ADVERTISEMENT

ಎತ್ತಿನಹೊಳೆ ಯೋಜನೆಗೆ ವಿರೋಧ: ಜಿಲ್ಲಾ ಬಂದ್‌ಗೆ ಬಿಜೆಪಿ ಬೆಂಬಲ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2014, 9:49 IST
Last Updated 28 ಫೆಬ್ರುವರಿ 2014, 9:49 IST

ಮಂಗಳೂರು: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಮಾರ್ಚ್ 3ರಂದು ಕೈಗೊಳ್ಳುವ ದಕ್ಷಿಣ ಕನ್ನಡ ಜಿಲ್ಲಾ ಬಂದ್‌ಗೆ ಪ್ರಮುಖ ವಿರೋಧ ಪಕ್ಷ ಬಿಜೆಪಿ, ಕನ್ನಡ ಸಾಹಿತ್ಯ ಪರಿಷತ್‌ ಸಹಿತ ಹಲವಾರು ಸಂಘ, ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.

ನೇತ್ರಾವತಿ ತಿರುವು ಎಂಬ ಎತ್ತಿನ ಹೊಳೆ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ತೀವ್ರ ಆಕ್ಷೇಪವಿದ್ದರೂ ಅದನ್ನು ಸರ್ಕಾರ ಅನುಷ್ಠಾನಗೊಳಿಸಲು ಹೊರಟಿರುವುದು ಶೋಚನೀಯ. ನೇತ್ರಾವತಿ ರಕ್ಷಣಾ ಸಮಿತಿ ಸೋಮವಾರ ನೀಡಿರುವ ಸ್ವಯಂಪ್ರೇರಿತ ಬಂದ್ ಕರೆಗೆ ಜಿಲ್ಲಾ ಬಿಜೆಪಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎತ್ತಿನಹೊಳೆ ದ.ಕ. ಜಿಲ್ಲೆಗೆ ಸಂಬಂಧಪಟ್ಟ ವಿಚಾರವಾಗಿದ್ದು, ಪಕ್ಷಾತೀತವಾಗಿ ಯಾರು ಹೋರಾಟ ಮಾಡುತ್ತಾರೋ ಅವರಿಗೆ ಪಕ್ಷ ಬೆಂಬಲ ನೀಡಲಿದೆ. ನೇತ್ರಾವತಿ ರಕ್ಷಣಾ ಸಮಿತಿ ಪಕ್ಷಾತೀತವಾಗಿರುವ ನೆಲೆಯಲ್ಲಿ ಬೆಂಬಲ ಘೋಶಿಸಲಾಗಿದೆ.

ಯೋಜನೆಯ ಸಾಧಕ-,ಬಾಧಕಗಳ ಬಗ್ಗೆ ವಿಮರ್ಶೆ ಆಗದೆ ಅನುಷ್ಠಾನ­ಗೊಳಿಸಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಬಂದಾಗ ಮತ್ತು ಅವರಿದ್ದಲ್ಲಿಗೆ ನಿಯೋಗ ಹೋದಾಗ ಯೋಜನೆಯ ವಿಚಾರದಲ್ಲಿ ಜಿಲ್ಲೆಯ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಡಿ ಇಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಅವರು ಇದುವರೆಗೆ ಹೇಳಿದ ಮಾತಿನಂತೆ ನಡೆದುಕೊಂಡಿಲ್ಲ. ಹೀಗಾಗಿ ಪಕ್ಷ ಬಂದ್‌ಗೆ ಬೆಂಬಲ ಸೂಚಿಸುತ್ತಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಈ ನಿಲುವಿಗೆ ದ.ಕ. ಕಾಂಗ್ರೆಸ್ ಮತ್ತು ಜಿಲ್ಲೆಯ ಸಚಿವರುಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮುಂದಿನ ದಿನಗಳಲ್ಲಿ ನೇತ್ರಾವತಿ ತಿರುವು ವಿಚಾರದಲ್ಲಿ ಇಲ್ಲಿನ ಜನರ ಭಾವನೆಗೆ ಸ್ಪಂದಿಸದೇ ಇದ್ದಲ್ಲಿ ಬಿಜೆಪಿಯೂ ಪ್ರತ್ಯೇಕವಾಗಿ ಹೋರಾಟದ ಕಣಕ್ಕಿಳಿಯಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಕಸಾಪ: ಬಂದ್‌ಗೆ ಕಸಾಪ ಜಿಲ್ಲಾ ಘಟಕ ಪೂರ್ಣ ಬೆಂಬಲ ನೀಡಲಿದೆ ಎಂದು ಅಧ್ಯಕ್ಷ ಎಸ್.ಪ್ರದೀಪ್‌ ಕುಮಾರ್‌ ಕಲ್ಕೂರ ತಿಳಿಸಿದ್ದಾರೆ.
ಈ ಹಿಂದೆ ಜರಗಿದ ಸಾಹಿತ್ಯ ಸಮ್ಮೇಳನಗಳ ಅನೇಕ ಗೋಷ್ಠಿಗಳಲ್ಲಿ ನೇತ್ರಾವತಿ ನದಿ ತಿರುವು – ಎತ್ತಿನ ಹೊಳೆ ಯೋಜನೆ ಎಂಬ ಪರಿಸರ ವಿರೋಧಿ ಚಟುವಟಿಕೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿರೋಧವನ್ನು ವ್ಯಕ್ತಪಡಿಸಿತ್ತು ಎಂದು ಅವರು ಹೇಳಿದ್ದಾರೆ.

ಅಲ್ಲದೆ ಠರಾವುಗಳ ಮೂಲಕ ಸರ್ಕಾರದ ಗಮನ ಸೆಳೆದಿತ್ತು. ಆದರೂ ಸರ್ಕಾರ, ಜನಪ್ರತಿನಿಧಿಗಳು ಪಶ್ಚಿಮಘಟ್ಟದಲ್ಲಿ ಕೈಗೊಳ್ಳುವ ಯೋಜನೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮವನ್ನು ಕಡೆಗಣಿಸಿ ಇದೀಗ ಯೋಜನೆಗೆ ಶಿಲಾನ್ಯಾಸ ನೆರವೇರಿಸಲು ಮುಂದಾಗಿರುವುದು ಖೇದಕರ ಎಂದು ಅವರು ತಿಳಿಸಿದ್ದಾರೆ.

ಗಿಲ್‌ನೆಟ್‌ ಮೀನುಗಾರರ ಸಂಘ
ದ.ಕ.ಜಿಲ್ಲಾ ಗಿಲ್‌ನೆಟ್‌ ಮೀನುಗಾರರ ಸಂಘದ ಸಭೆ ಗುರುವಾರ ಇಲ್ಲಿ ಅಧ್ಯಕ್ಷ ಅಲಿ ಹಸನ್‌ ಅವರ ಅಧ್ಯಕ್ಷತೆಯಲ್ಲಿ ನಡೆದು ಬಂದ್‌ಗೆ ಸಂಪೂರ್ಣ ಬೆಂಬಲ ನೀಡುವ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಪದಾಧಿಕಾರಿಗಳಾದ ಸತೀಶ್‌ ಕೋಟ್ಯಾನ್‌, ಇಸ್ಮಾಯಿಲ್‌, ಸುಭಾಸ್‌, ಸುನಿಲ್‌, ಪ್ರಾಣೇಶ್‌ ಇತರರು ಇದ್ದರು ಎಂದು ಕಾರ್ಯದರ್ಶಿ ಬಿ.ಎ.ಬಶೀರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.