ADVERTISEMENT

ಆಯ್ಕೆ ಆಧಾರಿತ ಕ್ರೆಡಿಟ್ ಪದ್ಧತಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 10:15 IST
Last Updated 17 ಜೂನ್ 2011, 10:15 IST

ಕೊಣಾಜೆ (ಮಂಗಳೂರು): ಈ ಸಾಲಿನ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಪದವಿಯಲ್ಲಿ ಆಯ್ಕೆ ಆಧಾರಿತ ಕ್ರೆಡಿಟ್ ಪದ್ಧತಿ ಜಾರಿಗೊಳಿಸಲು ಮಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ.

ವಿವಿಯ ಆಡಳಿತ ಸೌಧದ ಹೊಸ ಸೆನೆಟ್ ಸಭಾಂಗಣದಲ್ಲಿ ಗುರುವಾರ ನಡೆದ ಶೈಕ್ಷಣಿಕ ಮಂಡಳಿಯ 2011-2012ನೇ ಸಾಲಿನ ಪ್ರಥಮ ಸಾಮಾನ್ಯ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.

ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ಮಾತನಾಡಿ, ಈ ಪದ್ಧತಿ ವಿದ್ಯಾರ್ಥಿಗಳಿಗೆ ಕಡ್ಡಾಯ. ಮೂರು ವರ್ಷದ ಎಂಸಿಎ ವಿಭಾಗಕ್ಕೆ  ವಿನಾಯಿತಿ ನೀಡಲಾಗಿದೆ. ಮುಂದಿನ ವರ್ಷದಿಂದ ಆಯ್ಕೆ ಆಧಾರಿತ ಕ್ರೆಡಿಟ್ ಪದ್ಧತಿ ಜಾರಿಗೆ ತರಬೇಕು ಎಂದು ಕಳೆದ ವರ್ಷ ಅಕಾಡೆಮಿಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಸರ್ಕಾರದಿಂದ ಬುಧವಾರ ಇದಕ್ಕೆ ಒಪ್ಪಿಗೆ ಸಿಕ್ಕಿದೆ ಎಂದರು.

ನಾಲ್ಕು ಸೆಮಿಸ್ಟರ್ ಇರುವ ಎರಡು ವರ್ಷದ ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ವಿವಿ ಕ್ಯಾಂಪಸ್ ಹಾಗೂ ಸ್ನಾತಕೋತ್ತರ ಪದವಿ ಇರುವ 21 ಕಾಲೇಜುಗಳಲ್ಲಿ ಆಯ್ಕೆ ಆಧಾರಿತ ಕ್ರೆಡಿಟ್ ಪದ್ಧತಿ ಅನುಷ್ಠಾನಕ್ಕೆ ಬರಲಿದೆ ಎಂದರು.

ಹೊಸ ಪಠ್ಯಕ್ರಮ ಸಿದ್ಧಗೊಂಡಿದ್ದು, ಆಯ್ಕೆ ಆಧಾರಿತ ಪಠ್ಯ ವಿಷಯಗಳನ್ನು ಗುರುತಿಸಲಾಗಿದೆ. ಮಾಹಿತಿ ಪುಸ್ತಕವನ್ನೂ ತಯಾರಿಸಲಾಗಿದೆ. ಮೂರನೇ ಸೆಮಿಸ್ಟರ್‌ನ ಮೊದಲನೆಯ ಅಥವಾ ಕೊನೆಯ ಪತ್ರಿಕೆ ಆಯ್ಕೆ ಆಧಾರಿತ ಆಗಿರುತ್ತದೆ. ಪ್ರತಿ ಶನಿವಾರ ಆಧಾರಿತ ಪಠ್ಯಕ್ರಮದ ತರಗತಿ ಇರುತ್ತದೆ. ವಿದ್ಯಾರ್ಥಿಗಳಿಗೆ ಈ ಪದ್ಧತಿ ಕಡ್ಡಾಯ. ಎಲ್ಲರಿಗೂ ಒಂದೇ ದಿನ ಪರೀಕ್ಷೆ ನಡೆಯಲಿದೆ ಎಂದರು.

2008ರಲ್ಲಿ ಮೈಸೂರು ವಿವಿ ಈ ಪದ್ಧತಿ ಜಾರಿಗೆ ತಂದಿದೆ. ಅಲ್ಲಿ ಪ್ರಸ್ತುತ ನಾಲ್ಕು ವಿಷಯಗಳಲ್ಲಿ ಆಯ್ಕೆ ಆಧಾರಿತ ಕ್ರೆಡಿಟ್ ಪದ್ಧತಿಗಳು ಇವೆ. ಮಂಗಳೂರು ವಿವಿ, ತುಮಕೂರು ವಿವಿ ಹಾಗೂ ಕುವೆಂಪು ವಿವಿಯಲ್ಲಿ ಈ ಶೈಕ್ಷಣಿಕ ವರ್ಷದಿಂದ ಈ ಪದ್ಧತಿ ಜಾರಿಗೆ ಬರುತ್ತಿದೆ ಎಂದರು.

ಕಾನೂನು- ಶಿಸ್ತು ಪಾಲಿಸಿ: ವಿವಿ ವ್ಯಾಪ್ತಿಯ ಸಂಯುಕ್ತ ಕಾಲೇಜುಗಳಲ್ಲಿ ಈ ವರ್ಷ ಬಿಬಿಎಂ ಹಾಗೂ ಬಿಕಾಂಗೆ ಒತ್ತಡ ಹೆಚ್ಚಿದೆ. ಹೆಚ್ಚು ವಿದ್ಯಾರ್ಥಿಗಳ ಪ್ರವೇಶಾವಕಾಶಕ್ಕೆ ಕಾಲೇಜುಗಳ ವಿನಂತಿಸಿವೆ. ಶೇ 10ರಷ್ಟು ಹೆಚ್ಚುವರಿ ಸೇರ್ಪಡೆಗೆ ತಾವು ಅವಕಾಶ ನೀಡಬಹುದು. ಅದಕ್ಕೂ ಹೆಚ್ಚು ಬೇಕಿದ್ದರೆ ಕಾಲೇಜುಗಳಿಗೆ ಸಮಿತಿ ಕಳುಹಿಸಿ ಅಲ್ಲಿನ ಮೂಲಸೌಕರ್ಯ, ಉಪನ್ಯಾಸಕರ ಲಭ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಅದರ ಬಳಿಕ ಸೇರ್ಪಡೆಗೆ ಅವಕಾಶ ನೀಡಲಾಗುತ್ತದೆ. ವಿವಿಯಿಂದ ಅನುಮತಿ ಬರುವ ವರೆಗೂ ಹೆಚ್ಚುವರಿ ವಿದ್ಯಾರ್ಥಿಗಳ ಸೇರ್ಪಡೆ ಮಾಡಿಕೊಳ್ಳಬೇಡಿ. ಕಾನೂನು ಮತ್ತು ಶಿಸ್ತು ಪಾಲಿಸಿ ಎಂದು ಕುಲಪತಿ ವಿನಂತಿಸಿದರು.

ಸರ್ಕಾರಿ ಕಾಲೇಜುಗಳಲ್ಲಿ ಹೆಚ್ಚುವರಿ ವಿಭಾಗ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಕೆಲವು  ಕಾಲೇಜುಗಳಲ್ಲಿ ಅಧ್ಯಾಪಕರ ಹಾಗೂ ಕೊಠಡಿ ಕೊರತೆ ಇದೆ. ಈ ಬಗ್ಗೆ ಸಮಿತಿ ಕಳುಹಿಸಿ ಪರಿಶೀಲನೆ ನಡೆಸಲಾಗುವುದು. ಅಲ್ಲಿ ವ್ಯವಸ್ಥೆ ಇದ್ದರೆ ಹೆಚ್ಚುವರಿ ವಿಭಾಗ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಮಂಗಳೂರು ವಿವಿಯ ಎರಡು ಘಟಕ ಕಾಲೇಜುಗಳಾದ ಮಂಗಳೂರು ವಿವಿ ಕಾಲೇಜಿನಲ್ಲಿ ಈ ವರ್ಷದಿಂದ ಎಂಎಸ್‌ಸಿ ರಸಾಯನಶಾಸ್ತ್ರ, ಮುಂದಿನ ವರ್ಷದಿಂದ ಬಿ.ಎ. ಎಲೆಕ್ಟ್ರಾನಿಕ್ಸ್ ವಿಭಾಗ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಈ ವರ್ಷದಿಂದ ಬಿ.ಎ. ಟೂರಿಸಂ ಮ್ಯಾನೇಜ್‌ಮೆಂಟ್, ಡಿಪ್ಲೊಮಾ ಇನ್ ಆನಿಮೇಷನ್ ವಿಭಾಗ ಆರಂಭಿಸಲಾಗುತ್ತಿದೆ ಎಂದರು.ಕುಲಸಚಿವ ಪ್ರೊ. ಚಿನ್ನಪ್ಪ ಗೌಡ, ಪರೀಕ್ಷಾಂಗ ಕುಲಸಚಿವ ಪಿ.ಎಸ್. ಯಡಪಡಿತ್ತಾಯ ಸಭೆಯಲ್ಲಿ ಇದ್ದರು.

ಆಯ್ಕೆ ಆಧಾರಿತ ಕ್ರೆಡಿಟ್ ಪದ್ಧತಿ ಪ್ರಕಾರ ಕಲಾವಿಭಾಗದ ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ವಾಣಿಜ್ಯ ಅಥವಾ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಬಹುದು. ಉದಾಹರಣೆಗೆ ಕಲಾ ವಿಭಾಗದ ಆಧುನಿಕ ಕನ್ನಡ ಸಾಹಿತ್ಯ ಪಠ್ಯವನ್ನು ವಿಜ್ಞಾನ ವಿದ್ಯಾರ್ಥಿಗಳೂ, ವಿಜ್ಞಾನ ವಿಭಾಗದ ಸಾಮಾನ್ಯ ಭೌತಶಾಸ್ತ್ರ ಪಠ್ಯವನ್ನು ಯಾವುದೇ ಕಲಾ ವಿದ್ಯಾರ್ಥಿಗಳು ಕಲಿಯಬಹುದು. ಮಂಗಳೂರು ವಿವಿ ಕ್ಯಾಂಪಸ್‌ನ ಸ್ನಾತಕೋತ್ತರ ವಿದ್ಯಾರ್ಥಿಗಳು ವಿವಿ ವ್ಯಾಪ್ತಿಯ ಸ್ನಾತಕೋತ್ತರ ಕಾಲೇಜಿನಲ್ಲೂ, ಅಲ್ಲಿಯ ವಿದ್ಯಾರ್ಥಿಗಳು ವಿವಿ ಕ್ಯಾಂಪಸ್‌ಗೂ ಬಂದು ತರಗತಿಯಲ್ಲಿ ಹಾಜರಾಗಬಹುದು.

20ರೊಳಗೆ ಪದವಿ ಫಲಿತಾಂಶ

ADVERTISEMENT

ಮಂಗಳೂರು ವಿವಿಯ ಎಲ್ಲಾ ಪದವಿಯ ಫಲಿತಾಂಶ ಇದೇ 20ರೊಳಗೆ ಪ್ರಕಟಗೊಳ್ಳಲಿದೆ ಎಂದು ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ತಿಳಿಸಿದರು.

ಬಿಎ, ಬಿಎಸ್‌ಸಿ, ಬಿಎಡ್ ಫಲಿತಾಂಶ ಬುಧವಾರ, ಗುರುವಾರ ಎಲ್‌ಎಲ್‌ಬಿ, ಬಿಸಿಎ, ಬಿಎಸ್‌ಡಬ್ಲ್ಯೂ, ಶುಕ್ರವಾರ ಬಿಕಾಂ, 20ರಂದು ಬಿಬಿಎಂನ ಆರನೇ ಸೆಮಿಸ್ಟರ್ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. 2 ಮತ್ತು 4ನೇ ಸೆಮಿಸ್ಟರ್‌ನ ಫಲಿತಾಂಶ 21 ಮತ್ತು 22ರಂದು ಪ್ರಕಟಿಸಲಾಗುವುದು ಎಂದರು.

ಆಗಸ್ಟ್ ಒಂದರೊಳಗೆ ಸ್ನಾತಕೋತ್ತರ ತರಗತಿಗಳನ್ನು ಆರಂಭಿಸಬೇಕು ಎಂಬ ಗುರಿ ಇದೆ. ಇದೇ 25ರೊಳಗೆ ಸ್ನಾತಕೋತ್ತರ ಸೇರ್ಪಡೆಗೆ ಅರ್ಜಿ ಆಹ್ವಾನಿಸಲಾಗುವುದು. ಮಾಹಿತಿ ಪುಸ್ತಕ ಬುಧವಾರ ತಯಾರಾಗಿದೆ ಎಂದು ತಿಳಿಸಿದರು.

ಪಾಠ ಹೊರೆ: `ವಿಚಿತ್ರ~ ವಿನಂತಿ
ಪ್ರಾಧ್ಯಾಪಕರು ವಾರಕ್ಕೆ 40 ಗಂಟೆ ಪಠ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದುಯುಜಿಸಿ ತಿಳಿಸಿದೆ. ರಾಜ್ಯ ಸರ್ಕಾರ 14 ಗಂಟೆ ಎಂದು ತಿಳಿಸಿದೆ. ನಮಗೆ ತರಗತಿ ತೆಗೆದುಕೊಳ್ಳುವುದು ಸ್ವಲ್ಪ ಮಟ್ಟಿನ ಹೊರೆಯಾಗುತ್ತದೆ ಎಂದು ತೆಂಕನಿಡಿಯೂರು ಸರ್ಕಾರಿ ಕಾಲೇಜಿನ ಯೋಗಾನಂದ `ವಿಚಿತ್ರ~ ವಿನಂತಿ ಮುಂದಿಟ್ಟರು.

ಇದರಿಂದ ಕೋಪಗೊಂಡ ಪ್ರೊ.ಟಿ.ಸಿ. ಶಿವಶಂಕರಮೂರ್ತಿ, `ಇಂತಹ ಭಾವನೆ ಬಿಡಿ. ಕಾನೂನಿನಲ್ಲಿ ತಿಳಿಸಿದಷ್ಟೇ ಕೆಲಸ ಮಾಡುತ್ತೇನೆ ಎಂಬ ಮನೋಭಾವ ಸಲ್ಲ. ಮಕ್ಕಳಿಗೆ ಪಾಠ ಮಾಡುವುದು ದೊಡ್ಡ ಹೊರೆಯ ಕೆಲಸ ಎಂದು ಭಾವಿಸಬಾರದು. ಕೆಲವು ಉಪನ್ಯಾಸಕರು ತಮ್ಮ ಅವಧಿಗಿಂತ ಹೆಚ್ಚಿನ ಅವಧಿಯ ಕೆಲಸ ಮಾಡುತ್ತಾರೆ.

ಉಪನ್ಯಾಸಕರ ಕೊರತೆ ಇದ್ದಾಗ ಜವಾಬ್ದಾರಿ ವಹಿಸಿಕೊಂಡು ಎಲ್ಲಾ ಪಠ್ಯ ಮುಗಿಸುತ್ತಾರೆ. ಅಂತಹ ಮನೋಭಾವ ಬೆಳೆಸಿಕೊಳ್ಳಿ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.