ADVERTISEMENT

ಅವಳಿ ಕೊಲೆ: ಸಿಐಡಿ ತನಿಖೆಗೆ ಆಗ್ರಹಿಸಿ ಜಾಥಾ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಮಂಗಳೂರು:  ಕಾವೂರು ಸಮೀಪದ ಪಂಜಿಮೊಗರಿನಲ್ಲಿ ತಾಯಿ-ಮಗು ಕೊಲೆ ನಡೆದು ಎಂಟು ತಿಂಗಳು ಕಳೆದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧಿಸಲಾಗಿಲ್ಲ. ಹೀಗಾಗಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಸುಮಾರು ಎಂಟು ಕಿ.ಮೀ. ದೂರ ನಡಿಗೆ ಜಾಥಾ ನಡೆಯಿತು.

ಪಂಜಿಮೊಗರಿನಿಂದ ಆರಂಭವಾದ ಜಾಥಾ, ಕೂಳೂರು, ಕೊಟ್ಟಾರ ಚೌಕಿ, ಲಾಲ್‌ಬಾಗ್, ಪಿವಿಎಸ್, ಕೆ.ಎಸ್.ರಾವ್ ರಸ್ತೆ ಮೂಲಕ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿತು. ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಹಾಡಹಗಲೇ ನಡೆದ ಈ ಕೊಲೆ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಬೇಕು ಇಲ್ಲವೇ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕು. ಸ್ಥಳೀಯ ಪೊಲೀಸರ ಮೇಲೆ ನಂಬಿಕೆಯೇ ಇಲ್ಲವಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಪ್ರಕರಣದ ತನಿಖೆ ಸೂಕ್ತವಾಗಿ ನಡೆಯುತ್ತಿದೆ, ಆದರೂ ಸಿಐಡಿ ತನಿಖೆಗೆ ಒಪ್ಪಿಸುವ ಸಂಬಂಧ ತಾವು ಡಿಜಿಪಿ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಕಾರ್ಯದರ್ಶಿ ದಯಾನಂದ ಶೆಟ್ಟಿ, ಜನವಾದಿ ಮಹಿಳಾ ಸಂಘಟನೆಯ ಕಾರ್ಯದರ್ಶಿ ಸಾಜಿದಾ, ಡಿವೈಎಫ್‌ಐ ಪಂಜಿಮೊಗರು ಘಟಕದ ಅಧ್ಯಕ್ಷ ಬಶೀರ್ ಅಹ್ಮದ್, ಅನಿಲ್ ಡಿಸೋಜ, ಸೌಮ್ಯ ಡಿಸೋಜ, ನೌಶಾದ್ ಬಾವ, ಖಲೀಲ್ ಅಹ್ಮದ್ ಇತರರು ಜಾಥಾದಲ್ಲಿ ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.