ADVERTISEMENT

`ಉದ್ಯೋಗ ಮೇಳದ ಲಾಭ ಪಡೆಯಿರಿ'

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 8:46 IST
Last Updated 7 ಡಿಸೆಂಬರ್ 2012, 8:46 IST

ಉಡುಪಿ: `ಯುವಕ- ಯುವತಿಯರು ಉದ್ಯೋಗ ಮೇಳಗಳ ಉಪಯೋಗ ಪಡೆದುಕೊಳ್ಳಬೇಕು' ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ಎಂ.ಟಿ. ರೇಜು ಕರೆ ನೀಡಿದರು.

ಮಂಗಳೂರಿನ ದಿಯಾ ಸಿಸ್ಟಮ್ಸ ಸಾಫ್ಟ್‌ವೇರ್ ಕಂಪೆನಿ ಉಡುಪಿಯ ಜಿಲ್ಲಾಧಿಕಾರಿ ಕಚೇರಿ `ರಜತಾದ್ರಿ'ಯ ಅಟಲ್‌ಬಿಹಾರಿ ವಾಪಪೇಯಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಬೆಂಗಳೂರು- ಮೈಸೂರಿನಂತಹ ದೊಡ್ಡ ನಗರಗಳಲ್ಲಿ ಉದ್ಯೋಗ ಮೇಳ ನಡೆಯುವುದು ಸಾಮಾನ್ಯ. ಆದರೆ ಉಡುಪಿಯಲ್ಲಿ ಸಹ ನಾವು ಇಂತಹ ಮೇಳಗಳನ್ನು ಆಯೋಜಿಸುತ್ತಿದ್ದೇವೆ. ಇದು ಮೂರನೇ ಮೇಳವಾಗಿದ್ದು ಎಲ್ಲರೂ ಉಪಯೋಗ ಪಡೆಯಬೇಕು. ನಿರುದ್ಯೋಗಿ ಯುವಕರಿಗೆ ಇದೊಂದು ಉತ್ತಮ ಅವಕಾಶ' ಎಂದರು.

`ನಮ್ಮ ಕಂಪೆನಿಯನ್ನು ಸೇರಿದ ಗ್ರಾಮೀಣ ಭಾಗದ ಯುವಕ- ಯುವತಿಯರು ಪ್ರಗತಿ ಹೊಂದುತ್ತಿದ್ದಾರೆ. ಐದು ವರ್ಷದ ಹಿಂದೆ ನಾಲ್ಕು ಸಾವಿರ ರೂಪಾಯಿ ಸಂಬಳಕ್ಕೆ ಸೇರಿದ್ದವರು ಇಂದು ಲಕ್ಷ ರೂಪಾಯಿ ವರೆಗೂ ಗಳಿಸುತ್ತಿದ್ದಾರೆ. ಇಂದು ಆಯ್ಕೆಯಾಗದವರು ನಿರಾಶೆಗೊಳ್ಳುವುದು ಬೇಡ. ಏಕೆ ಆಯ್ಕೆ ಮಾಡಲಿಲ್ಲ ಎಂಬುದನ್ನು ನಿಮಗೆ ತಿಳಿಸಲಾಗುತ್ತದೆ. ತಪ್ಪುಗಳನ್ನು ತಿದ್ದಿಕೊಂಡು ಕೊರತೆ ನೀಗಿಸಿಕೊಂಡರೆ ಮುಂದಿನ ದಿನಗಳಲ್ಲಿ ನಮ್ಮ ಕಂಪೆನಿಯಲ್ಲೇ ಕೆಲಸ ಪಡೆಯುವ ಅವಕಾಶ ಸಿಗಲಿದೆ' ಎಂದು ದಿಯಾ ಸಿಸ್ಟಮ್ಸನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ರವಿಚಂದ್ರನ್ ಹೇಳಿದರು.

ಉಡುಪಿ ನಗರ, ಜಿಲ್ಲೆ ಮತ್ತು ಹೊರ ಜಿಲ್ಲೆಯ ಯುವಕ- ಯುವತಿಯರು ಸೇರಿ ಸುಮಾರು 392 ಮಂದಿ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ ಪರೀಕ್ಷೆ ಬರೆದ 140 ಮಂದಿ ಉತ್ತೀರ್ಣರಾಗಿದ್ದಾರೆ. ಇಪ್ಪತ್ತು ಮಂದಿಯನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಉಳಿದವರನ್ನು ಸಂದರ್ಶನ ಮಾಡಿ ಆ ನಂತರ ಆಯ್ಕೆ ಮಾಡಲಾಗುತ್ತದೆ ಎಂದು ರವಿಚಂದ್ರ `ಪ್ರಜಾವಾಣಿ' ತಿಳಿಸಿದರು.

ಜಿಲ್ಲಾ ಉದ್ಯೋಗಾಧಿಕಾರಿ ಎಸ್.ಡಿ. ಬಸವರಾಜು ಸ್ವಾಗತಿಸಿದರು. ದಿಯಾ ಸಿಸ್ಟಮ್ಸನ ಮಾನವ ಸಂಪನ್ಮೂಲ ಅಧಿಕಾರಿ  ಶ್ರೀನಿವಾಸ್ ಭಟ್ ರವರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.