ADVERTISEMENT

ಎಕ್ಕೂರು: ಸೆಖೆ, ದೂಳಿನ ನಡುವೆ ಡರ್ಟ್ ಟ್ರ್ಯಾಕ್ ಯಶಸ್ಸು!

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 8:05 IST
Last Updated 19 ಮಾರ್ಚ್ 2012, 8:05 IST

ಮಂಗಳೂರು: ಗಲ್ಫ್ ಡರ್ಟ್ ಟ್ರ್ಯಾಕ್ ರಾಷ್ಟ್ರೀಯ ಚಾಂಪಿಯನ್‌ಷಿಪ್ ಮಂಗಳೂರಿನಲ್ಲಿ ಮೂರು ಬಾರಿ ನಡೆದಿದೆ. ಕಳೆದ ಬಾರಿ (2008) ನಡೆದಿದ್ದು ಕರಾವಳಿ ಉತ್ಸವ ಮೈದಾನದಲ್ಲಿ. ಮೊದಲ ಬಾರಿ ಈ  ಸ್ಪರ್ಧೆ, ನಗರ ಮಧ್ಯಭಾಗದಿಂದ ದೂರದ ಎಕ್ಕೂರು ಮೀನುಗಾರಿಕೆ ಕಾಲೇಜು ಮೈದಾನದಲ್ಲಿ ನಡೆದರೂ ಬಂದಿದ್ದ ಪ್ರೇಕ್ಷಕರ, ಕುತೂಹಲಿಗಳ ಸಂಖ್ಯೆ ಸುಮಾರು ಎರಡೂವರೆ ಸಾವಿರದಷ್ಟಿತ್ತು.

ನಗರದಲ್ಲಿ ಕಳೆದೊಂದು ವಾರದಿಂದ ಕಾಣಿಸಿಕೊಂಡಿರುವ ವಿಪರೀತ ಸೆಖೆ ಒಂದೆಡೆ, ಪಕ್ಕದಲ್ಲೇ ಹಾದುಹೋಗುವ ಚತುಷ್ಪಥ ರಸ್ತೆ ಕಾಮಗಾರಿ ಇನ್ನೊಂದು ಕಡೆ- ಇದರ ನಡುವೆಯೂ ಆಸಕ್ತರು ಭಾನುವಾರ ಬೆಳಿಗ್ಗೆ ಡರ್ಟ್ ಟ್ರ್ಯಾಕ್ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನ ರೋಚಕ ಪೈಪೋಟಿ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ನೆರೆದ್ದ್ದಿದರು. 14 ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ಮಾಮೂಲಿಯಾಗಿ ಸ್ಪರ್ಧೆ ನಡೆಯುವ ದೇಶದ ಇತರ ಸ್ಥಳಗಳಿಗೆ ಹೋಲಿಸಿದರೆ, ಇದು ಸಣ್ಣ ಟ್ರ್ಯಾಕ್. ಹೀಗಾಗಿ ಸ್ವಲ್ಪ ಇಕ್ಕಟ್ಟೆನಿಸಿತು. ಕೆಲವು ಕಡೆ ಕೆಸರಿನಿಂದಾಗಿ ಚಕ್ರ ಜಾರುತ್ತಿತ್ತು. ಹೀಗಾಗಿ ವೇಗ ಎಂದಿಗಿಂತ ಕಡಿಮೆ ಮಾಡಬೇಕಾಯಿತು ಎಂದು ಹೇಳಿದ ಚಾಲಕರೇ ಹೆಚ್ಚು.

ಸ್ಪರ್ಧೆ ನಡೆಯುವ ಟ್ರ್ಯಾಕ್‌ನ ಗಾತ್ರ ಒಂದಿಷ್ಟು ಕಡಿಮೆಯಾದರೂ, ಕ್ರಮಿಸಬೇಕಾದ ಅಂತರ ಮಾತ್ರ ಕಡಿಮೆಯಿರುವುದಿಲ್ಲ. ಎಂಟರಿಂದ ಹತ್ತು ಲ್ಯಾಪ್‌ಗಳಿರುತ್ತವೆ. ಪ್ರತಿ ಲ್ಯಾಪ್ 600 ಮೀಟರ್ ಇರುತ್ತದೆ. ಕಡಿದಾದ ಟರ್ನ್‌ಗಳು, ಕೆಲವು ಕಡೆ ಕೆಸರು, ಕೆಲವು ಕಡೆ ಮಣ್ಣು ಇದ್ದು ಸವಾರರು ವೇಗದ ಜತೆಗೆ ಕೌಶಲದಿಂದ ಚಲಾಯಿಸಬೇಕಾಗುತ್ತದೆ. ಜತೆಗೆ ಸಹಜ ಪೈಪೋಟಿಯನ್ನೂ ಎದುರಿಸಬೇಕಾಗುತ್ತದೆ. ಹೀಗಾಗಿ ಡರ್ಟ್ ಟ್ರ್ಯಾಕ್ ಸ್ಪರ್ಧೆ ರೋಚಕ.

`ಇಂಥ ನಗರಗಳಲ್ಲಿ ರ‌್ಯಾಲಿಗೆ ಇಷ್ಟೊಂದು ಜನ ಬಂದಿರುವುದು ಖುಷಿ ಮೂಡಿಸಿದೆ~ ಎಂದು ಕಳೆದ ಆರು ವರ್ಷದಿಂದ ಟಿವಿಎಸ್ ರೇಸಿಂಗ್ ತಂಡದಲ್ಲಿರುವ ಪ್ರಮೋದ್ ಜೋಶುವ ಹೇಳುತ್ತಾರೆ. ಬೆಂಗಳೂರಿನ ಪ್ರಮೋದ್, 9 ವರ್ಷಗಳ ಡರ್ಟ್ ಟ್ರ್ಯಾಕ್ ಸ್ಪರ್ಧೆಯ ಅನುಭವಿ.

ಕೆಲವೊಮ್ಮೆ ಅನುಭವಿ ಚಾಲಕರೂ ಪರದಾಡುತ್ತಾರೆ. ಎಲ್ಲರ ನಿರೀಕ್ಷೆ ಮೀರಿ ಅಷ್ಟೇನೂ ಖ್ಯಾತರಲ್ಲದವರು ಬೆಳಕಿಗೆ ಬರುತ್ತಾರೆ. ಈ ರ‌್ಯಾಲಿಯಲ್ಲಿ ಬೆಂಗಳೂರಿನ ವಿ.ಎಸ್.ನರೇಶ್ ನಾಲ್ಕು ರೇಸ್‌ಗಳನ್ನು ಗೆದ್ದು ಗಮನ ಸೆಳೆದರು.

ಅಲ್ಲೂ ಸಲ್ಲುವವರು!

ಬೆಂಗಳೂರಿನಿಂದ ಬಂದಿದ್ದ ಟಿ.ವಿ.ಎಸ್. ತಂಡದ ಆರ್.ನಟರಾಜ್ ಅವರು ಮಂಗಳೂರಿನಲ್ಲಿ ಭಾನುವಾರ ಎರಡು ಸ್ಪರ್ಧೆಗಳಲ್ಲಿ (250 ಸಿ.ಸಿ.ವರೆಗಿನ ವಿದೇಶಿ ಮೋಟರ್‌ಸೈಕಲ್ ರೇಸ್1 ಮತ್ತು ರೇಸ್ 2) ಎರಡನೇ ಸ್ಥಾನ ಪಡೆದರು.

ಆದರೆ ಈ ಅನುಭವಿ ಚಾಲಕ ಮೂರು ಬಾರಿ ದೂರ ಅಂತರದ ಮಾರುತಿ ಸುಜುಕಿ ಡಸರ್ಟ್ ಸ್ಟಾರ್ಮ್ ಸ್ಪರ್ಧೆಯನ್ನು (2010ರಿಂದ 2012) ಅಗ್ರಸ್ಥಾನದಲ್ಲಿ ಪೂರೈಸಿದ್ದಾರೆ. ಇತ್ತೀಚೆಗಷ್ಟೇ ನಡೆದ ಡಸರ್ಟ್ ಸ್ಟಾರ್ಮ್ ಸ್ಪರ್ಧೆಯಲ್ಲಿ ಸವಾರರು ದೆಹಲಿಯಿಂದ ಗುಜರಾತ್‌ನ ಭುಜ್‌ವರೆಗೆ 3,200 ಕಿ.ಮೀ. ದೂರ ಕ್ರಮಿಸಬೇಕಾಗಿತ್ತು. ಅದರಲ್ಲಿ ನಟರಾಜ್ ವಿಜೇತರಾಗಿದ್ದರು.

ಡರ್ಟ್‌ಟ್ರ್ಯಾಕ್‌ನಲ್ಲಿ ಅವರು ಮೂರು ಬಾರಿ (2007, 2010 ಮತ್ತು 2011) ಇಂಡಿಯನ್ ಎಕ್ಸ್‌ಪರ್ಟ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ. ಎರಡು ಬಾರಿ (2001 ಮತ್ತು 2011) ವಿದೇಶಿ ಮೋಟರ್‌ಸೈಕಲ್ ವಿಭಾಗದಲ್ಲಿ ರನ್ನರ್ ಅಪ್ ಆಗಿದ್ದಾರೆ! ಹೀಗಾಗಿ ಅವರೂ ಎರಡೂ ಕಡೆ ಯಶಸ್ಸನ್ನು ಅನುಭವಿಸಿದ ವಿರಳ ಸ್ಪರ್ಧಿಗಳಲ್ಲಿ ಒಬ್ಬರು.

`ಡರ್ಟ್ ಟ್ರ್ಯಾಕ್ ಸ್ಪರ್ಧೆ ಸುಲಭ. ಇಲ್ಲಿ ನೀವು 4-5 ಬಾರಿ ಟ್ರ್ಯಾಕ್‌ನಲ್ಲಿ ಅಭ್ಯಾಸ ಮಾಡಿ ಬೈಕ್ ಓಡಿಸಬಹುದು. ಆದರೆ ದೂರ ಅಂತರದ ರ‌್ಯಾಲಿ ಮಾತ್ರ ಕಷ್ಟ. ಏಕೆಂದರೆ ಇದು 4-5 ದಿನಗಳ ರೇಸ್. ಸಂಯಮ, ಮನೋಬಲದ ಜತೆಗೆ ಚಾಣಾಕ್ಷತನ, ಉಳಿದ ಸ್ಪರ್ಧಿಗಳ ಜತೆ ಅಂತರ ಕಾಪಾಡಿಕೊಳ್ಳುವುದು ಅಗತ್ಯ~ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT