ADVERTISEMENT

ಕಡಲ್ಕೊರೆತ: ಶಾಶ್ವತ ಪರಿಹಾರದ ಭರವಸೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 5:15 IST
Last Updated 11 ಜುಲೈ 2012, 5:15 IST

ಉಳ್ಳಾಲ: ಸೋಮೇಶ್ವರ ಗ್ರಾಮದ ಉಚ್ಚಿಲ ಬೀಚ್ ರೋಡಿನಿಂದ ತಲಪಾಡಿವರೆಗೆ ಕಳೆದ ಎರಡು ವರ್ಷಗಳಿಂದ ಕಡಲ್ಕೊರೆತ ಹೆಚ್ಚುತ್ತಿದ್ದು, ಮಂಗಳವಾರ ಕಡಲ್ಕೊರೆತದಿಂದ ಹಾನಿಗೀಡಾದ ಪ್ರದೇಶಗಳಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭೇಟಿ ನೀಡಿದರು.

 ಉಚ್ಚಿಲ ಬೀಚ್ ಬಳಿ ಕಡಲ್ಕೊರೆತದಿಂದ ಅಧಿಕ ಹಾನಿಯಾಗಿರುವ ಪ್ರದೇಶಕ್ಕೆ ಶಾಸಕ ಯು.ಟಿ.ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದರೆ, ಇನ್ನೊಂದು ಕಡೆಯಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಭಟ್, ಸದಸ್ಯ ಸತೀಶ್ ಕುಂಪಲ, ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ಭೇಟಿ ನೀಡಿದರು.

 ಸದಸ್ಯ ಸತೀಶ್ ಕುಂಪಲ ಮಾತನಾಡಿ, ಎಡಿಬಿ ಯೋಜನೆಯಡಿ ಉಳ್ಳಾಲದಲ್ಲಿ ಶಾಶ್ವತ ಕಾಮಗಾರಿ ನಡೆಯುವಂತೆ, ಉಚ್ಚಿಲದಲ್ಲೂ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಶಾಸಕ ಯು.ಟಿ.ಖಾದರ್ ಮಾತನಾಡಿ, `ಉಚ್ಚಿಲದಲ್ಲಿ ನಡೆಯುತ್ತಿರುವ ಕಡಲ್ಕೊರೆತದ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚಿಸುತ್ತೇನೆ. ಸಂಬಂಧಿಸಿದ ಅಧಿಕಾರಿಗಳು ಕಡಲ್ಕೊರೆತದ ಅಧ್ಯಯನ ನಡೆಸಿ ತಾತ್ಕಾಲಿಕ ಕ್ರಮಕ್ಕೆ ಒತ್ತಾಯಿಸುತ್ತೇನೆ~ ಎಂದರು.

`ಉಳ್ಳಾಲದಲ್ಲಿ ಎಡಿಬಿ ಯೋಜನೆಯಡಿ ಪ್ರಥಮ ಹಂತದ ಕಾಮಗಾರಿಗೆ ಜು. 25ರಂದು ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಎಡಿಬಿಯಿಂದ ಅಧ್ಯಯನ ತಂಡ ಆಗಮಿಸಿದ್ದು, ಕಡಲ್ಕೊರೆತದ ತೀವ್ರತೆಯ ಅಧ್ಯಯನ ನಡೆಸುತ್ತಿದೆ. ಇಲ್ಲಿ ಕಡಲ್ಕೊರೆತಕ್ಕೆ ಸಂಬಂಧಪಟ್ಟಂತೆ ಅಧ್ಯಯನ ನಡೆಸಿ ಅದಕ್ಕೆ ಬೇಕಾದ ಮಾದರಿಯಲ್ಲಿ ಕಾಮಗಾರಿ ನಡೆಯಲಿದೆ~ ಎಂದರು.

ಈಗಾಗಲೇ ಸ್ಯಾಪ್ ಮಾದರಿಯಲ್ಲಿ ಕಡಲ್ಕೊರೆತ ತಡೆಗೆ ಕಾಮಗಾರಿ ನಡೆಸುವ ತಂಡವೊಂದು ಭರವಸೆ ನೀಡಿದ್ದು, ತಜ್ಞರ ವರದಿಯಂತೆ ಶಾಶ್ವತ ಕಾಮಗಾರಿ ನಡೆಯಲಿದೆ ಎಂದರು. ಚಂದ್ರಶೇಖರ್ ಉಚ್ಚಿಲ್, ಬಂದರು ಇಲಾಖೆಯ ಕಾರ‌್ಯಕಾರಿ ಎಂಜಿನಿಯರ್ ಎ.ಎಸ್.ರಾವ್, ಮೀನುಗಾರಿಕಾ ಅಧಿಕಾರಿ ಸುರೇಶ್ ಕುಮಾರ್,  ತಾ.ಪಂ ಸದಸ್ಯರಾದ ದೇವಕಿ ರಾಘವ, ರಾಜೀವಿ ಕೆಂಪುಮಣ್ಣು, ಧನ್ಯವತಿ,  ಸೋಮೇಶ್ವರ ಪಂಚಾಯಿತಿ ಉಪಾಧ್ಯಕ್ಷ ರಮೇಶ್ ಕೊಲ್ಯ, ಜೀವನ್ ತೊಕ್ಕೊಟ್ಟು, ದೇವದಾಸ್ ಕೊಲ್ಯ, ಹರಿಯಪ್ಪ ಸಾಲ್ಯಾನ್, ಪ್ರಕಾಶ್ ಬೆಟ್ಟಂಪಾಡಿ, ರಾಜೇಶ್ ಉಚ್ಚಿಲ್, ಸಾರಥಿ ಉಚ್ಚಿಲ್, ಗ್ರಾ.ಪಂ ಸದಸ್ಯರಾದ ಚಂದ್ರಶೇಖರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಇದ್ದರು.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.