ADVERTISEMENT

ಎಂಡೊ ಸಂತ್ರಸ್ತರಿಗೆ ವಿಶೇಷ ಆಸ್ಪತ್ರೆ: ಡಿವಿಎಸ್

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 9:05 IST
Last Updated 7 ಅಕ್ಟೋಬರ್ 2012, 9:05 IST

ಕೊಯಿಲ (ಉಪ್ಪಿನಂಗಡಿ): ಎಂಡೊ ಪೀಡಿತರ ಬಗ್ಗೆ ರಾಜ್ಯ ಸರ್ಕಾರ ಕಾಳಜಿ ವಹಿಸಿ ಅವರ ಪುನರ್ವಸತಿಗಾಗಿ ದಿಟ್ಟ ಹೆಜ್ಜೆಯಿಟ್ಟಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅವರಿಗಾಗಿಯೇ ಒಂದು ಸುಸಜ್ಜಿತ ವಿಶೇಷ ಆಸ್ಪತ್ರೆ ತೆರೆಯಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು. 

ಶನಿವಾರ ಕೊಯಿಲದ ರೇಷ್ಮೆ ಇಲಾಖಾ ಕಟ್ಟಡದಲ್ಲಿ ದ.ಕ. ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಪ್ರಾರಂಭವಾದ ಪುತ್ತೂರು ತಾಲ್ಲೂಕಿನ ಆಲಂಕಾರು ಪರಿಸರದ ಅಂಗವಿಕಲರ ಪಾಲನಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಇಲ್ಲಿನ ಸಂತ್ರಸ್ತರಲ್ಲಿರುವ ಭೀಕರ ಆರೋಗ್ಯ ಸಮಸ್ಯೆಗಳು ಈ ಹಿಂದೆಯೇ ಗಮನಕ್ಕೆ ಬಂದಿದ್ದರೂ ಸರ್ಕಾರಗಳು ಸ್ಪಂದಿಸುವಲ್ಲಿ ಹಿಂದೆ ಬಿದ್ದಿದ್ದವು. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಬಗ್ಗೆ ಗಮನ ಹರಿಸಿ ಎಂಡೊ ಪೀಡಿತರ ಬಾಳಿನಲ್ಲಿ ನೆಮ್ಮದಿಯ ಬದುಕು ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಕಳೆದ ವರ್ಷ ಬೆಳ್ತಂಗಡಿ ಪರಿಸರದ ಎಂಡೊ ಪೀಡಿತರಿಗೆ ಪರಿಹಾರ ಹಾಗೂ ಮಾಸಾಶನ ಒದಗಿಸಿ ಕೊಟ್ಟಿರುವುದಲ್ಲದೆ ಪಾಲನ ಕೇಂದ್ರವನ್ನು ತೆರೆಯಲಾಗಿದೆ. ಇದೀಗ ಆಲಂಕಾರು ಪರಿಸರದಲ್ಲಿರುವ ಎಂಡೊ ಪೀಡಿತ ಅಂಗವಿಕಲ ಪಾಲನಾ ಕೇಂದ್ರ ತೆರೆಯಲಾಗಿದೆ ಎಂದರು.

ದ.ಕ. ಜಿಲ್ಲೆಯ 92 ಗ್ರಾಮಗಳಲ್ಲಿ 6 ಸಾವಿರಕ್ಕೂ ಹೆಚ್ಚು ಎಂಡೋ ಪೀಡಿತರಿದ್ದಾರೆ ಎನ್ನುವ ಮಾಹಿತಿಯಿದೆ. ಈ ಬಗ್ಗೆ ಇದೇ 10ರಿಂದ 30ರ ತನಕ ಸಮೀಕ್ಷೆ ಕಾರ‌್ಯ ನಡೆಯಲಿದೆ. ಅದರ ವರದಿ ಬಂದ ತಕ್ಷಣ ಬೆಂಗಳೂರಿನ ತಜ್ಞ ವೈದ್ಯರ ತಂಡ ಮತ್ತು ಇತರ ತಜ್ಞರನ್ನೊಳಗೊಂಡಂತೆ ಮಂಗಳೂರಿನಲ್ಲಿ ಎರಡು ದಿನಗಳ ಕಾರ್ಯಾಗಾರ ನಡೆಸಲಾಗುವುದು. ಎಂಡೊ ಸಂತ್ರಸ್ತರ ಬದುಕಿನಲ್ಲಿ ಭರವಸೆಯನ್ನು ಮೂಡಿಸುವ ಕೆಲಸದೊಂದಿಗೆ ಅವರ ಮನೆಯವರಿಗೆ ನೆಮ್ಮದಿಯನ್ನು ನೀಡುವ ಕೆಲಸ ಮಾಡಲಾಗುವುದು ಎಂದರು.

ಪಾಲನಾ ಕೇಂದ್ರ ಮೇಲ್ವಿಚಾರಕಿ ಅನಿತಾ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ದಾಖಲಾತಿ ಹಸ್ತಾಂತರಿಸಿ ಮಾತನಾಡಿ, `ರಾಜ್ಯದಲ್ಲಿ ಎಂಡೊ ನಿಷೇಧಿಸಲು ಕೇಂದ್ರ ಸರ್ಕಾರ ಇಚ್ಛಾಶಕ್ತಿ ತೋರುತ್ತಿಲ್ಲ. ಜಿಲ್ಲೆಯಲ್ಲಿ ಈ ದುರಂತವನ್ನು ಕಣ್ಣಾರೆ ಕಂಡಿರುವ, ಜಿಲ್ಲೆಯವರಾಗಿ ಕೇಂದ್ರದಲ್ಲಿ ಸಚಿವರಾಗಿರುವವರು ಆಸಕ್ತಿ ತೋರುತ್ತಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಭಟ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್, ಆಲಂಕಾರು ಎಂಡೊ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಮಾತನಾಡಿದರು.

ಜಿ.ಪಂ. ಸಿಇಒ ಡಾ. ಕೆ.ಎಸ್. ವಿಜಯಪ್ರಕಾಶ್‌ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ್, ಜಿ.ಪಂ. ಸದಸ್ಯ ಬಾಲಕೃಷ್ಣ ಸುವರ್ಣ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಅಶೋಕ್ ಹಲ್ಯಾರ, ದಯಾನಂದ ಗೌಡ ಆಲಡ್ಕ, ಆಲಂಕಾರು ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ, ರಾಮಕುಂಜ ಗ್ರಾ.ಪಂ. ಅಧ್ಯಕ್ಷ ಶೇಖರ ಗೌಡ, ಕೊಯಿಲ ಗಾ.ಪಂ. ಅಧ್ಯಕ್ಷೆ ವೀಣಾ ಪೂಜಾರಿ, ಶರವೂರು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಇದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ರಾಧಾಕೃಷ್ಣ ರಾವ್ ಸ್ವಾಗತಿಸಿ, ಪುತ್ತೂರು ತಾಲ್ಲೂಕು ಯೋಜನಾಧಿಕಾರಿ ವಸಂತ ವಂದಿಸಿದರು. ನಿರ್ದೇಶಕ ಗಣೇಶ್ ಭಟ್ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಶಾಸಕ ಅಂಗಾರ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಎಂಡೊ ಪೀಡಿತರ ಯೋಗಕ್ಷೇಮ ವಿಚಾರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.