ADVERTISEMENT

ಕಾರ್ಯಕರ್ತರ ವಿರುದ್ಧ ಪ್ರಕರಣ-ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 7:30 IST
Last Updated 4 ಅಕ್ಟೋಬರ್ 2011, 7:30 IST
ಕಾರ್ಯಕರ್ತರ ವಿರುದ್ಧ ಪ್ರಕರಣ-ಪ್ರತಿಭಟನೆ
ಕಾರ್ಯಕರ್ತರ ವಿರುದ್ಧ ಪ್ರಕರಣ-ಪ್ರತಿಭಟನೆ   

ಮುಡಿಪು: ಹರೇಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ನಡೆದಿರುವ ಅವ್ಯವಹಾರ ಪ್ರಕರಣದಲ್ಲಿ ಗ್ರಾ.ಪಂ ಆಡಳಿತಗಾರರು ಹಾಗೂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವ ಬದಲು, ಅಕ್ರಮಗಳನ್ನು ಬಯಲಿಗೆಳೆದ ಡಿವೈಎಫ್‌ಐ ಕಾರ್ಯಕರ್ತರ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ ಎಂದು ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.

ಉದ್ಯೋಗ ಖಾತರಿ ಯೋಜನೆ ಅವ್ಯವಹಾರ ಬೆಳಕಿಗೆ ತಂದ ಕಾರ್ಯಕರ್ತರ ಮೇಲೆಯೇ ಪ್ರಕರಣ  ದಾಖಲಿಸಿರುವುದನ್ನು ಖಂಡಿಸಿ ಡಿವೈಎಫ್‌ಐ ವತಿಯಿಂದ ಹರೇಕಳ ಕಡವಿನ ಬಳಿ ಭಾನುವಾರ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. 

`ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವಾಗ ಹರೇಕಳ ಗ್ರಾ.ಪಂ.ನಲ್ಲಿ ಮಾತ್ರ ಅಧಿಕಾರಿಗಳು ಮತ್ತು ಆಡಳಿತಗಾರರು ಉದ್ಯೋಗ ಖಾತರಿ ಹಣ ಅವ್ಯವಹಾರದಲ್ಲಿ ನಿರತರಾಗಿದ್ದರು. ಆದರೆ ಈ ಹಗರಣ ಬಯಲು ಮಾಡುವಲಿಕ್ಲ ಡಿವೈಎಫ್‌ಐ ಕಾರ್ಯಕರ್ತರು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದರು.

ತನಿಖೆಯಿಂದ ಹಗರಣ ನಡೆದಿರುವುದು ಸಾಬೀತಾಗಿದೆ. ತನಿಖೆಯ ದಿಕ್ಕುತಪ್ಪಿಸಲು ನಾಲ್ವರು ಡಿವೈಎಫ್‌ಐ ಕಾರ್ಯಕರ್ತರ ಮೇಲೆ ಕೇಸು ಹಾಕಲು ಪ್ರತ್ನಿಸಿದ್ದಾರೆ. ಒಂದು ವೇಳೆ ಅವರನ್ನು ಜೈಲಿಗೆ ಹಾಕಿದರೆ ಜಿಲ್ಲೆಯ ಡಿವೈಎಫ್‌ಐ ಕಾರ್ಯಕರ್ತರೆಲ್ಲ ಜೈಲ್‌ಭರೋ ಹಮ್ಮಿಕೊಂಡು ಪ್ರತಿಭಟನೆ ನಡೆಸಲಿದ್ದೇವೆ~ ಎಂದು ಮುನೀರ್ ಎಚ್ಚರಿಸಿದರು.

ದೇಶ ಮತ್ತು ರಾಜ್ಯದಲ್ಲಿ ಹಗರಣ ನಡೆಸಿದವರಲ್ಲಿ ಕೆಲವರು ಇಂದು ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ.   ಆದರೆ ಹರೇಕಳದಲ್ಲಿ ಮಾತ್ರ ಪರಿಸ್ಥಿತಿ ಭಿನ್ನವಾಗಿದೆ. ಇದರ ಹಿಂದೆ ಶಾಸಕ ಯು.ಟಿ.ಖಾದರ್ ಅವರ ಕೈವಾಡ ಇದೆ ಎಂದು ಮುನೀರ್ ಆರೋಪಿಸಿದರು.

ಅಕ್ರಮಗಳಿಗೆ ಕಾರಣರಾದ ಪಂಚಾಯಿತಿ ಆಡಳಿತಗಾರರು ಹಾಗೂ ಅಧಿಕಾರಿಗಳಿಗೆ ಶಿಕ್ಷೆಯಾಗುವ ವರೆಗೂ ಹೋರಾಟವನ್ನು ಕೈ ಬಿಡುವುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡ ಕೃಷ್ಣಪ್ಪ ಸಾಲ್ಯಾನ್, ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಯಾದವ ಶೆಟ್ಟಿ, ಮಹಾಬಲ ದೆಪ್ಪೆಲಿಮಾರ್, ಡಿವೈಎಫ್‌ಐ ವಲಯ ಕಾರ್ಯದರ್ಶಿ ಅಶೋಕ್ ಶೆಟ್ಟಿ, ಅಶ್ರಫ್ ಮತ್ತು ರಫೀಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.