ADVERTISEMENT

ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ 11ರಿಂದ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 6:35 IST
Last Updated 10 ಫೆಬ್ರುವರಿ 2012, 6:35 IST

ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ `ವೀರ ರಾಣಿ ಅಬ್ಬಕ್ಕ ಉತ್ಸವ- 2012~ ಇದೇ 11 ಹಾಗೂ 12ರಂದು ಸೋಮೇಶ್ವರ ಗ್ರಾಮದ ಸಂಕೊಳಿಗೆಯ ಉಚ್ಚಿಲ ಬೋವಿ ಶಾಲಾ ಮೈದಾನದಲ್ಲಿ ನಡೆಯಲಿದೆ.

11ರ ಬೆಳಿಗ್ಗೆ 9ಕ್ಕೆ ಕೋಟೆಕಾರಿನ ಬೀರಿಯಿಂದ ಉತ್ಸವ ವೇದಿಕೆವರೆಗೆ ಸಾಗುವ ಜಾನಪದ ದಿಬ್ಬಣದಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಲಿವೆ. ಶಾಸಕ ಯು.ಟಿ. ಖಾದರ್ ದಿಬ್ಬಣ ಉದ್ಘಾಟಿಸುವರು ಎಂದು ಸಮಿತಿ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಿಗ್ಗೆ 10.30ಕ್ಕೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಉತ್ಸವ ಉದ್ಘಾಟಿಸುವರು. ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ಗೋಷ್ಠಿಗಳಿಗೆ ಚಾಲನೆ ನೀಡುವರು. ಜಾನಪದ ಕಲಾವಿದೆ ಕೊರಪೊಳು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾಂದಿ ಹಾಡುವರು. ಮಧ್ಯಾಹ್ನ `ಮಾತೃರೂಪಿ ಸಂಸ್ಕೃತಿ- ಬದಲಾವಣೆಯ ನೆಲೆಗಳು~ ಮಹಿಳಾ ವಿಚಾರಗೋಷ್ಠಿ ನಡೆಯಲಿದ್ದು, ಸುಲೋಚನಾ ನಾರಾಯಣ್ ಅಧ್ಯಕ್ಷತೆ ವಹಿಸುವರು. ಸಂಜೆ ಸವಿ ಸಮಾರಂಭದಲ್ಲಿ ಸಚಿವ ವಿ.ಎಸ್.ಆಚಾರ್ಯ ಅಧ್ಯಕ್ಷತೆ ವಹಿಸುವರು.

12ರಂದು ಬೆಳಿಗ್ಗೆ 10.30ಕ್ಕೆ ಡಾ. ನಾ.ಮೊಗಸಾಲೆ ಅಧ್ಯಕ್ಷತೆಯಲ್ಲಿ ಚತುರ್ಭಾಷಾ ಕವಿಗೋಷ್ಠಿ ಜರುಗಲಿದೆ. ಮಧ್ಯಾಹ್ನ ಡಾ. ಎನ್.ಕೆ.ತಿಂಗಳಾಯ ಅಧ್ಯಕ್ಷತೆಯಲ್ಲಿ `ದ.ಕ. ಜಿಲ್ಲೆ: ಅಭಿವೃದ್ಧಿಯ ನೆಲೆಗಳು~ ಎಂಬ ವಿಚಾರಗೋಷ್ಠಿ ಜರುಗಲಿದೆ.

ಪ್ರಶಸ್ತಿ ಪ್ರದಾನ: ಸಂಜೆ 5ಕ್ಕೆ ಸಮಾರೋಪ ಸಮಾರಂಭ. ವೀರ ರಾಣಿ ಅಬ್ಬಕ್ಕ ಪ್ರಶಸ್ತಿಗೆ ಆಯ್ಕೆಯಾದ ಸಾಹಿತಿ ಲಲಿತಾ ಆರ್. ರೈ ಹಾಗೂ ರಾಣಿ ಅಬ್ಬಕ್ಕ ಪುರಸ್ಕಾರಕ್ಕೆ ಆಯ್ಕೆಯಾದ ರಂಗ ಕಲಾವಿದೆ ಜಯಶೀಲ ಅವರಿಗೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪ್ರಶಸ್ತಿ ಪ್ರದಾನ ಮಾಡುವರು. ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಸಮಾರೋಪ ಭಾಷಣ ಮಾಡುವರು ಎಂದರು.

ಸ್ವಾಗತಾಧ್ಯಕ್ಷ ಕೆ. ಜಯರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ, ಗೌರವ ಸಲಹೆಗಾರರಾದ ಡಾ. ವಾಮನ ನಂದಾವರ, ಪ್ರೊ.ಎ.ವಿ. ನಾವಡ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.