ADVERTISEMENT

ಕಾಮಗಾರಿ: ಪೈಪ್‌ಲೈನ್‌ಗೆ ಹಾನಿ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 8:25 IST
Last Updated 5 ಮಾರ್ಚ್ 2011, 8:25 IST

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಂತೂರಿನಿಂದ ತಲಪಾಡಿವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಕುಡಿಯುವ ನೀರು ಪೂರೈಕೆ ಪೈಪ್‌ಲೈನ್ ಒಡದುದಕ್ಕೆ ವಿರೋಧಿಸಿ ಸಾರ್ವಜನಿಕರು ಕುಂಪಲ ಬೈಪಾಸ್ ಬಳಿ ಪ್ರತಿಭಟನೆ ನಡೆಸಿದರು.

ನಂತೂರಿನಿಂದ ತಲಪಾಡಿವರೆಗೆ ಕಳೆದೊಂದು ತಿಂಗಳಿನಿಂದ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕುಂಪಲ ಬೈಪಾಸ್, ತೊಕ್ಕೊಟ್ಟು ರಸ್ತೆಬದಿಯಲ್ಲಿರುವ ಸಾವಿರಾರು ಜನರಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗಳನ್ನು ಒಡೆದು ಹಾಕಲಾಗಿದೆ. ಇದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಸಾರ್ವಜನಿಕರು ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು, ಕಾಮಗಾರಿ ನಡೆಸುವ ಮುನ್ನ ಸ್ಥಳೀಯ ಗ್ರಾ.ಪಂ ನೊಂದಿಗೆ ಸಂಪರ್ಕಿಸಿ ಅನುಮತಿಯನ್ನು ಪಡೆದುಕೊಳ್ಳಿ, ಎಲ್ಲೆಲ್ಲಿ ಎಷ್ಟೆಷ್ಟು ಪೈಪ್‌ಗಳಿದೆ ಎಂಬುದನ್ನು ತಿಳಿದುಕೊಳ್ಳಿ, ಅಭಿವೃದ್ಧಿಗೆ ನಮ್ಮ ವಿರೋಧವೇನೂ ಇಲ್ಲ, ಆದರೆ ಜನರಿಗೆ ಅಗತ್ಯವಾಗಿರುವ ನೀರನ್ನು ಕಡಿತಗೊಳಿಸಿ ಅಭಿವೃದ್ಧಿ ಪಡಿಸುವುದರಲ್ಲಿ ಅರ್ಥವಿಲ್ಲ ಎಂಬುದನ್ನು ಗುತ್ತಿಗೆದಾರರಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗುತ್ತಿಗೆದಾರರು  ಹಾನಿಗೊಳಗಾದ ಪೈಪ್‌ಲೈನ್ ಅನ್ನು ಕೂಡಲೇ ದುರಸ್ತಿಗೊಳಿಸುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಜಿ.ಪಂ ಸದಸ್ಯ ಸತೀಶ್ ಕುಂಪಲ ಮೊದಲಾದವರು ಇದ್ದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.