ADVERTISEMENT

ಏಕಶಿಲಾ ಬೆಟ್ಟದ ನಾಡಿನಲ್ಲಿ ಕೋಟೆ ಕಟ್ಟುವವರು ಯಾರು?

ಸಿ.ಕೆ.ಮಹೇಂದ್ರ
Published 24 ಫೆಬ್ರುವರಿ 2018, 6:00 IST
Last Updated 24 ಫೆಬ್ರುವರಿ 2018, 6:00 IST
ಕೆ.ಎನ್.ರಾಜಣ್ಣ
ಕೆ.ಎನ್.ರಾಜಣ್ಣ   

ಮಧುಗಿರಿ: ಹೊಸ ಜಿಲ್ಲೆಯಾಗುವ ವಿಷಯದಲ್ಲಿ ಶಿರಾದೊಂದಿಗೆ ಜಂಗಿ ಕುಸ್ತಿಗೆ ಬಿದ್ದಿರುವ ಮಧುಗಿರಿ ವಿಧಾನಸಭಾ ಕ್ಷೇತ್ರ //ಪರಿಶಿಷ್ಟ ಜಾತಿ ಮೀಸಲು ಹಾಗೂ ಸಾಮಾನ್ಯ ಕ್ಷೇತ್ರವಾಗಿ ರೂಪಾಂತರ ಪಡೆದಿದೆ. ಏಷ್ಯಾ ಖಂಡದಲ್ಲಿ ಎರಡನೇ ಅತಿ ಎತ್ತರದ ಏಕಶಿಲಾ ಬೆಟ್ಟದ ಖ್ಯಾತಿಯ ಇಲ್ಲಿಯ ಮತದಾರರು ಸ್ಥಳೀಯ ಅಭ್ಯರ್ಥಿಗಳಿಗಿಂತ ಹೊರಗಿನವರಿಗೇನೆ ಹೆಚ್ಚು ಮಣೆ ಹಾಕಿದ್ದಾರೆ.

ಶಾಸಕರಾಗಿದ್ದ ದೊಡ್ಡೇರಿ ಹೋಬಳಿ ರಂಗಾಪುರದ ಆರ್‌.ಚಿಕ್ಕಯ್ಯ, ಐಡಿ ಹಳ್ಳಿಯ ಆರ್.ಚೆನ್ನಿಗರಾಮಯ್ಯ ಅವರನ್ನು ಹೊರತುಪಡಿಸಿ ಉಳಿದ ಎಲ್ಲರೂ ಬೇರೆ ತಾಲ್ಲೂಕಿನಿಂದ ಬಂದವರೇ ಆಗಿರುವುದು ಇಲ್ಲಿನ ವಿಶೇಷ.

1957ರಲ್ಲಿ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಆಗ ಕಾಂಗ್ರೆಸ್‌ನ ಆರ್‌.ಚೆನ್ನಿಗರಾಮಯ್ಯ ಶಾಸಕರಾಗಿದ್ದರು. 1962ರಲ್ಲಿ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಯಿತು. ಆಗ ಪಿಎಸ್‌ಪಿಯ ಟಿ.ಎಸ್‌.ಶಿವಣ್ಣ  ಆಯ್ಕೆಯಾಗಿದ್ದರು. 1978ರಲ್ಲಿ ಮತ್ತೆ ಪರಿಶಿಷ್ಟ ಜಾತಿಗೆ ಮೀಸಲಾಯಿತು. ಮತ್ತೆ 2008ರಲ್ಲಿ ಮೀಸಲು ತೆರವುಗೊಂಡು ಸಾಮಾನ್ಯ ಕ್ಷೇತ್ರವಾಯಿತು. ಜನತಾ ಪರಿವಾರ ಮತ್ತು ಕಾಂಗ್ರೆಸ್‌ ನಡುವಿನ ಜಿದ್ದಾಜಿದ್ದಿ ಈವರೆಗಿನ ಚುನಾವಣೆಗಳಲ್ಲಿ ಕಂಡು ಬಂದಿದೆ. ಪಕ್ಷೇತರರನ್ನು ಇಲ್ಲಿನ ಮತದಾರರು ದೂರ ಇರಿಸಿದ್ದಾರೆ. ಬಿಜೆಪಿ ನೆಲೆಯೂರಲು ಅವಕಾಶ ಕೊಟ್ಟಿಲ್ಲ.

ADVERTISEMENT

2013ರ ಚುನಾವಣೆ: ಕಾಂಗ್ರೆಸ್‌ನಿಂದ ಕೆ.ಎನ್‌.ರಾಜಣ್ಣ, ಜೆಡಿಎಸ್‌ನಿಂದ ನಿವೃತ್ತ ಐಐಎಸ್‌ ಅಧಿಕಾರಿ ಎಂ.ವಿ.ವೀರಭದ್ರಯ್ಯ, ಬಿಜೆಪಿಯಿಂದ ಸುಮಿತ್ರಾ ದೇವಿ ಕಣದಲ್ಲಿದ್ದರು.

2008ರಲ್ಲಿ ನಡೆದ ಸಾರ್ವತ್ರಿಕ ಹಾಗೂ ಉಪ ಚುನಾವಣೆಯ ಸೋಲಿನ ಅನುಕಂಪ, ಜೆಡಿಎಸ್‌ ಅಭ್ಯರ್ಥಿ ಕಡೇ ಗಳಿಗೆಯಲ್ಲಿ ಪ್ರಚಾರಕ್ಕೆ ಬಂದಿದ್ದು ಹಾಗೂ ಡಿಸಿಸಿ ಬ್ಯಾಂಕ್ ಮೂಲಕ ರೈತರಿಗೆ ಸಾಲ ಕೊಡಿಸಿದ ’ಋಣಭಾರ’, ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ ಎಂಬ ಜನರ ಆಕ್ರೋಶ ರಾಜಣ್ಣ ಕೈ ಹಿಡಿಯಿತು. ಬಿಜೆಪಿಯು ಈ ಎರಡು ಪಕ್ಷಗಳ ಅಬ್ಬರದ ನಡುವೆ ಕೊಚ್ಚಿ ಹೋಯಿತು.

2018ರ ಚುನಾವಣೆ: ಈ ಸಲವೂ ರಾಜಣ್ಣ, ವೀರಭದ್ರಯ್ಯ ನಡುವೆ ಸ್ಪರ್ಧೆ ಇದೆ. ಈಗಾಗಲೇ ಈ ಇಬ್ಬರೂ ನಾಯಕರು ಬಿರುಸಿನ  ಪ್ರಚಾರ ಆರಂಭಿಸಿದ್ದಾರೆ. ಪರಸ್ಪರ ಆರೋಪ–ಪ್ರತ್ಯಾರೋಪ, ಸವಾಲು–ಜವಾಬು ನೀಡ ತೊಡಗಿದ್ದಾರೆ.

‘ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ, ಮಾತಿಗೆ ಮುಂಚೆ ಕೋಪ ಮಾಡಿಕೊಳ್ಳುತ್ತಾರೆ’ ಎಂಬ ಅಸಮಾಧಾನ ಕಾಂಗ್ರೆಸ್‌ ಮುಖಂಡ ರಲ್ಲಿದೆ. ಹಿಂದುಳಿದ ವರ್ಗಗಳ ಮುಖಂಡರ ಕೊರತೆಯನ್ನು ಜೆಡಿಎಸ್‌ ಎದುರಿಸುತ್ತಿದೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಉದ್ಯೋಗದ ಅವಕಾಶ ಸೃಷ್ಟಿಸಿಲ್ಲ. ಕ್ಷೇತ್ರದಲ್ಲಿ ಮನೆ ಮಾಡುವುದಾಗಿ ಹೇಳಿ ಮಾತು ತಪ್ಪಿದ್ದಾರೆ ಎಂದು ಜೆಡಿಎಸ್‌ ಪ್ರಚಾರ ಮಾಡುತ್ತಿದೆ.

ಕೈ ಮರದಲ್ಲಿ ವೀರಭದ್ರಯ್ಯ ಮನೆ ಕಟ್ಟಿದ್ದಾರೆ. ಕ್ಷೇತ್ರದಲ್ಲೇ ಉಳಿಯುತ್ತೇನೆ. ಗಾರ್ಮೆಂಟ್ಸ್‌ಗಳನ್ನು ಪ್ರಾರಂಭಿಸಿ ಉದ್ಯೋಗ ಸೃಷ್ಟಿಸುತ್ತೇನೆ, ಶಾಶ್ವತ ನೀರಾವರಿ ಯೋಜನೆ ಮೂಲಕ ನೀರಿನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಕಳೆದ ಸೋಲಿನ ಅನುಕಂಪ ಮುಂದು ಮಾಡಿ ಎಚ್‌.ಡಿ.ಕುಮಾರಸ್ವಾಮಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ.

ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ರಾಜಣ್ಣ ಮುಂದು ಮಾಡಿದ್ದಾರೆ. ಹೊಸದಾಗಿ ತೆರೆದಿರುವ ಪದವಿ ಕಾಲೇಜುಗಳು, ಉಪ ಪ್ರಾದೇಶಿಕ ಸಾರಿಗೆ ಕಚೇರಿ (ಎಆರ್‌ಟಿಒ), ಡಯಟ್‌, ಐಟಿಐ ಕಾಲೇಜು, ಕೆಎಸ್‌ಆರ್‌ಟಿಸಿ ಡಿಪೊ ಸ್ಥಾಪನೆ, ರಸ್ತೆಗಳ ಅಭಿವೃದ್ಧಿ, ಬಡ ಮಕ್ಕಳ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ಮುಂತಾದ ಅಭಿವೃದ್ಧಿ ಕೆಲಸಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಡಿಸಿಸಿ ಬ್ಯಾಂಕ್‌ ಮೂಲಕ 22 ಸಾವಿರ ಕುಟುಂಬಗಳಿಗೆ ಕೊಟ್ಟಿದ್ದ ₹72 ಕೋಟಿ ಸಾಲ ಮನ್ನಾದ ಬಗ್ಗೆ ಒತ್ತಿ ಹೇಳುತ್ತಿದ್ದಾರೆ. ’ಇನ್ನೊಮ್ಮೆ ಅವಕಾಶ ಸಿಕ್ಕರೆ ಮಧುಗಿರಿ ತಾಲ್ಲೂಕನ್ನು ಜಿಲ್ಲಾ ಕೇಂದ್ರವಾಗಿ ಮಾಡುತ್ತೇನೆ, ಗಾರ್ಮೆಂಟ್ಸ್‌ ಗಳನ್ನು ಪ್ರಾರಂಭಿಸಿ ಉದ್ಯೋಗ ಸೃಷ್ಟಿಸುತ್ತೇನೆ, ಎತ್ತಿನಹೊಳೆ ಯೋಜನೆ ಮೂಲಕ ತಾಲ್ಲೂಕಿನ ಕೆರೆಗಳನ್ನು ತುಂಬಿಸುತ್ತೇನೆ’ ಎಂದು ಮತದಾರರಿಗೆ ಭರವಸೆ ನೀಡುತ್ತಿದ್ದಾರೆ.

ಬಿಜೆಪಿಯಲ್ಲಿ ಆ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ್‌ರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ, ಕುರುಬ ಸಮುದಾಯದ ಡಾ.ಎಂ.ಆರ್‌.ಹುಲಿನಾಯ್ಕರ್‌  ಟಿಕೆಟ್‌  ಆಕಾಂಕ್ಷಿಗಳು. ಹುಲಿನಾಯ್ಕರ್‌ ಅವರನ್ನು ಕಣಕ್ಕಿಳಿಸಲು ಆ ಪಕ್ಷ ಯೋಚಿಸಿದಂತಿದೆ. ಆದರೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸ್ಥಳೀಯ ಅಭ್ಯರ್ಥಿ ಗೆಲ್ಲಿಸಿ ಎಂದು ತುಮುಲ್‌ ಮಾಜಿ ಅಧ್ಯಕ್ಷ ನಾಗೇಶ್‌ಬಾಬು ಕ್ಷೇತ್ರದಲ್ಲಿ ಕಾಲ್ನಡಿ ಜಾಥಾ ಮಾಡುತ್ತಿದ್ದಾರೆ.

ಶೇಂಗಾ ಮತ್ತು ವಲಸೆ

ಶೇಂಗಾ ನಂಬಿಯೇ ಇಲ್ಲಿನ ಜನರು ಬದುಕು ನಡೆಸಿದ್ದಾರೆ. ಈಗೀಗ ಕಾಕಡ, ಚೆಂಡುಹೂವು, ಕನಕಾಂಬರ ಹೂವು ಕೃಷಿ ಅಲ್ಲಲ್ಲಿ ಕಾಣುತ್ತಿದೆ. ದಶಕಗಳ ಹಿಂದೆ ಮಧುಗಿರಿಯು ದಾಳಿಂಬೆಗೆ ಹೆಸರುವಾಸಿಯಾಗಿತ್ತು. ಆದರೆ ಪದೇಪದೇರೋಗಕ್ಕೆ ತುತ್ತಾದ ಪರಿಣಾಮ ಈ ಕೃಷಿ ಕಡಿಮೆಯಾಗಿದೆ. ಅ‌ಲ್ಪಸ್ವಲ್ಪ ಬೆಳೆಯುತ್ತಿರುವರು ಕೈ ಸುಟ್ಟಿಕೊಂಡು ಮತ್ತೇ ಶೇಂಗಾದ ಕಡೆಯೇ ನೋಡುತ್ತಿದ್ದಾರೆ. ಜಿಲ್ಲೆಯ ಬೇರೆ ಕ್ಷೇತ್ರಗಳಿಗೆ ಹೋಲಿಸಿಕೊಂಡರೆ ತೋಟಗಾರಿಕೆಯಲ್ಲೂ ಹಿಂದೆ ಉಳಿದಿದೆ.

ಕೃಷಿ ಬಿಟ್ಟರೆ ಯಾವುದೇ ಉದ್ಯೋಗದ ಅವಕಾಶ ಇಲ್ಲವಾಗಿದೆ. ಮಹಿಳೆಯರು ತುಮಕೂರಿನಲ್ಲಿರುವ ಗಾರ್ಮೆಂಟ್ಸ್‌ಗಳಿಗೆ ಬರಬೇಕಾಗಿದೆ. ಕೆಲಸಕ್ಕಾಗಿ ಬೆಂಗಳೂರಿನತ್ತ ವಲಸೆ ಹೋಗುತ್ತಿದ್ದಾರೆ. ಕ್ಷೇತ್ರದ ಗಡಿಭಾಗದ ಬಹುತೇಕ ಗ್ರಾಮಗಳ ಯುವಕರು ಉದ್ಯೋಗ ಅರಸಿ ವಲಸೆ ಹೋಗಿದ್ದಾರೆ. ಕೃಷಿಗೆ ಶಾಶ್ವತ ನೀರಾವರಿ ಇಲ್ಲಿನ ಜನರ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.