ADVERTISEMENT

ಒತ್ತುವರಿಯ ಜತೆಗೆ ಚರಂಡಿಯಲ್ಲೂ ನ್ಯೂನತೆ

ರಾಜಕಾಲುವೆಗೆ ಸ್ಥಿತಿಗತಿ ಪರಿಶೀಲನಾ ಸಮಿತಿಯಿಂದ ಮಧ್ಯಂತರ ವರದಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 5:10 IST
Last Updated 12 ಜೂನ್ 2018, 5:10 IST
ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ರಾಜಕಾಲುವೆಯ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಕೈಗೊಂಡಿರುವುದು.
ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ರಾಜಕಾಲುವೆಯ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಕೈಗೊಂಡಿರುವುದು.   

ಮಂಗಳೂರು: ಮಹಾಮಳೆಯಿಂದ ನಗರದಲ್ಲಿ ಉದ್ಭವಿಸಿದ ನೆರೆ ಸ್ಥಿತಿಗೆ ಕಾರಣಗಳನ್ನು ಹುಡುಕುವ ಕೆಲಸ ಮುಂದುವರಿದಿದೆ. ಮಳೆ ನೀರು ಹರಿದು ಹೋಗಲು ನಿರ್ಮಿಸಿರುವ ರಾಜಕಾಲುವೆಗಳಲ್ಲಿ ಲೋಪದೋಷಗಳ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಈ ಮಧ್ಯೆ ನಗರದಲ್ಲಿ ಕೃತಕ ನೆರೆ ಸೃಷ್ಟಿಯಾಗಲು ರಾಜಕಾಲುವೆಯ ಒತ್ತುವರಿಯೂ ಒಂದು ಕಾರಣ ಎನ್ನುವ ಮಾಹಿತಿ ಇದೀಗ ಸಮಿತಿಯ ಪರಿಶೀಲನೆಯಿಂದ ಸ್ಪಷ್ಟವಾಗಿದೆ.

ನಗರದ ವ್ಯಾಪ್ತಿಯ ರಾಜಕಾಲುವೆ‌ಗಳ ಒತ್ತುವರಿ ಮಾಡಿರುವುದು ಮೇಲ್ನೋಟಕ್ಕೆ ನಿಜ ಎನ್ನುವ ಅಭಿಪ್ರಾಯ ಒತ್ತುವರಿ ಸಮೀಕ್ಷೆ ನಡೆಸಿದ ಮುಡಾ ಆಯುಕ್ತ ಡಾ. ಭಾಸ್ಕರ್‌ ನೇತೃತ್ವದ ಸಮಿತಿ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರಿಗೆ ಸಲ್ಲಿಸಿದ ವರದಿಯಲ್ಲಿ ವ್ಯಕ್ತವಾಗಿದೆ. ನಗರದ ಕೊಟ್ಟಾರಚೌಕಿ, ಪಂಪ್‌ವೆಲ್‌, ಅಳಕೆ, ಸುರತ್ಕಲ್‌ ಹಾಗೂ ಅತ್ತಾವರ ಭಾಗದಲ್ಲಿ ಸಮೀಕ್ಷೆ ನಡೆಸಿದ ತಂಡ ಸದಸ್ಯರು, 27 ಪುಟಗಳ ಮಧ್ಯಂತರ ವರದಿಯನ್ನು ಈಗಾಗಲೇ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ.

ಕೊಟ್ಟಾರ ಸೇರಿದಂತೆ ಕೆಲವು ಕಡೆಗಳಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿರುವುದು ಕಂಡು ಬಂದಿದೆ. ಅಲ್ಲದೇ ಚರಂಡಿ ಸಮಸ್ಯೆಯೂ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಇದನ್ನು ವಿಸ್ತಾರವಾಗಿ ವರದಿಯಲ್ಲಿ ಉಲ್ಲೇಖಿಸಬೇಕಾಗಿದೆ. ಹೀಗಾಗಿ ಸಂಪೂರ್ಣ ಸಮೀಕ್ಷೆ ನಡೆಸಿ, ಅಂತಿಮ ವರದಿ ಸಲ್ಲಿಸಲು ಸಮಿತಿಯು ಇನ್ನೂ ಎರಡು ವಾರಗಳ ಕಾಲಾವಕಾಶ ಕೋರಿದೆ.

ADVERTISEMENT

ಅಲೆಗಳ ಅಬ್ಬರವೂ ಕಾರಣ: ಮೇ 29 ರಂದು ಸುರಿದ ಧಾರಾಕಾರ ಮಳೆಯ ಪರಿಣಾಮ ನಗರದಾದ್ಯಂತ ನೀರು ಸಂಗ್ರಹಗೊಂಡು ಜನಜೀವನ ಅಸ್ತವ್ಯಸ್ತವಾಗಿತ್ತು. ಮಳೆ ನೀರಿನ ಜತೆಗೆ ಸಮುದ್ರದ ಅಬ್ಬರವೂ ಕೃತಕ ನೆರೆಗೆ ಕಾರಣ ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್ ಹೇಳುತ್ತಾರೆ.

ಸಮುದ್ರ ಅಬ್ಬರದಿಂದಾಗಿ ನದಿ ನೀರು ಹಿಮ್ಮುಖವಾಗಿ ಚಲಿಸಿದೆ. ಹಾಗಾಗಿ ರಾಜಕಾಲುವೆಯ ನೀರೂ ನದಿಗೆ ಸೇರದಂತಾಗಿತ್ತು. ಸಂಜೆ 6 ಗಂಟೆಯ ನಂತರ ಅಲೆಗಳ ಅಬ್ಬರ ಕಡಿಮೆಯಾಗಿದ್ದು, ನಗರದಲ್ಲಿ ಸಂಗ್ರಹವಾಗಿದ್ದ ನೀರು ಸರಾಗವಾಗಿ ಹರಿದು ಹೋಗಿದೆ. ಇದರರ್ಥ ಚರಂಡಿ ವ್ಯವಸ್ಥೆ ಸರಿಯಾಗಿದೆ ಎನ್ನುವುದು ಸಾಬೀತಾಗುತ್ತದೆ ಎನ್ನುವುದು ಅವರ ವಿವರಣೆ.

ಇದರ ಜತೆಗೆ ರಾಜಕಾಲುವೆಯಲ್ಲಿ ಆಗಿರುವ ಲೋಪದೋಷಗಳೂ ಕೃತಕ ನೆರೆಗೆ ಕಾರಣ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ರಾಜಕಾಲುವೆಯ ಸ್ಥಿತಿಗತಿಗಳ ಅಧ್ಯಯನ ಹಾಗೂ ರಾಜಕಾಲುವೆಗಳ ಸುಧಾರಣಾ ಕ್ರಮಗಳ ಕುರಿತು ಸಮಗ್ರ ವರದಿ ನೀಡಲು ಸಮಿತಿಯನ್ನು ಜಿಲ್ಲಾಧಿಕಾರಿ ರಚಿಸಿದ್ದಾರೆ.

ಮಧ್ಯಂತರ ವರದಿಯಲ್ಲಿ ಏನಿದೆ: ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಭಾಸ್ಕರ್‌ ಎನ್‌. ನೇತೃತ್ವದಲ್ಲಿ ಮಹಾನಗರ ಪಾಲಿಕೆ ಕಂದಾಯ ವಿಭಾಗದ ಮುಖ್ಯಸ್ಥೆ ಗಾಯತ್ರಿ ನಾಯಕ್‌, ಪ್ರೊಬೇಷನರಿ ಉಪವಿಭಾಗಾಧಿಕಾರಿ ಮದನ್‌ ಮೋಹನ್‌, ಕೆಯುಐಡಿಎಫ್‌ಸಿ ಮುಖ್ಯಾಧಿಕಾರಿ ಜಯಪ್ರಕಾಶ್‌, ಧಾರ್ಮಿಕ ದತ್ತಿ ಇಲಾಖೆಯ ತಹಶೀಲ್ದಾರ್‌ ಮೋಹನ್‌ ಅವರನ್ನೊಳಗೊಂಡ 5 ಮಂದಿಯ ಸಮಿತಿ ನಗರದ ವಿವಿಧೆಡೆ ನಡೆದಿರುವ ರಾಜಕಾಲುವೆಗಳ ಒತ್ತುವರಿ ಕುರಿತು ಛಾಯಾಚಿತ್ರ ಸಹಿತ ವರದಿಯೊಂದನ್ನು ಸಿದ್ಧಪಡಿಸಿ 27 ಪುಟಗಳ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಸಿದೆ.

ಯಾವ ಪ್ರದೇಶದಲ್ಲಿ ಒತ್ತುವರಿ ಆಗಿದೆ? ಯಾವ ರೀತಿಯಲ್ಲಿ ಒತ್ತುವರಿ ಮಾಡಲಾಗಿದೆ? ಇದರಿಂದ ಆಗಿರುವ ಸಮಸ್ಯೆ ಏನು? ಎಂಬಿತ್ಯಾದಿ ವಿಚಾರವನ್ನು ವರದಿಯಲ್ಲಿ ಮಂಡಿಸಲಾಗಿದೆ. ರಾಜಕಾಲುವೆಗಳ ಜತೆಗೆ ಚರಂಡಿ ವ್ಯವಸ್ಥೆಯಲ್ಲಿ ಇರುವ ನ್ಯೂನತೆಗಳು, ಮಳೆ ನೀರು ಸರಾಗವಾಗಿ ಹರಿಯಲು ಇರುವ ಸಮಸ್ಯೆ ಏನು? ಎಂಬ ವಿಚಾರವನ್ನು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಒತ್ತುವರಿಯ ಸಮಸ್ಯೆ ಒಂದೆಡೆಯಾದರೆ, ರಾಜಕಾಲುವೆ, ಪ್ರಮುಖ ತೋಡುಗಳಲ್ಲಿರುವ ಅಡ್ಡಾದಿಡ್ಡಿ ಪೈಪ್‌ಗಳು, ಡ್ರೈನೇಜ್‌ಗಳು ದೊಡ್ಡ ಮಟ್ಟದಲ್ಲಿ ಮಳೆ ನೀರಿಗೆ ಅಡಚಣೆಯಾಗಿದೆ ಎಂಬುದು ಸಮಿತಿಯ ಗಮನಕ್ಕೆ ಬಂದಿದೆ. ರಾಜಕಾಲುವೆಯಲ್ಲಿ ಹೂಳೆತ್ತದೆ ದೊಡ್ಡ ಪೊದೆಗಳಿದ್ದು, ಇದರಿಂದ ಪ್ಲಾಸ್ಟಿಕ್‌ ಬಾಟಲಿ ರಾಶಿಗಳು, ಬ್ಯಾಗ್‌ಗಳು ತಡೆನಿಂತು ನೀರು ಹರಿವಿಕೆಗೆ ಅಡಚಣೆಯಾಗಿದೆ. ಪಂಪ್‌ವೆಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾದ ಅಡೆತಡೆಗಳು, ಅತ್ತಾವರದಲ್ಲಿ ಒಳಚರಂಡಿ ಪೈಪ್‌ಲೈನ್‌ಗಳೂ ನೀರಿನ ಹರಿವಿಗೆ ತಡೆಯಾಗಿರುವುದು ಕಂಡು ಬಂದಿದೆ.

ಇದೆಲ್ಲವನ್ನೂ  ಕೂಲಂಕಷವಾಗಿ ಪರಿಶೀಲಿಸಿರುವ ಸಮಿತಿ, ಈ ಕುರಿತು ವಿಸ್ತೃತ ಸಮೀಕ್ಷೆ ನಡೆಸಲು ನಾಲ್ವರು ಸಿಟಿ ಸರ್ವೇಯರ್‌ಗಳನ್ನು ನೀಡುವಂತೆ ಮನವಿ ಮಾಡಿದೆ. ಜತೆಗೆ ಇದಕ್ಕೆ ಎನ್‌ಐಟಿಕೆ ತಂತ್ರಜ್ಞರ ಸಹಕಾರವನ್ನೂ ಕೇಳಿದ್ದು, ಜಿಲ್ಲಾಡಳಿತದಿಂದ ಒಪ್ಪಿಗೆ ಸಿಕ್ಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪರಿಶೀಲನೆಗಾಗಿ ಉಪಗ್ರಹ ಸರ್ವೇ

ರಾಜಕಾಲುವೆಯ ಒತ್ತುವರಿಯ ಪರಿಶೀಲನೆಗಾಗಿ ಉಪಗ್ರಹ ಸರ್ವೇ ನಡೆಸಲು ಜಿಲ್ಲಾಡಳಿತ ಮುಂದಾಗಿದೆ. 10 ವರ್ಷಗಳ ಹಿಂದೆ ರಾಜಕಾಲುವೆ ಸ್ಥಿತಿಗತಿ ಮತ್ತು ಸದ್ಯದ ಸ್ಥಿತಿಯ ಉಪಗ್ರಹ ಆಧಾರಿತ ಚಿತ್ರಗಳನ್ನು ಪರಿಶೀಲಿಸಿ, ನಂತರ ತೆರವು ಕಾರ್ಯಾಚರಣೆ ಕೈಗೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ.

ಕೆಲವು ಪ್ರದೇಶಗಳಲ್ಲಿ ಮಳೆ ನೀರು ಹರಿದು ಹೋಗುವ ತೋಡುಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದು ಸಮಿತಿ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಮಳೆಗಾಲಕ್ಕೆ ಸಂಬಂಧಪಟ್ಟಂತೆ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ನೆರೆ ಪರಿಸ್ಥಿತಿ ಸೃಷ್ಟಿಯಾಗಲು ಕಾರಣಗಳೇನು ಎಂಬುದನ್ನು ಪತ್ತೆ ಮಾಡಲು ಜಿಲ್ಲಾಡಳಿತ ಈ ಕ್ರಮ ಅನುಸರಿಸುತ್ತಿದೆ.

ಮೇ 29 ರಂದು ಸುರಿದ ಮಹಾಮಳೆಯು ಐತಿಹಾಸಿಕವಾಗಿದ್ದು, ಈ ಮಳೆಯಿಂದ ಉದ್ಭವಿಸಿರುವ ಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ತಿಳಿಸಿದ್ದಾರೆ.

ಒತ್ತುವರಿ ಪರಿಶೀಲನೆ ಜತೆಗೆ ಸಮರ್ಪಕ ವ್ಯವಸ್ಥೆಯನ್ನು ನಿರ್ಮಿಸುವ ಕುರಿತು ವರದಿ ನೀಡಲು ಸಮಿತಿಗೆ ಸೂಚಿಸಲಾಗಿದೆ. ಸಮಿತಿ 2 ವಾರಗಳ ಕಾಲಾವಕಾಶ ಕೋರಿದೆ
ಸಸಿಕಾಂತ್ ಸೆಂಥಿಲ್‌, ಜಿಲ್ಲಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.