ADVERTISEMENT

ಕಾಂಗ್ರೆಸ್‌ನಲ್ಲಿ ಶುರುವಾದ ಜಾತಿ ಲೆಕ್ಕಾಚಾರ

ಚಿದಂಬರ ಪ್ರಸಾದ್
Published 24 ಫೆಬ್ರುವರಿ 2018, 5:38 IST
Last Updated 24 ಫೆಬ್ರುವರಿ 2018, 5:38 IST
ಮಂಗಳೂರು ಮಹಾನಗರ ಪಾಲಿಕೆ ಕಟ್ಟಡ
ಮಂಗಳೂರು ಮಹಾನಗರ ಪಾಲಿಕೆ ಕಟ್ಟಡ   

ಮಂಗಳೂರು: ಕಾಂಗ್ರೆಸ್ ಬಹುಮತ ಇರುವ ಪ್ರಸಕ್ತ ಪಾಲಿಕೆ ಆಡಳಿತ ಮಂಡಳಿಯ ಕೊನೆಯ ಮೇಯರ್‌– ಉಪಮೇಯರ್‌ ಸ್ಥಾನದ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಮೇಯರ್‌ ಸ್ಥಾನಕ್ಕೆ ಏರಲು ತೆರೆಮರೆಯ ಕಸರತ್ತುಗಳು ತೀವ್ರಗೊಂಡಿವೆ.

ಕಾಂಗ್ರೆಸ್‌ ಆಡಳಿತದ ಐದನೇ ಹಾಗೂ ಕೊನೆಯ ಅವಧಿಯ ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಮೇಯರ್‌–ಉಪಮೇಯರ್‌ ಸ್ಥಾನಕ್ಕೆ ತೀವ್ರ ರಾಜಕೀಯ ಲಾಬಿ ಶುರುವಾಗಿದೆ.

ಹಾಲಿ ಮೇಯರ್‌ ಕವಿತಾ ಸನಿಲ್‌, ಉಪಮೇಯರ್‌ ರಜನೀಶ್‌ ಅವರ ಅಧಿಕಾರ ಅವಧಿ ಮಾರ್ಚ್‌ 9ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಮಾರ್ಚ್‌ 8ಕ್ಕೆ ಚುನಾವಣೆ ನಡೆಸಲು ಮೈಸೂರು ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ.

ADVERTISEMENT

ಪಾಲಿಕೆಯ ಒಟ್ಟು 60 ಸ್ಥಾನಗಳ ಪೈಕಿ 35 ಸ್ಥಾನ ಹೊಂದಿರುವ ಕಾಂಗ್ರೆಸ್‌ ಬಹುಮತ ಪಡೆದಿದೆ. ಮೀಸಲಾತಿ ಸಾಮಾನ್ಯ ವರ್ಗಕ್ಕೆ ಬಂದಿರುವುದರಿಂದ 35 ಸದಸ್ಯರೂ ಮೇಯರ್‌, ಉಪಮೇಯರ್‌ ಸ್ಥಾನಕ್ಕೆ ಅರ್ಹರು. ಪಾಲಿಕೆಯಲ್ಲಿ ಬಿಜೆಪಿ 20, ಜೆಡಿಎಸ್‌ 2, ಸಿಪಿಎಂ 1, ಪಕ್ಷೇತರ 1, ಎಸ್‌ಡಿಪಿಐ 1 ಸದಸ್ಯರನ್ನು ಹೊಂದಿವೆ.

ಕಾಂಗ್ರೆಸ್‌ ಆಡಳಿತದ ಪ್ರಥಮ ವರ್ಷ ಮೇಯರ್‌ಗಾದಿ ಸಾಮಾನ್ಯ ವರ್ಗಕ್ಕೆ ಹಾಗೂ ಉಪಮೇಯರ್‌ ಸ್ಥಾನ ಮಹಿಳಾ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಎರಡನೇ ವರ್ಷ ಮಹಿಳಾ ಸಾಮಾನ್ಯ ವರ್ಗಕ್ಕೆ ಹಾಗೂ ಸಾಮಾನ್ಯ ವರ್ಗಕ್ಕೆ ನಿಗದಿಯಾಯಿತು. ಮೂರನೇ ವರ್ಷ ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಪಂಗಡ ಮಹಿಳೆಗೆ ಅವಕಾಶ ನೀಡಲಾಗಿತ್ತು. ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ಪಂಗಡದ ಸದಸ್ಯೆ ಇಲ್ಲದೇ ಇರುವುದರಿಂದ ಉಪಮೇಯರ್‌ ಸ್ಥಾನ ಬಿಜೆಪಿ ಪಾಲಾಗಿತ್ತು. ನಾಲ್ಕನೇ ಅವಧಿಗೆ ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್‌ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು.

ಒಂದೆಡೆ ವಿಧಾನಸಭೆ ಚುನಾವಣೆ, ಇನ್ನೊಂದೆಡೆ ಪ್ರಸ್ತುತ ಪಾಲಿಕೆಯಲ್ಲಿ ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಇದು ಕೊನೆಯ ಅವಕಾಶ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯ ಲಾಭ-ನಷ್ಟದ ಲೆಕ್ಕಾಚಾರ ಇರಿಸಿಕೊಂಡೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಠಿಣ ಸ್ಥಿತಿ ಕಾಂಗ್ರೆಸ್‌ ನಾಯಕರಿಗೆ ಎದುರಾಗಿದೆ.

ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಜಾತಿ ಲೆಕ್ಕಾಚಾರದ ಮೂಲಕ ಮೇಯರ್‌ ಸ್ಥಾನವನ್ನು ಕ್ರಮವಾಗಿ ಬಂಟ, ಕ್ರೈಸ್ತ, ಜೋಗಿ, ಬಿಲ್ಲವ ಸಮುದಾಯಗಳಿಗೆ ನೀಡಲಾಗಿದ್ದು, ಕೊನೆಯ ಅವಧಿಗೂ ಮೇಯರ್‌ ಸ್ಥಾನಕ್ಕೆ ಜಾತಿ ಲೆಕ್ಕಾಚಾರದಲ್ಲೇ ಅಭ್ಯರ್ಥಿಯ ಆಯ್ಕೆ ಆಗುವ ಸಾಧ್ಯತೆ ಹೆಚ್ಚಾಗಿದೆ.

ಕೊನೆಯ ಅವಧಿಗಾದರೂ ಮೇಯರ್‌ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆ ಹೆಚ್ಚು ಎನ್ನುವ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿದೆ.

ಉಪಮೇಯರ್‌ ಸ್ಥಾನಕ್ಕಿಲ್ಲ ಪೈಪೋಟಿ: ಕಾಂಗ್ರೆಸ್‌ನಲ್ಲಿ ಉಪಮೇಯರ್ ಸ್ಥಾನಕ್ಕೆ ಈ ಬಾರಿ ಅಷ್ಟೊಂದು ಪೈಪೋಟಿ ಕಂಡು ಬರುತ್ತಿಲ್ಲ. ಹಾಗಾಗಿ ಪಕ್ಷದ ವರಿಷ್ಠರು ಈ ವಿಷಯದಲ್ಲಿ ಸ್ವಲ್ಪ ನಿರಾಳರಾಗಿದ್ದಾರೆ.

ಈ ಬಾರಿ ಉಪಮೇಯರ್‌ ಸ್ಥಾನವನ್ನು ಮಹಿಳೆಯರಿಗೆ ನೀಡುವ ಮೂಲಕ ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನಕ್ಕೆ ಕಾಂಗ್ರೆಸ್‌ ಮುಂದಾಗಲಿದೆ. ಕಳೆದ ಬಾರಿಯೇ ಮೇಯರ್ ಸ್ಥಾನಕ್ಕೆ ಪೈಪೋಟಿ ನಡೆಸಿದ್ದ ಅಪ್ಪಿ ಅವರಿಗೆ ಈ ಬಾರಿ ಉಪ ಮೇಯರ್ ಸ್ಥಾನ ಕೊಡಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಚುನಾವಣೆ ಮಾರ್ಚ್ 8 ಕ್ಕೆ

ಮಂಗಳೂರು ಮಹಾನಗರಪಾಲಿಕೆಯ 20 ನೇ ಅವಧಿಯ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯನ್ನು ಮಾರ್ಚ್‌ 8 ಕ್ಕೆ ನಿಗದಿಪಡಿಸಲಾಗಿದೆ.

ಅಂದು ಬೆಳಿಗ್ಗೆ 11.30ಕ್ಕೆ ಮಹಾನಗರಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದೆ.

ರವೂಫ್‌–ಭಾಸ್ಕರ್ ಮಧ್ಯೆ ಪೈಪೋಟಿ

ಪಾಲಿಕೆಯ ಕೊನೆಯ ಮೇಯರ್‌ ಸ್ಥಾನಕ್ಕೆ ಅಬ್ದುಲ್‌ ರವೂಫ್‌ ಹಾಗೂ ಕೆ. ಭಾಸ್ಕರ್‌ ಮೊಯಿಲಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. 38 ನೇ ವಾರ್ಡ್‌ ಅನ್ನು ಪ್ರತಿನಿಧಿಸುತ್ತಿರುವ ಭಾಸ್ಕರ್‌ ಮೊಯಿಲಿ ಹಿಂದುಳಿದ ದೇವಾಡಿಗ ಸಮುದಾಯಕ್ಕೆ ಸೇರಿದವರಾಗಿದ್ದು, 49 ನೇ ವಾರ್ಡ್‌ ಪ್ರತಿನಿಧಿಸುತ್ತಿರುವ ಅಬ್ದುಲ್‌ ರವೂಫ್‌ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ್ದಾರೆ.

ಹಿಂದುಳಿದ ವರ್ಗಗಳಾದ ಜೋಗಿ ಸಮುದಾಯದ ಹರಿನಾಥ ಹಾಗೂ ಬಿಲ್ಲವ ಸಮುದಾಯದ ಕವಿತಾ ಸನಿಲ್‌ ಅವರಿಗೆ ಈಗಾಗಲೇ ಮೇಯರ್‌ ಸ್ಥಾನ ನೀಡಲಾಗಿದೆ. ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಆದ್ಯತೆ ನೀಡಬೇಕು ಎನ್ನುವ ವಾದವನ್ನು ಅಬ್ದುಲ್‌ ರವೂಫ್‌ ಮುಂದಿಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.