ಮಂಗಳೂರು: `ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಪಕ್ಷದ ಜಯ ಶ್ರೀಸಾಮಾನ್ಯನ ಗೆಲುವಾಗಿದೆ. ಬಿಜೆಪಿ ಪಾಲಿಗೆ ಭ್ರಷ್ಟಾಚಾರ, ಕಾಮಕಾಂಡ, ಅತ್ಯಾಚಾರ ಹಾಗೂ ಅಶಿಸ್ತಿನ ಸೋಲು~ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ವಿಶ್ಲೇಷಿಸಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರು ಬುದ್ಧಿವಂತರಾಗಿದ್ದಾರೆ. ತಾವೇ ಯಜಮಾನರು ಎಂಬುದನ್ನು ತೋರಿಸಿದ್ದಾರೆ. ಬಿಜೆಪಿ ಕರ್ಮಕಾಂಡ ಮಿತಿಮೀರಿದಾಗ ಕೇಳುವವರು ನಾವಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಜಯ ಖಚಿತ ಎಂಬುದು ಈ ಸಲ ಸಾಬೀತಾಗಿದೆ. ಗೆಲುವಿನ ಬಗ್ಗೆ ದುರಂಹಕಾರ ಬೇಡ. ನಾವು ನಮ್ರತೆಯಿಂದ ಗೆಲುವು ಸ್ವೀಕಾರ ಮಾಡುತ್ತೇವೆ ಎಂದರು.
ಬಿಜೆಪಿ ಚುನಾವಣೆಯನ್ನು ಜಾತೀಕರಣ ಮಾಡಲು ಹೊರಟಿತ್ತು. ಬಿಜೆಪಿಗೆ ಮತ ನೀಡುವಂತೆ ಬಿಲ್ಲವರಲ್ಲಿ ವಿನಂತಿಸಲಾಗಿತ್ತು. ಆ ಪಕ್ಷದ ಕುತಂತ್ರ ಫಲಿಸಲಿಲ್ಲ. ದೇವರ ಮುಂದೆ ತೆಂಗಿನಕಾಯಿ ಇಟ್ಟು ಪ್ರಾರ್ಥಿಸಿ ಮತದಾರರಲ್ಲಿ ಪ್ರಮಾಣ ಮಾಡಿಸಲಾಗಿತ್ತು. ಕಳೆದ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ತಮ್ಮನ್ನು ಮೋಸದಿಂದ ಸೋಲಿಸಲಾಗಿತ್ತು. ಅದಕ್ಕೂ ಕೂಡಾ ಮತದಾರರು ಈ ಸಲ ಉತ್ತರ ಕೊಟ್ಟಿದ್ದಾರೆ ಎಂದರು.
ರುಚಿ ಇಲ್ಲ: ರಾಜ್ಯದ ಮುಂಗಡಪತ್ರ ರುಚಿ ಇಲ್ಲದ ಬಜೆಟ್. ಸ್ಪಷ್ಟ ನಿರ್ದೇಶನವೇ ಇಲ್ಲ. ಹೊಸತೂ ಇಲ್ಲ. ಕೇಂದ್ರದ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡಿದ್ದಾರೆ ಅಷ್ಟೆ ಎಂದು ಪೂಜಾರಿ ಟೀಕಿಸಿದರು.
ಕಾಂಗ್ರೆಸ್ ಮುಖಂಡರಾದ ಹರಿಕೃಷ್ಣ ಬಂಟ್ವಾಳ, ಅರುಣ್ ಕುವೆಲ್ಲೋ ಇದ್ದರು.
`ಚುನಾವಣೆ ಎದುರಿಸಿ~
ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಸವಾಲೆಸೆದರು.
ಬಿ.ಎಸ್.ಯಡಿಯೂರಪ್ಪ ಅವರನ್ನು ಸಮಾಧಾನಪಡಿಸಿ ತೇಪೆ ಹಾಕುವ ಕೆಲಸ ಮಾಡಲಾಗಿದೆ. ಇದು ಕ್ಷಣಿಕ. ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಯಡಿಯೂರಪ್ಪ ಸುಮ್ಮನಿರುವುದಿಲ್ಲ. ಜತೆಗೆ ಬಿಜೆಪಿ ಉಪ ಚುನಾವಣೆಯಲ್ಲೂ ಸೋತಿದೆ. ಈಗ ಚುನಾವಣೆ ಎದುರಿಸುವುದು ಉತ್ತಮ. ಚುನಾವಣೆಗೆ ಕಾಂಗ್ರೆಸ್ ತಯಾರಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.