ADVERTISEMENT

ಕಟ್ಟುನಿಟ್ಟಿನ ನೀತಿಸಂಹಿತೆ, ಬ್ಯಾನರ್ ತೆರವು

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 6:33 IST
Last Updated 8 ಜನವರಿ 2014, 6:33 IST
ಮೂಲ್ಕಿ ಪಟ್ಟಣ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ಮೂಲ್ಕಿಯಲ್ಲಿರುವ  ಫ್ಲೆಕ್ಸ್, ಬ್ಯಾನರ್‌ಗಳಿಗೆ ಬಿಳಿ ಬಣ್ಣದ ಕಾಗದ ಅಂಟಿಸಲಾಯಿತು.
ಮೂಲ್ಕಿ ಪಟ್ಟಣ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ಮೂಲ್ಕಿಯಲ್ಲಿರುವ ಫ್ಲೆಕ್ಸ್, ಬ್ಯಾನರ್‌ಗಳಿಗೆ ಬಿಳಿ ಬಣ್ಣದ ಕಾಗದ ಅಂಟಿಸಲಾಯಿತು.   

ಮೂಲ್ಕಿ:  ಮೂಲ್ಕಿ ಪಟ್ಟಣ ಪಂಚಾ­ಯಿತಿಗೆ ಇದೇ 27ರಂದು ನಡೆಯುವ ಚುನಾವಣೆಗೆ 6ರಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು ಇದನ್ನು ­ ಜಾರಿ ಮಾಡಲಾಗುತ್ತಿದೆ. ಮೂಲ್ಕಿ ವ್ಯಾಪ್ತಿ­ಯ­ಲ್ಲಿರುವ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸ­ಲಾಗಿದೆ.

ಈ ಬಾರಿ ಕಾಂಗ್ರೆಸ್‌ ಬ್ಲಾಕ್ ಅಧ್ಯಕ್ಷ ಪಯ್ಯೊಟ್ಟು ಸದಾಶಿವ ಸಾಲ್ಯಾನ್‌ರಿಗೆ ಕಂಬಳದ ಯಜಮಾನನ ನೆಲೆಯಲ್ಲಿ ರಾಜ್ಯೋತ್ಸವದ ಪ್ರಶಸ್ತಿ ನೀಡಲಾಗಿದ್ದು ಅವರಿಗೆ ಶುಭಕೋರುವ ಬ್ಯಾನರ್, ಫ್ಲೆಕ್‌್ಸಗಳು ಮೂಲ್ಕಿ ವ್ಯಾಪ್ತಿಯಲ್ಲಿ ಅನೇಕ ಕಡೆಗಳಲ್ಲಿ ರಾರಾಜಿಸುತ್ತಿದ್ದವು ಇದರೊಂದಿಗೆ ಮೋದಿ ಹಾಗೂ ಬಿಜೆಪಿಯ ಕೆಲವೊಂದು ಶುಭ ಕೋರುವ ಬ್ಯಾನರ್‌ಗಳು ಮಾತ್ರವಲ್ಲದೆ ನಾರಾಯಣಗುರು ಚಲನಚಿತ್ರದ ಬ್ಯಾನರ್‌ಗಳನ್ನೂ ತೆರವು ಮಾಡಿಸಲಾಗಿದೆ.

ಮೂಲ್ಕಿ ಹೆದ್ದಾರಿ ಬದಿಯಲ್ಲಿ ಉಡುಪಿ ನಂದಿಕೂರು ಅಡ್ವೆಯಲ್ಲಿ ನಡೆಯಲಿರುವ ಕೋಟಿ ಚೆನ್ನಯ ಕಂಬಳದ ಶುಭಕೋರುವ ಬ್ಯಾನರ್‌ಗೆ ಬಿಳಿ ಕಾಗದವನ್ನು ಅಂಟಿಸಿ ವಿರೂಪ ಮಾಡಲಾಗಿದೆ ಎಂದು ಕಂಬಳ ಪ್ರೇಮಿಗಳ ಆರೋಪವಾಗಿದೆ. ಇದರಲ್ಲಿ ಸದಾಶಿವ ಸಾಲ್ಯಾನ್‌ರ ಚಿತ್ರವಿದ್ದುದೇ ಇದಕ್ಕೆ ಕಾರಣ.

ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದರೂ ಎರಡು ದಿನಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ. ಮೂಲ್ಕಿ ಪಟ್ಟಣ ಪಂಚಾಯಿತಿಯ ಆಡಳಿತಾಧಿಕಾರಿಯಾಗಿ ತಹಶೀಲ್ದಾರ್ ರವಿಚಂದ್ರ ಅವರು ನೇಮಕಗೊಂಡಿದ್ದಾರೆ.

ಜ.29ರವರೆಗೆ ನೀತಿಸಂಹಿತೆ ಮೂಲ್ಕಿ ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ. ಕಳೆದ ಬಾರಿಯ ಚುನಾವಣೆಯಲ್ಲಿ ಒಟ್ಟು 17 ಸ್ಥಾನಗಳಲ್ಲಿ ಕಾಂಗ್ರೆಸ್ 9,ಬಿಜೆಪಿ– 7, ಜೆಡಿಎಸ್ 1 ಸ್ಥಾನ ಗಳಿಸಿದ್ದು ಕಾಂಗ್ರೆಸ್ ಅಧಿಕಾರ ನಡೆಸಿತ್ತು.

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನ ಪ್ರಮುಖರು ಸಂಭಾವ್ಯ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದು, ಮೂಲ್ಕಿಯಲ್ಲಿ ಆಮ್ ಆದ್ಮಿ ಪಕ್ಷ ಚುನಾವಣೆಗೆ ಸ್ಪರ್ಧಿಸುವ ಎಲ್ಲ ಸೂಚನೆಗಳು ಲಭಿಸಿದೆ. ಇತ್ತೀಚೆಗೆ ಸಾರ್ವಜನಿಕರ ಪ್ರತಿಭಟನಾ ಸಂದರ್ಭದಲ್ಲಿ ರಿಕ್ಷಾ ಚಾಲಕನಿಗೆ ಸಚಿವರು ಹಲ್ಲೆ ನಡೆಸಿದರು ಎಂಬ ವಿವಾದವು ಸಹ ಚುನಾವಣೆಯಲ್ಲಿ ಪ್ರತಿಧ್ವನಿಸುವ ಸಾಧ್ಯತೆ ಕಂಡು ಬರುತ್ತಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ಈಗಾಗಲೇ ಸಾರ್ವಜನಿಕ ಸಭೆ ನಡೆಸಿ ಪರ ವಿರೋಧ ಹೇಳಿಕೆ ನೀಡಲಾರಂಭಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.