ಕಾಸರಗೋಡು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸಮಗ್ರ ಮತ್ತು ದೀರ್ಘಾವಧಿಯ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಕೇರಳದ ಕೃಷಿ ಸಚಿವ ಕೆ.ಪಿ.ಮೋಹನನ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೊಳವೆಬಾವಿಗಳ ದುರಸ್ತಿ ಕಾರ್ಯಗಳಿಂದ ಫಲಬೀರದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಬೃಹತ್ ಯೋಜನೆಗೆ ರೂಪುರೇಷೆ ತಯಾರಿಸಬೇಕು. ಈ ಯೋಜನೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಗಮನಸೆಳೆಯುವುದಾಗಿ ಅವರು ಹೇಳಿದರು.
ಜಿಲ್ಲೆಗೆ ಅಗತ್ಯವಿರುವ ಯೋಜನೆಗಳ ರೂಪೀಕರಣ ಕುರಿತು ಸೋಮವಾರ ಚಿನ್ಮಯ ಮಿಷನ್‌ನ ಅನ್ನಪೂರ್ಣ ಸಭಾಂಗಣದಲ್ಲಿ ಸ್ಥಳೀಯಾಡಳಿತ ಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯನ್ನು ಸಾವಯವ ಜಿಲ್ಲೆಯನ್ನಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟವಿಲ್ಲದ ಗೊಬ್ಬರವನ್ನು ಕೃಷಿಕರಿಗೆ ವಿತರಿಸಬಾರದು. ಸ್ವಂತವಾಗಿ ಸಾವಯವ ಗೊಬ್ಬರ ಉತ್ಪಾದಿಸಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಬೆಳೆಗೆ ಗೊಬ್ಬರವನ್ನು ಖರೀದಿಸಬೇಕು ಎಂದು ಕೃಷಿಕರನ್ನು ಒತ್ತಾಯಿಸಬಾರದು. ಗುಣಮಟ್ಟವಿಲ್ಲದ ಗೊಬ್ಬರವನ್ನು ಕೃಷಿಕರು ಮತ್ತು ಪಂಚಾಯಿತಿ ಗುರುತಿಸಿ ಅದನ್ನು ವಾಪಾಸು ಕಳುಹಿಸಬೇಕು ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಗೇರು ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಪ್ರತಿ ಪಂಚಾಯಿತಿಯಲ್ಲಿ ಬಂಜರು ನೆಲದಲ್ಲಿ ಕೃಷಿ ವ್ಯಾಪಕಗೊಳಿಸಬೇಕು. ಹೈಟೆಕ್ ಕೃಷಿ ಯೋಜನೆ ರೂಪಿಸಲು ಸರ್ಕಾರ ಪ್ರೋತ್ಸಾಹ ನೀಡಲಿದೆ. ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಲಾಗುವುದು ಎಂದೂ ಹೇಳಿದರು. ಶಾಸಕರಾದ ಎನ್.ಎ.ನೆಲ್ಲಿಕುಂಜೆ, ಕೆ.ಕುಞ್ಞೆ ರಾಮನ್(ತೃಕ್ಕರಿ ಪುರ), ಕೆ.ಕುಞ್ಞೆರಾಮನ್(ಉದುಮ), ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಪಿ. ಶ್ಯಾಮಲಾ ದೇವಿ, ಜಿಲ್ಲಾಧಿಕಾರಿ ವಿ.ಎನ್.ಜಿತೇಂದ್ರನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.