ADVERTISEMENT

ಕಠುವಾ ಪ್ರಕರಣ: ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 10:01 IST
Last Updated 17 ಏಪ್ರಿಲ್ 2018, 10:01 IST

ಮಂಗಳೂರು: ಕಠುವಾ ಹಾಗೂ ಉನ್ನಾವ್‌ನಲ್ಲಿ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಮಂಗಳೂರು ನಾಗರಿಕರಿಂದ ಮೋಂಬತ್ತಿ ಬೆಳಗಿಸಿ ಪ್ರತಿಭಟನೆ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ನಡೆಯಿತು.

ನಾಲ್ಕು ವರ್ಷಗಳ ಹಿಂದೆ ಅತ್ಯಾಚಾರಕ್ಕೀಡಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯಳ ತಾಯಿ ಕುಸುಮಾವತಿ ಗೌಡ ಹಾಗೂ ತಂದೆ ಚಂದಪ್ಪ ಗೌಡ ಅವರು ಮೋಂಬತ್ತಿ ಬೆಳಗಿಸುವ ಮೂಲಕ ಪ್ರತಿಭಟನೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿಚಾರವಾದಿಗಳ ಸಂಘದ ಅಧ್ಯಕ್ಷ ಡಾ. ನರೇಂದ್ರ ನಾಯಕ್ ಮಾತನಾಡಿ, ‘ಜಮ್ಮು ಕಾಶ್ಮೀರ ಕಠುವಾದಲ್ಲಿ 8 ವರ್ಷದ ಬಾಲಕಿ ಹಾಗೂ ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಮನುಷ್ಯತ್ವಕ್ಕೆ ವಿರುದ್ಧವಾದದ್ದು. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಹೇಳಿದರು.

ADVERTISEMENT

ಅತ್ಯಾಚಾರ ನಡೆದಾಗಲೆಲ್ಲ ಹುಡುಗಿಯರು ತೊಡುವ ಬಟ್ಟೆ ಬಗ್ಗೆ ಟೀಕೆ ಮಾಡಲಾಗುತ್ತದೆ. ಹಾಗೆಂತ ಸೀರೆ ಉಟ್ಟವರ ಮೇಲೆ, ಪೂರ್ತಿ ವಸ್ತ್ರ ಧರಿಸಿದವರ ಮೇಲೆ ಅತ್ಯಾಚಾರ ನಡೆದಿಲ್ಲವೇ? ನಾವು ಮೊದಲಿಗೆ ಅತ್ಯಾಚಾರ ಕುರಿತು ಹೊಂದಿರುವ ಮನಸ್ಥಿತಿಯಿಂದ ಹೊರಗೆ ಬರಬೇಕು ಎಂದು ಅವರು ನುಡಿದರು.

ವಿದ್ಯಾರ್ಥಿ ನಾಯಕಿ ಶ್ರೇಯಾ ರಾವ್, ಸೌಜನ್ಯ ತಾಯಿ ಕುಸುಮಾವತಿ ಗೌಡ, ಮಹಮ್ಮದ್ ಕುಂಞಿ ಮುಂತಾದವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅತ್ಯಾಚಾರ ವಿರುದ್ಧ ಪ್ರತಿಜ್ಞೆ ಸ್ವೀಕರಿಸಲಾಯಿತು.

ಮುಸ್ಲಿಂ ಸಂಘಟನೆಗಳ ವತಿಯಿಂದ ಪ್ರತಿಭಟನೆ:

ಕಠುವಾ ಘಟನೆಯನ್ನು ಖಂಡಿಸಿ ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಸೋಮವಾರ ಬೆಳಿಗ್ಗೆ ಜಿಲ್ಲಾಧಿಕಾರಿಕಚೇರಿ ಎದುರು ಮುಸ್ಲಿಂ ಸಂಘಟನೆಗಳ ವತಿಯಿಂದ ಮೌನ ಪ್ರತಿಭಟನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.