ADVERTISEMENT

ಕರಾವಳಿಯಲ್ಲಿ ಸಂಭ್ರಮದ ಈದ್‌ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 10:56 IST
Last Updated 15 ಜೂನ್ 2018, 10:56 IST
ಮಂಗಳೂರಿನಲ್ಲಿ ಈದ್‌ ಅಂಗವಾಗಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಮಕ್ಕಳು ಗಮನ ಸೆಳೆದಿದ್ದು ಹೀಗೆ. ಪ್ರಜಾವಾಣಿ ಚಿತ್ರ/ಗೋವಿಂದರಾಜ್‌ ಜವಳಿ
ಮಂಗಳೂರಿನಲ್ಲಿ ಈದ್‌ ಅಂಗವಾಗಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಮಕ್ಕಳು ಗಮನ ಸೆಳೆದಿದ್ದು ಹೀಗೆ. ಪ್ರಜಾವಾಣಿ ಚಿತ್ರ/ಗೋವಿಂದರಾಜ್‌ ಜವಳಿ   

ಮಂಗಳೂರು: ಮುಸ್ಲಿಮರ ಈದ್‌–ಉಲ್‌–ಫಿತ್ರ್ ಹಬ್ಬವನ್ನು ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದಿಂದ ಶುಕ್ರವಾರ ಆಚರಿಸಲಾಯಿತು.

ಜಿಲ್ಲೆಯ ಎಲ್ಲ ಪ್ರಮುಖ ಮಸೀದಿಗಳಲ್ಲಿ ಬೆಳಗ್ಗೆ ಸಾಮೂಹಿಕ ನಮಾಝ್, ಧರ್ಮ ಗುರುಗಳಿಂದ ಈದ್ ಸಂದೇಶ ಸಹಿತ ಪ್ರವಚನ, ಪರಸ್ಪರ ಈದ್ ಶುಭಾಶಯ ವಿನಿಯಮ ನಡೆಯಿತು.

ಮಂಗಳೂರು ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಪ್ರಾರ್ಥನೆ ಹಾಗೂ ಖುತ್ಬಾ ಪ್ರವಚನ ನೀಡಿದರು.

ADVERTISEMENT

ಒಂದು ತಿಂಗಳ ಕಾಲ ಉಪವಾಸ ಆಚರಣೆ ಜತೆಗೆ ನಿರಂತರ ದೇವರ ಸ್ಮರಣೆ, ದಾನ ಧರ್ಮಾದಿಗಳನ್ನು ಮಾಡಿದ ಮುಸ್ಲಿಮರಿಗೆ ಮುಂದಿನ 11 ತಿಂಗಳು ಶಾಂತಿ, ಸಹನೆಯ ಉತ್ತಮ ಬದುಕು ನಡೆಸಲು ರಮ್ಝಾನ್ ಪ್ರೇರಣೆ ನೀಡಲಿ. ಪ್ರವಾದಿ ಮುಹಮ್ಮದ್ ಅವರ ಆದರ್ಶ ಬದುಕು ಎಲ್ಲರಿಗೂ ಮಾದರಿಯಾಗಲಿ ಎಂದು ಖಾಝಿ ತಮ್ಮ ಪ್ರವಚನದಲ್ಲಿ ಹೇಳಿದರು.

ಮುಸ್ಲಿಂ ಸಮಾಜ ಹಿಂದೆಯೂ ಹಲವಾರು ಸಮಸ್ಯೆ, ಸವಾಲುಗಳನ್ನು ಎದುರಿಸಿತ್ತು. ಈಗಲೂ ಎದುರಿಸುತ್ತಿದೆ. ಅದನ್ನು ಪರೀಕ್ಷೆ ಎಂದು ತಿಳಿದು,‌ ಧನಾತ್ಮಕವಾಗಿ ಎದುರಿಸಬೇಕು. ಯಾವ ಕಾರಣಕ್ಕೂ,‌ ಧಾರ್ಮಿಕ ನಿಯಮ, ದೇಶದ ಕಾನೂನು ಮುರಿಯುವ ಪ್ರಯತ್ನ ಮಾಡಬಾರದು. ಪ್ರೀತಿ,‌ ವಿಶ್ವಾಸ, ಸೇನೆಯಿಂದ ಜನಮನ ಗೆಲ್ಲಬೇಕು. ಕೆಡುಕನ್ನು ಅಳಿಸುವ ಕಾರ್ಯದಲ್ಲಿ ರಾಜಿ ಮಾಡಬಾರದು ಎಂದು ಖಾಝಿ ಕಿವಿಮಾತು ಹೇಳಿದರು.

ನಗರಾಡಳಿತ ಮತ್ತು ವಸತಿ ಸಚಿವ ಯು.ಟಿ.ಖಾದರ್ ಮಾತನಾಡಿ, ಹಬ್ಬದ ಆಚರಣೆಯ ಮೂಲಕ ನಾವು ನಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಕರಾವಳಿಯಲ್ಲಿ ಆಚರಣೆ ಮಾಡುವ ಪ್ರತಿಯೊಂದು ಹಬ್ಬ ಕೂಡ ಏಕತೆ, ಭಾತೃತ್ವದಿಂದ ಬದುಕು ನಡೆಸಬೇಕು ಎನ್ನುವುದನ್ನು ಸಾರುತ್ತದೆ ಎಂದರು. 

ಝೀನತ್ ಬಕ್ಷ್ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ವೈ.ಅಬ್ದುಲ್ಲಾ ಕುಂಞಿ ಈದ್ ಸಂದೇಶ ನೀಡಿದರು. ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ನಮಾಝ್‌ಗೆ ಚಪ್ಪರ ಮೂಲಕ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ಸಂಚಾರ ನಿಯಂತ್ರಿಸಿ ವಿಶೇಷ ಬಂದೋಬಸ್ತ್ ಏರ್ಪಡಿಸಿದ್ದರು. ಸಂತ ಅಲೋಶಿಯಸ್ ಕಾಲೇಜಿನ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಜಾಗ ಕೊಟ್ಟು ಸಹಕರಿಸಲಾಗಿತ್ತು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್. ಲೋಬೊ, ಮಂಗಳೂರು ಪೊಲೀಸ್ ಕಮೀಷನರ್ ವಿಪುಲ್ ಕುಮಾರ್ ಸೇರಿದಂತೆ ನಾನಾ ಗಣ್ಯರು ಉಪಸ್ಥಿತರಿದ್ದು ಮುಸ್ಲಿಂ ಬಂಧುಗಳಿಗೆ ಹಬ್ಬದ ಶುಭ ಕೋರಿದರು.

ಕುದ್ರೊಳಿ ಜಾಮಿಯಾ ಮಸೀದಿಯಲ್ಲಿ ಧರ್ಮ ಗುರು ಮುಫ್ತಿ ಮನ್ನಾನ್ ಸಾಹೇಬ್ ಅವರ ನೇತೃತ್ವದಲ್ಲಿ ನಮಾಝ್, ಪ್ರವಚನ ನಡೆಯಿತು. ಇಲ್ಲಿಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಸಮಸ್ತ ಮುಸ್ಲಿಮರಿಗೆ ಹಬ್ಬದ ಶುಭಾಶಯಗಳನ್ನು ಹೇಳಿದರು. ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಕೆ.ಎಸ್.ಮೊಹಮ್ಮದ್ ಮಸೂದ್,‌ ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಮಂಗಳೂರು ವಾಸ್‌ಲೇನ್‌ನ ಮಸ್ಜಿದುಲ್ ಎಹ್ಸಾನ್‌ನಲ್ಲಿ ಧರ್ಮ ಗುರುಗಳಾದ  ಮುಹಮ್ಮದ್ ತಯ್ಯಿಬ್ ಉಸ್ತಾದ್ ನೇತೃತ್ವದಲ್ಲಿ ನಮಾಝ್ ಮತ್ತು ಪ್ರವಚನ ನಡೆಯಿತು. ಮಸೀದಿಯ ಇಮಾಮರುಗಳಾದ ಸಲ್ಮಾನ್ ಉಸ್ತಾದ್, ಅಲ್ತಾಫ್ ಉಸ್ತಾದ್ ಸಹಿತ ಗಣ್ಯರು ಭಾಗವಹಿಸಿದ್ದರು.

ಹಂಪನಕಟ್ಟೆಯ ಮಸ್ಜಿದ್ ನೂರ್, ಪಂಪ್‌ವೆಲ್‌ನ ತಖ್ವಾ ಮಸ್ಜಿದ್, ನೆಲ್ಲಿಕಾಯಿ ರಸ್ತೆಯ ಇಬ್ರಾಹಿಂ ಖಲೀಲ್,‌ ಬಂದರ್‌ನ ಕಚ್ಚಿ ಮೆಮೋನ್,  ಕಂಕನಾಡಿ ಮತ್ತಿತರ ಮಸೀದಿಗಳಲ್ಲಿ ಈದ್ ನಮಾಝ್ ನಡೆಯಿತು.

ಮುಸ್ಲಿಮರು ಬಡವರು- ಶ್ರೀಮಂತರು ಎನ್ನದೆ ಎಲ್ಲರೂ ಹಬ್ಬಕ್ಕೆ ಹೊಸ ಉಡುಪು ಧರಿಸಿ ಸಂಭ್ರಮಿಸಿದರು. ಹಬ್ಬ ಆಚರಣೆಯ ನಿಯಮದಂತೆ ಬೆಳಗ್ಗೆಯೇ ಮನೆಯ ಪ್ರತಿಯೊಬ್ಬ ಸದಸ್ಯರ ಹೆಸರಿನಲ್ಲಿ ಬಡವರಿಗೆ ನಿರ್ದಿಷ್ಟ ಪ್ರಮಾಣದ ಅಕ್ಕಿ ಅಥವಾ ಅದಕ್ಕೆ ಸಮಾನವಾದ ಫಿತ್ರ್ ಝಕಾತ್ ಹೆಸರಿನ ದಾನ ವಿತರಿಸಲಾಯಿತು.

ಬೆಳಗ್ಗೆ ಸಿಹಿ ತಿಂಡಿ ಸ್ವೀಕರಿಸಿ, ಹೊಸ ಉಡುಪು ಧರಿಸಿ ವಿಶೇಷ ಪ್ರಾರ್ಥನೆಗಾಗಿ ಮಸೀದಿ ಮತ್ತು ಈದ್ಗಾಕ್ಕೆ ತೆರಳಿದ್ದರು. ಧರ್ಮಗುರುಗಳ ಪ್ರಾರ್ಥನೆ, ಪ್ರವಚನ ನಡೆದ ಬಳಿಕ ಎಲ್ಲರೂ ಪರಸ್ಪರ ಹಸ್ತ ಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ಹಂಚಿಕೊಂಡರು.

ಮನೆಯವರು, ನೆರೆಹೊರೆಯವರು, ಗೆಳೆಯರು, ಸಂಬಂಧಿಕರು ಪ್ರತಿಯೊಬ್ಬರಿಗೂ ಹಬ್ಬದ ಶುಭಾಶಯ ಹೇಳಿಕೊಂಡರು. ಮಸೀದಿಯಿಂದ ಬಂದ ಬಳಿಕ ಮನೆಗಳಲ್ಲಿ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಹಬ್ಬದ ದಿನ ಸಂಜೆ ಬಹುತೇಕ ಮಂದಿ ವಿಹಾರಗಳಿಗೆ ತೆರಳಿ ಸಂಭ್ರಮ ಆಚರಿಸಿದರು.

ವಾಹಿತ ಮಹಿಳೆಯರು ಗಂಡನ ಮನೆಯಿಂದ ತಾಯಿ ಮನೆಗೆ ತೆರಳಿದರು. ಮಕ್ಕಳು ಅಜ್ಜಿ ಮನೆಗೆ ಹೋಗಿ ಸಂತಸ ಆಚರಿಸಿಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.