ಮೂಡುಬಿದಿರೆ: ಪಟ್ಟಣದ ಕೋರ್ಟ್ ಜಾಗ ಮತ್ತು ಮಹಾವೀರ ಕಾಲೇಜು ರಸ್ತೆ ಬಳಿ ಹುಲ್ಲು ಪೊದೆ ತೆರವಿನ ಕೆಲಸಕ್ಕಿಂತ ಹೆಚ್ಚು ಬಿಲ್ ಪಾವತಿಯಾಗಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ವಿರೋಧ ಪಕ್ಷದ ಮುಖಂಡರು ಬಿಲ್ ಮಂಜೂರಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷ ರತ್ನಾಕರ ದೇವಾಡಿಗ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ `ಪುರಸಭೆ ಯಂತ್ರದಿಂದಲೆ ಹುಲ್ಲು ಮತ್ತು ಕಳೆ ಕಿತ್ತು ಸ್ವಚ್ಚಗೊಳಿಸಿದಕ್ಕೆ ರೂ. 72 ಸಾವಿರ ಬಿಲ್ ಮಾಡಿದ್ದೀರಿ.
ಪುರಸಭೆಯ 23 ವಾರ್ಡ್‌ಗಳ ಹುಲ್ಲು ಕಿತ್ತರೂ ಇಷ್ಟು ಬಿಲ್ ಆಗುವುದಿಲ್ಲ. ಈ ಕಾಮಗಾರಿಗೆ ಟೆಂಡರ್ ಕೂಡ ಕರೆದಿಲ್ಲ, ಇಲ್ಲಿ ಅವ್ಯವಹಾರ ನಡೆದಿದೆ~ ಎಂದು ಬಿಜೆಪಿಯ ರಾಜೇಶ್ ಮಲ್ಯಾ ಆರೋಪಿಸಿದರು. ಲಕ್ಷ್ಮಣ ಪೂಜಾರಿ, ಪ್ರಸಾದ್ ಕುಮಾರ್, ಪ್ರೇಮಾ ಸಾಲ್ಯಾನ್ ಆರೋಪಕ್ಕೆ ಧ್ವನಿಗೂಡಿಸಿದರು.
ಉಪಾಧ್ಯಕ್ಷೆ ರಮಣಿ, ಕಾಂಗ್ರೆಸ್‌ನ ಡಯನಾ ಸೆರಾವೊ, ಜೆಡಿಎಸ್‌ನ ಭೋಜ ಕೋಟ್ಯಾನ್, ಹನೀಪ್ ಅಲಂಗಾರ್ ಕೂಡ ಟೆಂಡರ್ ಕರೆಯದೆ ನಡೆಸಿದ ಕಾಮಗಾರಿಗೆ ಆಕ್ಷೇಪವ್ಯಕ್ತಪಡಿಸಿದರು.
ತುರ್ತಾಗಿ ಕೆಲಸ ಆಗಬೇಕಿದ್ದರಿಂದ ಟೆಂಡರ್ ಕರೆದಿಲ್ಲ. ಇನ್ನು ಮುಂದೆ 5 ಸಾವಿರಕ್ಕಿಂತ ಹೆಚ್ಚಿನ ಎಲ್ಲಾ ಕಾಮಗಾರಿಗೆ ಟೆಂಡರ್ ಕರೆಯುವುದಾಗಿ ಎಂಜಿನಿಯರ್ ದಿವಾಕರ್ ಸ್ಪಷ್ಟನೆ ನೀಡಿದರು.
ಪುರಸಭೆ ವಾಹನಗಳಿಗೆ ಡಿಸೇಲ್ ಪೂರೈಕೆಯಲ್ಲೂ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಬಿಜೆಪಿ ಸದಸ್ಯರು ಯಾವ್ಯಾವ ವಾಹನಗಳಿಗೆ ಎಷ್ಟೆಷ್ಟು ಡಿಸೇಲ್ ಪೂರೈಕೆಯಾಗಿದೆ ಎನ್ನುವುದರ ಬಗ್ಗೆ ಲಾಗ್‌ಪುಸ್ತಕ ದಾಖಲೆ ನೀಡುವಂತೆ ಮುಖ್ಯಾಧಿಕಾರಿಯನ್ನು ಒತ್ತಾಯಿಸಿದಾಗ ಲಾಗ್‌ಪುಸ್ತಕ ದಾಖಲೆ ಆಗಿಲ್ಲ ಎಂದು ಸಭೆಗೆ ರಶೀದಿ ತೋರಿಸಿದರು.
ರಶೀದಿ ಮೇಲೆ ನಂಬಿಕೆ ಇಲ್ಲ ಲಾಗ್‌ಪುಸ್ತಕವೇ ಬೇಕು ಎಂದು ಬಿಜೆಪಿ ಸದಸ್ಯರು ಪಟ್ಟುಹಿಡಿದರಿಂದ ಒಂದು ಗಂಟೆ ಇದೇ ವಿಚಾರದಲ್ಲಿ ಚರ್ಚೆ ನಡೆಯಿತು. ಎರಡು ದಿನದಲ್ಲಿ ಲಾಗ್‌ಪುಸ್ತಕದಲ್ಲಿ ದಾಖಲಿಸಿ ಕೊಡಲಾಗುವುದು. ಒಂದೇ ವಿಷಯದಲ್ಲಿ ಅನಗತ್ಯ ಚರ್ಚೆ ಬೇಡ ಎಂದು ಅಧ್ಯಕ್ಷರು ತಿಳಿಸಿದ ನಂತರ ಚರ್ಚೆ ಕೊನೆಗೊಂಡಿತು.
ಬಿಲ್ ಸರಿಯಿದೆ, ಕುರ್ಚಿ ಸರಿಯಿಲ್ಲ:
ನಾಗರಕಟ್ಟೆ ಸತ್ಯಸಾರಾಮಣಿ ದೇವಸ್ಥಾನಕ್ಕೆ ಪುರಸಭೆ ನೀಡಿದ 50 ಕುಚಿಗಳಲ್ಲಿ ಹೆಚ್ಚಿನದು ಕಳಪೆ ದರ್ಜೆಯಾಗಿದ್ದು, ಕುಳಿತರೆ ಕುರ್ಚಿ ಒಂದು ಕಡೆ ವಾಲಿ ಬೀಳುತ್ತದೆ. ಇಂತಹ ಕುರ್ಚಿ ಏಕೆ ಕೊಟ್ಟದ್ದು, ಪುರಸಭೆ ಕುರ್ಚಿಗೆ ಪಾವತಿಸಿದ ಬಿಲ್ ಸರಿ ಇದ್ದರೂ ಕುರ್ಚಿಗಳು ಸರಿ ಇಲ್ಲ ಎಂದು ಭೋಜ ಕೋಟ್ಯಾನ ಆರೋಪಿಸಿದಾಗ ಕಂಪೆನಿ ಕುರ್ಚಿಗಳನ್ನೆ ನೀಡಿದ್ದು. ದೋಷವಿದ್ದರೆ ಬದಲಾಯಿಸುತ್ತೇವೆ ಎಂದು ನೋಡೆಲ್ ಅಧಿಕಾರಿ ಕೆಂಪರಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.