ADVERTISEMENT

ಕಾಂಗ್ರೆಸ್‌ ಬಂಡುಕೋರ ಅಭ್ಯರ್ಥಿಗೆ ಅಧ್ಯಕ್ಷ ಪಟ್ಟ

ಪುತ್ತೂರು ಪುರಸಭೆಯಲ್ಲಿ `ಆಪರೇಷನ್ ಕಮಲ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 8:24 IST
Last Updated 12 ಸೆಪ್ಟೆಂಬರ್ 2013, 8:24 IST

ಪುತ್ತೂರು: ಕಾಂಗ್ರೆಸ್‌ಗೆ ಬಹುಮತವಿದ್ದ ಪುತ್ತೂರು ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ, ಮಾಜಿ ಮುಖ್ಯಮಂತ್ರಿ  ಡಿ.ವಿ.ಸದಾನಂದ ಗೌಡ ನೇತೃತ್ವದಲ್ಲಿ ನಡೆದ `ಆಪರೇಷನ್ ಕಮಲ’ ತಂತ್ರದಿಂದಾಗಿ, ಕಾಂಗ್ರೆಸ್‌ನ ಬಂಡುಕೋರ ಅಭ್ಯರ್ಥಿ ವಾಣಿ ಶ್ರೀಧರ್ ಅಧ್ಯಕ್ಷರಾಗಿ ಆಯ್ಕೆಯಾದರು.

  ಉಪಾಧ್ಯಕ್ಷರಾಗಿ ಬಿಜೆಪಿಯ ಜೀವಂಧರ್ ಜೈನ್ ಆಯ್ಕೆಯಾದರು.  ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಸೋತಿದ್ದರಿಂದ, ಪಕ್ಷಕೆ್ಕ ತೀವ್ರ ಮುಖಭಂಗವಾಗಿದೆ. 

ಪುರಸಭೆಯ  27 ಸ್ಥಾನಗಳ ಪೈಕಿ ಕಾಂಗ್ರೆಸ್ 15 ಹಾಗೂ ಬಿಜೆಪಿ 12 ಸ್ಥಾನಗಳನ್ನು ಹೊಂದಿವೆ. ಕಾಂಗ್ರೆಸ್ ಸದಸ್ಯೆ ಲಿೀನಾ ಮಸ್ಕರೇನ್ಹಸ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ಪಕ್ಷದ ಸದಸ್ಯರ ಸಂಖ್ಯೆ 14ಕ್ಕೆ ಇಳಿದಿತ್ತು.  ಕಾಂಗ್ರೆಸ್‌ಗೆ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಬಿಜೆಪಿಗೆ ಸಂಸದ ನಳಿನ್ ಕುಮಾರ್ ಕಟೀಲು ಮತ್ತು ವಿಧಾನ ಪರಿಷತ್ ಸದಸ್ಯ ಡಿ.ವಿ.ಸದಾನಂದ ಗೌಡ ಅವರ ಮತವನ್ನು ಪರಿಗಣಿಸಿದಾಗ ಕಾಂಗ್ರೆಸ್‌–ಬಿಜೆಪಿ ಬಲಾಬಲ 15–-14 ಆಗಿತ್ತು.

ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಎಚ್.ಮಹಮ್ಮದ್ ಆಲಿ, ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮತ್ತು ವಾಣಿ ಶ್ರೀಧರ್ ಆಕಾಂಕ್ಷಿಗಳಾಗಿದ್ದರು. ಹಿಂದುಳಿದ ವರ್ಗ ‘ಬಿ’ಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ರೇಖಾ ಯಶೋಧರ್ ಒಮ್ಮತದ ಅಭ್ಯರ್ಥಿಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇದ್ದುದರಿಂದ ಕಾಂಗ್ರೆಸ್‌ ಮುಖಂಡರು ಮಂಗಳವಾರ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ, 14 ಸದಸ್ಯರ ಅಭಿಪ್ರಾಯ ಪಡೆದು ಬುಧವಾರ ಎಚ್.ಮಹಮ್ಮದ್ ಆಲಿ ಅವರ ಹೆಸರನ್ನು ಘೋಷಿಸಿದ್ದರು. ಇದೇ ವೇಳೆ ಡಿವಿಎಸ್‌ ಅವರ ಮನೆಯಲ್ಲಿ ‘ಆಪರೇಷನ್‌ ಕಮಲ’ ರಣತಂತ್ರ ನಡೆಸಿದ ಬಿಜೆಪಿ, ಕಾಂಗ್ರೆಸ್ ಸದಸ್ಯೆ ವಾಣಿ ಶ್ರೀಧರ್ ಅವರು ಬಂಡುಕೋರರಾಗಿ ಸ್ಪರ್ಧಿಸುವಂತೆ ನೋಡಿಕೊಂಡಿತು. 

ಬುಧವಾರ ಬೆಳಿಗ್ಗೆ 10ರೊಳಗೆಯೇ ಕಾಂಗ್ರೆಸ್‌ನ ಆಕಾಂಕ್ಷಿಗಳೆಲ್ಲರೂ ನಾಮಪತ್ರ ಸಲ್ಲಿಸಿದರು. ಬಳಿಕ ವಾಣಿ ಶ್ರೀಧರ್ ಅವರು ಡಿ.ವಿ.ಎಸ್‌ ಮನೆಯಲ್ಲಿ ಉಳಿದುಕೊಂಡರು. ಕಾಂಗ್ರೆಸ್ ಮುಖಂಡರು ಪ್ರವಾಸಿ ಮಂದಿರದಲ್ಲಿ ಸೇರಿ ಈ ವಿದ್ಯಮಾನದ ಆತ್ಮಾವಲೋಕನ ನಡೆಸಿದರು. ವಾಣಿ ಶ್ರೀಧರ್ ಅವರಿಗೇ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಅಭಿಪ್ರಾಯ ವ್ಯಕ್ತವಾದಾಗ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮಹಮ್ಮದ್ ಆಲಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಆ ಪ್ರಯತ್ನವನ್ನು ಕೈಬಿಡಲಾಯಿತು.

ವಾಣಿ ಶ್ರೀಧರ್ ಅವರು 12 ಗಂಟೆಗೆ ಡಿ.ವಿ.ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್‌ ಮತ್ತು ಬಿಜೆಪಿ ಸದಸ್ಯರ ಜತೆ ಕಾರಿನಲ್ಲಿ ಬಂದು ಚುನಾವಣೆಯಲ್ಲಿ ಪಾಲ್ಗೊಂಡರು. ಶಾಸಕಿ ಶಕುಂತಳಾ ಶೆಟ್ಟಿ , ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಐವನ್ ಡಿಸೋಜ, ಪುತ್ತೂರು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಕಾವು ಹೇಮನಾಥ ಶೆಟ್ಟ ಜತೆ ಅಭ್ಯರ್ಥಿ ಮಹಮ್ಮದ್ ಆಲಿ ಮತ್ತು ರೇಖಾ ಯಶೋಧರ್ ಬಂದರು.

ಬಂಡುಕೋರ ಅಭ್ಯರ್ಥಿ ವಾಣಿ ಶ್ರೀಧರ್‌ 15–14 ಮತಗಳಿಂದ ಗೆದ್ದಿದ್ದಲ್ಲದೇ, ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ದಕ್ಕಲು ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.