ADVERTISEMENT

ಕಾಂಗ್ರೆಸ್‌ಗೆ ಬನ್ನಿ... ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 8:05 IST
Last Updated 3 ಅಕ್ಟೋಬರ್ 2012, 8:05 IST

ಕಾಪು (ಪಡುಬಿದ್ರಿ): `ಅಣ್ಣಾಹಜಾರೆ ಸಹಿತ ಇಂದು ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುತ್ತಿರುವ ಮುಖಂಡರು ಸಮಾಜವಾದದ ಸಿದ್ಧಾಂತದಲ್ಲಿ ಹೋರಾಟ ನಡೆಸುತ್ತಿಲ್ಲ. ಈ ಹೋರಾಟ ಕೇವಲ ಕಾಂಗ್ರೆಸ್ ಪಕ್ಷವನ್ನು ನಿರ್ಣಾಮ ಮಾಡಲು ಬಿಜೆಪಿ ಹೂಡಿದ ತಂತ್ರ~ ಎಂದು ಕಾಂಗ್ರೆಸ್ ಮುಖಂಡರ ಎಂ.ಎ.ಗಫೂರ್ ಆರೋಪಿಸಿದರು.

ಮಂಗಳವಾರ ಕಾಪುವಿನ ರಾಜೀವ್ ಭವನದಲ್ಲಿ ಗಾಂಧಿ ಜಯಂತಿ ಆಚರಣೆ ಹಾಗೂ ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಇಷ್ಟೊಂದು ಭ್ರಷ್ಟಾಚಾರ ನಡೆದಿದ್ದರೂ ಯಾವ ಹೋರಾಟಗಾರರು ಈ ಬಗ್ಗೆ ಮಾತನಾಡದೆ ಇರುವುದು ಭ್ರಷ್ಟಾಚಾರದ ವಿರುದ್ಧದ ಹೋರಾಟ ಏನೆಂದು ಅರ್ಥವಾಗುತ್ತದೆ ಎಂದರು.

ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಹಲವಾರು ಜನಪರ ಯೋಜನೆಗಳ ಮೂಲಕ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ದೇಶಕ್ಕಾಗಿ ಪ್ರಾಣತ್ಯಗ ಮಾಡಿದ ಗಾಂಧೀಜಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ದೇಶದಲ್ಲಿ ಕ್ರಾಂತಿಕಾರಿ ಯೋಜನೆಗಳನ್ನು ಹಮ್ಮಿಕೊಂಡಿದ್ದರು ಎಂದರು.

ಮಾಜಿ ಸಚಿವ ವಸಂತ ಸಾಲ್ಯಾನ್ ಮಾತನಾಡಿ, ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ತನ್ನದೆಂದು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಈ ಬಗ್ಗೆ ಪ್ರತೀ ಗ್ರಾಮೀಣ ಪ್ರದೇಶಗಳಲ್ಲೂ ಜಾಗೃತಿ ಮೂಡಿಸಲಾಗುವುದು. ಕಾರ್ಯಕರ್ತರು ಈ ಬಗ್ಗೆ ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಲಿದ್ದಾರೆ ಎಂದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಂಘಟಿತರಾಗಿದ್ದರಿಂದ ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು. ಜಿಲ್ಲೆಯಲ್ಲಿ ಈ ಹಿಂದೆ ಜಿಲ್ಲಾಡಳಿತ ಸಹಿತ ಎಲ್ಲಾ ಇಲಾಖೆಗಳಲ್ಲೂ ಕಾಂಗ್ರೆಸ್ ನಾಯಕರನ್ನು ಅಧಿಕಾರಿಗಳು ನಿರ್ಲಕ್ಷಿಸುತಿದ್ದರು. ಈಗ ಜಯಪ್ರಕಾಶ್ ಹೆಗ್ಡೆಯವರ ಗೆಲುವಿನ ಬಳಿಕ ಅದು ಬದಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗೂ ಸಿದ್ಧರಾಗಬೇಕು ಎಂದರು.

ಆಮಿಷಕ್ಕೆ ಬಲಿಯಾಗಬೇಡಿ: ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಈ ವೇಳೆ ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಸೆಳೆಯಲು ಹಣದ ಅಮಿಷ ಒಡ್ಡುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಜಾಗೃತರಾಗಬೇಕು. ಯಾವುದೇ ಕಾರಣಕ್ಕೂ ಹಣದ ಅಮಿಷಕ್ಕೆ ಬಲಿಯಾಗದೆ ಸಂಘಟಿರಾಗಿ ಪಕ್ಷದವರನ್ನೇ ಬೆಂಬಲಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ಸುವರ್ಣ ಗ್ರಾಪಂ ಸದಸ್ಯರಲ್ಲಿ ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ಸುವರ್ಣ, ಕಾರ್ಯದರ್ಶಿ ನವೀನ್‌ಚಂದ್ರ ಜೆ.ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಎಮ್.ಪಿ.ಮೊಯ್ದಿನಬ್ಬ, ದಿವಾಕರ ಶೆಟ್ಟಿ, ಗಿಬ್ಬಾ ಐಡಾ ಡಿಸೋಜ, ಜಯರಾಮ್ ಬಳ್ಳಾಳ್, ಅಬ್ದುಲ್ ಅಝ್ೀ ಹೆಜ್ಮಾಡಿ, ಅಮೃತ್ ಶೆಣೈ, ಶ್ರೀಕರ ಸುವರ್ಣ, ವಿನಯ ಬಳ್ಳಾಲ್, ವೈ.ಸುಧೀರ್, ಮನ್ಹರ್ ಇಬ್ರಾಹಿಮ್, ದೀಪಕ್ ಕುಮಾರ್ ಎರ್ಮಾಳು, ಅಬ್ದುಲ್ ಹಮೀದ್ ಹೆಜ್ಮಾಡಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.