ADVERTISEMENT

ಆದೇಶ ಧಿಕ್ಕರಿಸಿ ಮುಂದುವರಿದ ಕಲ್ಲುಕ್ವಾರಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 8:35 IST
Last Updated 7 ಜನವರಿ 2012, 8:35 IST

ಮುಡಿಪು: ಇರಾ ಹಾಗೂ ಮಂಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿನಡ್ಕದಲ್ಲಿ ನಡೆಯುತ್ತಿರುವ ಕೆಂಪುಕಲ್ಲು ಕ್ವಾರಿ ಕಾಮಗಾರಿ ಸ್ಥಗಿತಕ್ಕೆ ತಹಸೀಲ್ದಾರ್ ನೀಡಿದ ಆದೇಶವನ್ನು ಧಿಕ್ಕರಿಸಿ ಶುಕ್ರವಾರವೂ ಕಲ್ಲುಕ್ವಾರಿ ಮುಂದುವರಿದಿದೆ.

ಕಲ್ಲುಕ್ವಾರಿ ಅಕ್ರಮವಾಗಿದ್ದು, ಇದನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಇರಾ ಪಂಚಾಯಿತಿ ದೂರು ನೀಡಿದ ಪರಿಣಾಮ ಬಂಟ್ವಾಳ ತಹಸೀಲ್ದಾರ್ ಅವರು ಗುರುವಾರ ಸ್ಥಳಕ್ಕಾಗಮಿಸಿ ದಾಖಲೆಗಳನ್ನು ನೀಡದೆ ಕಾಮಗಾರಿ ಆರಂಭಿಸಬಾರದೆಂದು ಆದೇಶ ನೀಡಿದ್ದರು.

ಸುಮಾರು ಮೂರು ಎಕರೆ ವ್ಯಾಪ್ತಿಯಲ್ಲಿ ಮಂಚಿ ಹಾಗೂ ಇರಾ ಪಂಚಾಯಿತಿ ವ್ಯಾಪ್ತಿಯ ಕಂಚಿನಡ್ಕದಲ್ಲಿ 15 ವರ್ಷಗಳಿಂದ ಕೆಲವು ಖಾಸಗಿ ವ್ಯಕ್ತಿಗಳ ಮಾಲೀಕತ್ವದಲ್ಲಿ ಈ ಕೆಂಪು ಕಲ್ಲಿನ ಕ್ವಾರಿಯು ನಡೆಯುತ್ತಿದೆ ಎನ್ನಲಾಗಿದೆ.
ಕ್ವಾರಿ ನಡೆಯುತ್ತಿರುವ ಪ್ರದೇಶ ಸರ್ಕಾರಿ ಜಾಗವಾದರೂ ಇದರ ಮಾಲೀಕರು ಸ್ಥಳೀಯ ಪಂಚಾಯಿತಿಯಿಂದಾಗಲೀ ಅಥವಾ ಇತರ ಇಲಾಖೆಯಿಂದಾಗಲೀ ಅನುಮತಿ ಪಡೆದಿಲ್ಲ. ಮಾತ್ರವಲ್ಲದೆ ಕಂಚಿನಡ್ಕದ ಈ ಕ್ವಾರಿ ನಡೆಯುತ್ತಿರುವ ಪ್ರದೇಶದಲ್ಲಿ  ಈಗ ಬೃಹತ್ ಹೊಂಡಗಳು ನಿರ್ಮಾಣವಾಗಿದ್ದು, ಅಪಾಯಕಾರಿಯಾಗಿದೆ ಎಂದು ಇರಾ ಗ್ರಾ.ಪಂ. ಅಧ್ಯಕ್ಷ  ರಜಾಕ್ ಕುಕ್ಕಾಜೆ ಆರೋಪಿಸಿ ಬಂಟ್ವಾಳ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಗುರುವಾರ ಬಂಟ್ವಾಳ ತಹಶೀಲ್ದಾರ್ ನಾರಾಯಣ ರಾವ್ ಹಾಗೂ  ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದರು. ಅಲ್ಲದೆ ತಹಸೀಲ್ದಾರ್ ಅವರು ಕಲ್ಲು ಕ್ವಾರಿಗೆ ಸಂಬಂಧಿಸಿದ ದಾಖಲೆಗಳನ್ನು ವಿಚಾರಣೆಗಾಗಿ ನೀಡುವವರೆಗೆ ಕ್ವಾರಿ ಕಾಮಗಾರಿ ನಡೆಸಬಾರದೆಂದು ಆದೇಶ ನೀಡಿದ್ದರು.

ಶುಕ್ರವಾರ ಸಂಜೆ ಸ್ಥಳಕ್ಕೆ ಆಗಮಿಸಿದ ಮಂಚಿ ಹಾಗೂ ಇರಾ ಪಂಚಾಯಿತಿಯ ಗ್ರಾಮ ಲೆಕ್ಕಿಗರು ನೋಟಿಸ್ ನೀಡಿ ಕ್ವಾರಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯನ್ನು ಸ್ಥಗಿತಗೊಳಿಸಿದರು ಎನ್ನಲಾಗಿದೆ.

ಕಠಿಣ ಕಾನೂನು ಕ್ರಮ: ಶನಿವಾರವೂ ಕೂಡಾ ಕಾಮಗಾರಿ ಮುಂದುವರಿಸಿದರೆ ಪೊಲೀಸರೊಂದಿಗೆ ಅಲ್ಲಿಗೆ ತೆರಳಿ ಅಲ್ಲಿರುವ ಯಂತ್ರಗಳನ್ನು ಮುಟ್ಟುಗೋಳು ಹಾಕಲಾಗುವುದು ಎಂದು  ತಹಸೀಲ್ದಾರ್ ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.