ADVERTISEMENT

`ಆತ್ಮವಿಶ್ವಾಸ ತುಂಬುವ ಸನ್ಮಾನ ಶ್ಲಾಘನಾರ್ಹ'

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 10:20 IST
Last Updated 22 ಜುಲೈ 2013, 10:20 IST

ಮಂಗಳೂರು: ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಇಳಿ ವಯಸ್ಸಿನಲ್ಲಿ ಅವರಿಗೆ ಆತ್ಮವಿಶ್ವಾಸ ತುಂಬಿದಂತಾಗುತ್ತದೆ. ಯುವಜನತೆ ತಮ್ಮನ್ನು ಆದರಿಸುತ್ತಿದ್ದಾರೆ ಎನ್ನುವ ತೃಪ್ತಿಯ ಭಾವನೆ ಅವರಲ್ಲಿ ಮೂಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.

ಹಿರಿಯ ಸಾಧಕರ ಮನೆಗೆ ತೆರಳಿ ಗುರುವಂದನೆ ಸಲ್ಲಿಸುವ ವಿಶೇಷ ಕಾರ್ಯಕ್ರಮ ಸಂಸ್ಕಾರ ಭಾರತಿ ವತಿಯಿಂದ ಭಾನುವಾರ ನಡೆಯಿತು. ಅಶೋಕ ನಗರದ ಸರೋಜಾ ಮೋಹನ್ ದಾಸ್ ಅವರ ಮನೆಯಲ್ಲಿ ಸನ್ಮಾನ ಮಾಡಿದ ಬಳಿಕ ಗಣೇಶ್ ಕಾರ್ಣಿಕ್ ಮಾತನಾಡಿದರು.

ಸಂಸ್ಕಾರ ಭಾರತಿ 65 ವರ್ಷಕ್ಕಿಂತ ಮೇಲ್ಪಟ್ಟ ಸಾಧಕರನ್ನೇ ಆಯ್ಕೆ ಮಾಡಿ ಗೌರವಿಸುತ್ತಿದೆ. ಅಷ್ಟೇ ಅಲ್ಲ ಸಮಾಜದಲ್ಲಿ ಹೆಚ್ಚು ಪ್ರಸಿದ್ಧಿಗೆ ಬಾರದೆ, ತೆರೆ ಮರೆಯಲ್ಲಿಯೆ ಸಾಧನೆ ಮಾಡಿದವರನ್ನು ಗೌರವಿಸುವ ಪರಿಪಾಠ ಇಟ್ಟುಕೊಂಡಿದೆ. ಇದು ಶ್ಲಾಘನಾರ್ಹ ಎಂದು ಹೇಳಿದರು.

ಮಾಜಿ ಶಾಸಕ ಯೋಗೀಶ್ ಭಟ್ ಮಾತನಾಡಿ, ಮನೆಗೆ ತೆರಳಿ ಸನ್ಮಾನ ನೀಡುವುದರಿಂದ ಹಿರಿಯ ಸಾಧಕರಿಗೆ ಸಮಾಜದ ಜತೆಗೆ ಇನ್ನಷ್ಟು ಆಪ್ತ ಭಾವನೆ ಮೂಡುತ್ತದೆ. ಗುರುವಂದನೆಯ ಪರಂಪರೆಯನ್ನು ಈ ರೀತಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವ ಸಂಸ್ಕಾರ ಭಾರತಿ ಕೆಲಸ ಅನುಕರಣೀಯ ಎಂದರು.

ಸಂಸ್ಕಾರ ಭಾರತಿ ತಂಡವು ಬೆಳಿಗ್ಗೆ 7.30ಕ್ಕೆ ಕಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ ಕೊರಗಪ್ಪ ಸುವರ್ಣ ಅವರ ಮನೆಗೆ ತೆರಳಿತು. ಶಾಸಕ ಕ್ಯಾ. ಗಣೇಶ್ ಕಾರ್ಣಿಕ್ ಮತ್ತು ಮಾಜಿ ಸಚಿವ ಯೋಗಿಶ್ ಭಟ್ ಹಿರಿಯರಾದ ಕೊರಗಪ್ಪ ಸುವರ್ಣ ಅವರನ್ನು ಸನ್ಮಾನಿಸಿದರು. 82 ವರ್ಷದ ಕೊರಗಪ್ಪ ಸುವರ್ಣ ಗೋಡಂಬಿ ಕಾರ್ಮಿಕರು ಮತ್ತು ಬೀಡಿ ಕಾರ್ಮಿಕರ ಕ್ಷೇತ್ರದಲ್ಲಿ ಕೆಲಸ ಮಾಡಿದವರು.

ಸನ್ಮಾನ ಸ್ವೀಕರಿಸಿದ ಇತರ ಹಿರಿಯರು:  ಐದನೇ ವಯಸ್ಸಿನಲ್ಲಿಯೇ ಸಂಗೀತ ಶಿಕ್ಷಣ ಪಡೆದ ಕೆ. ಸರೋಜ ಮೋಹನ್ ದಾಸ್ ಅಶೋಕ್ ನಗರ ನಿವಾಸಿ. ಮೈಸೂರು ದಸರಾ ದರ್ಬಾರ್‌ನಲ್ಲಿ ಕಚೇರಿಗಳನ್ನು ನೀಡಿದ ಅವರು ಆಕಾಶವಾಣಿ ಕಲಾವಿದರಾಗಿಯೂ ನಾಡಿನಾದ್ಯಂತ ಪರಿಚಿತರು. ಮತ್ತೊಬ್ಬ ಸಾಧಕ ಭೋಜ ಪೂಜಾರಿ ಜಪ್ಪು ವೃತ್ತಿಯಲ್ಲಿ ಟೈಲರ್ ಆದರೂ ಅವರ ವ್ಯಕ್ತಿತ್ವಕ್ಕೆ ವರ್ಚಸ್ಸು ನೀಡಿದ್ದು ದೈವ ಪಾತ್ರಿ ಕಾಯಕ. ಎಕ್ಕೂರಿನ ನಿವಾಸಿ ನೋಣಯ್ಯ ಮಾಸ್ಟರ್ ಕುಸ್ತಿ ಪಟುವಾಗಿ ನೂರಾರು ಮಂದಿಗೆ ಮಾರ್ಗದರ್ಶನ ನೀಡಿದ್ದಾರೆ. 78ರ ಹರೆಯದ ನೋಣಯ್ಯ ಆರು ದಶಕಗಳಿಂದ ಈ ಕ್ಷೇತ್ರದಲ್ಲಿ ಶಿಕ್ಷಕರಾಗಿ ದುಡಿದಿದ್ದಾರೆ.

ಸಂಸ್ಕಾರ ಭಾರತಿ ಮಂಗಳೂರು ಘಟಕದ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್, ಪ್ರಾದೇಶಿಕ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಭರನಾಟ್ಯ ಶಿಕ್ಷಕಿ ಶ್ರೀಲತಾ ನಾಗರಾಜ್, ನಾಗರಾಜ್ ಶೆಟ್ಟಿ, ಸದಸ್ಯರಾದ ರವಿ ಅಲೆವೂರಯ, ಸುಧಾಕರ ರಾವ್ ಪೇಜಾವರ, ದಯಾನಂದ ಕತ್ತಲ್‌ಸಾರ್, ಶ್ರೀಪತಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.