಿತ್ತು ಎಂದು ಅವರು ಪ್ರತಿಪಾದಿಸಿದರು.

ಬಾಹುಬಲಿ ತೀರ್ಥಂಕರ, ಬಲದೇವ, ವಾಸುದೇವ, ಪ್ರತಿ ವಾಸುದೇವ ಅಲ್ಲ. ನಮಗೆ ಲಾಂಛನವಾಗಿ ಪರಿಣಮಿಸಿದವರು ಬಾಹುಬಲಿ. 24 ತೀರ್ಥಂಕರರು ಒಬ್ಬರ ಪಡಿಯಚ್ಚು ಮತ್ತೊಬ್ಬರು. ಅವರದ್ದು ಚಲನಾಶೀಲ ವಿವರಣೆ ಅಲ್ಲ. ಇಲ್ಲಿ ಶಿಲ್ಪಿಗೆ ಹೆಚ್ಚು ಕೆಲಸ ಇಲ್ಲ. ಆದರೆ ಬಾಹುಬಲಿ, ಪಾರ್ಶ್ವನಾಥ ಪ್ರತಿಮೆ ನಿರ್ಮಾಣದಲ್ಲಿ ಶಿಲ್ಪಿಗೆ ಹೆಚ್ಚು ಅವಕಾಶ, ಕೆಲಸಗಳು ಸಿಗುತ್ತದೆ ಎಂದು ಅವರು ತಿಳಿಸಿದರು.

ಅಳದಂಗಡಿ ಅರಮನೆಯ ಅರಸ ಡಾ. ಪದ್ಮಪ್ರಸಾದ ಅಜಿಲ, ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ವಿ.ಧನಂಜಯ ಕುಮಾರ್, ಎಂ.ಕೆ.ವಿಜಯ ಕುಮಾರ್, ಡಾ.ಶ್ರೀಧರ ಕಂಬಳಿ, ಎರ್ಮೋಡಿ ಗುಣಪಾಲ ಜೈನ್, ಉದ್ಯಮಿ ರಾಜಕುಮಾರ್ ಜೈನ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.