ADVERTISEMENT

ಆರೋಪಿಗಳ ಬಂಧನಕ್ಕೆ ಆಗ್ರಹ

ಬಸ್ ಚಾಲಕನ ಮೇಲೆ ಹಲ್ಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 9:16 IST
Last Updated 5 ಏಪ್ರಿಲ್ 2013, 9:16 IST

ಪುತ್ತೂರು: `ಸವಣೂರು ಸಮೀಪದ ಪರಣೆಯಲ್ಲಿ ಕರ್ತವ್ಯ ನಿರತ ಕೆಎಸ್‌ಆರ್‌ಟಿಸಿ ಬಸ್ಸು ಚಾಲಕನಿಗೆ ಹಲ್ಲೆ ನಡೆಸಿರುವ ಆರೋಪಿಗಳನ್ನು 8 ದಿನಗಳ ಒಳಗಾಗಿ ಬಂಧಿಸಲು ಸಾಧ್ಯವಾಗದಿದ್ದಲ್ಲಿ ನಾವೇ ಹಿಡಿದು ಪೊಲೀಸರಿಗೆ ಒಪ್ಪಿಸುತ್ತೇವೆ' ಎಂದು ಬಿಎಂಎಸ್ ಅಟೊ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವ ಅಧ್ಯಕ್ಷ ಡಾ. ಪ್ರಸಾದ್ ಭಂಡಾರಿ ಎಚ್ಚರಿಸಿದರು.

ಗುರುವಾರ ಸವಣೂರು ಸಮೀಪದ ಪರಣೆಯಲ್ಲಿ ಕರ್ತವ್ಯನಿರತ ಬಸ್ಸು ಚಾಲಕ ಪ್ರಶಾಂತ ಎಂಬವರ ಮೇಲೆ ಹಲ್ಲೆ ನಡೆಸಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೆಎಸ್‌ಆರ್‌ಟಿಸಿ ಮಜ್ದೂರ್ ಸಂಘದ ಆಶ್ರಯದಲ್ಲಿ ಪುತ್ತೂರು ಉಪ ವಿಭಾಗಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. `ಪ್ರಶಾಂತ ಅವರ ಮೇಲೆ ಸಂಘಟಿತರಾಗಿ ಹಲ್ಲೆ ನಡೆಸಿದವರನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದ ಅವರು `ಇಲ್ಲದಿದ್ದಲ್ಲಿ ನಮ್ಮಲ್ಲೂ ಸಂಘಟನೆಗಳಿವೆ ನಾವೂ ನೋಡಿಕೊಳ್ಳುತ್ತೇವೆ' ಎಂದು ಸವಾಲು ಹಾಕಿದರು.

ಕೆಎಸ್‌ಆರ್‌ಟಿಸಿ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಶಾಂತಾರಾಮ ವಿಟ್ಲ ಮಾತನಾಡಿ, `ಮಾಣಿ, ಪಾಲ್ತಾಡಿ, ಸವಣೂರು ಇನ್ನಿತರ ಕಡೆಗಳಲ್ಲಿ ಇತ್ತೀಚೆಗೆ ಕ್ಷುಲ್ಲಕ ಕಾರಣಗಳಿಗೆ ಸರ್ಕಾರಿ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಹಲ್ಲೆ ನಡೆಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ರಸ್ತೆಯಲ್ಲಿ ದೂಳು ಹಾರಿತು ಎಂಬ ಕಾರಣದಿಂದ ಪರಣೆಯಲ್ಲಿ ಬಸ್ ಚಾಲಕ ಪ್ರಶಾಂತ ಅವರ ಮೇಲೆ ಹಲ್ಲೆ ನಡೆಸಲಾಗಿರುವುದು ದುರಂತ. ಇಂತಹ ಪ್ರಕರಣ ಮರುಕಳಿಸದಂತೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು' ಎಂದರು.

ಮಾಜಿ ವಿಧಾನಪರಿಷತ್ ಸದಸ್ಯ ಬಾಲಕೃಷ್ಣ ಭಟ್ ಮಾತನಾಡಿ, ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದರು.

ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ರಮೇಶ್ ರೈ ಡಿಂಬ್ರಿ, ಕುಂಜಾಡಿ ಗಣೇಶ್ ಶೆಟ್ಟಿ ಮತ್ತು ಬಜರಂಗದಳದ ಜಿಲ್ಲಾ ಕಾರ್ಯದರ್ಶಿ ದಿನೇಶ್ ಕುಮಾರ್ ಜೈನ್ ಪ್ರಕರಣವನ್ನು ಖಂಡಿಸಿದರು.

ಪುತ್ತೂರಿನ ಬಸ್ ನಿಲ್ದಾಣದ ಬಳಿಯಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಗಳ ಕಚೇರಿ ಮುಂಬಾಗದಲ್ಲಿ ಪ್ರತಿಭಟನಾ ಸಭೆ ನಡೆಸಿದರು. ಬಳಿಕ ಪುತ್ತೂರು ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.