ADVERTISEMENT

ಕೃಷಿಗೆ ಪ್ರತ್ಯೇಕ ಬಜೆಟ್ ಚಿಂತನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 11:20 IST
Last Updated 24 ಜನವರಿ 2011, 11:20 IST

ಬಜಗೋಳಿ: ಕೃಷಿ ಕ್ಷೇತ್ರಕ್ಕೆ ಪ್ರತ್ಯೇಕ ಬಜೆಟ್ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಕೃಷಿ ಕ್ಷೇತ್ರ ಅಭಿವೃದ್ಧಿ, ರೈತರ ಸಂಕಷ್ಟ ಪರಿಹಾರಕ್ಕೆ ಕೃಷಿ ಮೇಳದಲ್ಲಿ ತೆಗೆದುಕೊಳ್ಳುವ ನಿರ್ಣಯಗಳ ಹಿನ್ನೆಲೆಯಲ್ಲಿ ಕಾರ್ಯಕ್ರಮ ರೂಪಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ವಿ.ಎಸ್. ಆಚಾರ್ಯ ತಿಳಿಸಿದರು. 
ಬಜಗೋಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಜ್ಯ ಮಟ್ಟದ ಕೃಷಿ ಮೇಳದ ತಯಾರಿ ವೀಕ್ಷಿಸಿದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಕೃಷಿ ಪ್ರಧಾನ ರಾಜ್ಯದಲ್ಲಿ ಕೃಷಿ ಬಜೆಟ್ ಚಿಂತನೆ ತಪ್ಪಲ್ಲ. ಅಂತಹ ಅಗತ್ಯವೂ ಇದೆ. ಇಲಾಖೆಯ ಅಧಿಕಾರಿಗಳಿಗೆ ಕೈ   ತುಂಬಾ ಕೆಲಸ ಒದಗಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳದ ಹರಿವಿನ ಮೂಲಕ ನಿರ್ದಿಷ್ಟ ಸಾಧನೆಯ ಗುರಿ ತಲುಪುವ ಬದ್ಧತೆಗೆ ಕೃಷಿ ಬಜೆಟ್ ಪೂರಕವಾಗುತ್ತದೆ. ಕೃಷಿ ಕ್ಷೇತ್ರದಲ್ಲಿ ತಾಂತ್ರಿಕತೆ ಅಳವಡಿಕೆ ಕಾರ್ಮಿಕರ ಸಹಭಾಗಿತ್ವದಲ್ಲಿ ಸಾವಯವ ಕೃಷಿ ಚಟುವಟಿಕೆಗಳಿಗೆ ವೇಗ, ಕೃಷಿ ಕುಟುಂಬಗಳ ವಲಸೆ ತಡೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೃಷಿ ಬಜೆಟ್ ಶಕ್ತಿ ನೀಡಬಹುದು ಎಂದು ಅವರು ಅಭಿಪ್ರಾಯ ಪಟ್ಟರು.

ಪೊಲೀಸ್ ಇಲಾಖೆ ಕೃಷಿ ಮೇಳದಲ್ಲಿ ಹೆಚ್ಚಿನ ಜವಾಬ್ದಾರಿ ಹೊಂದಿದ್ದಾರೆ. ಅದೇ ರೀತಿ ಇತರೆ ಇಲಾಖೆಗಳು ಮೇಳದಲ್ಲಿ ಅಗತ್ಯವಿರುವ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸುವಲ್ಲಿ ಹಿಂದೆ ಬೀಳುವುದಿಲ್ಲ ಎಂದು ತಿಳಿಸಿದರು.

ರಾಜ್ಯದ ಜನಸಂಖ್ಯೆಯಲ್ಲಿ ಶೇ 56ರಷ್ಟು ಮಂದಿ ಕೃಷಿಕರಿದ್ದು. ಕೃಷಿಕರ ಮತ್ತು ಕೃಷಿ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಇಲಾಖೆಗಳು ನಿರಾಸಕ್ತಿ ತೋರಬಾರದು. ಕೃಷಿ ಮೇಳ ಸ್ಥಳಕ್ಕೆ ಹೊಂದಿರುವ ದಿಡಿಂಬರಿ-ಬಜಗೋಳಿ ನಡುವಿನ ಎರಡೂವರೆ ಕಿಲೋಮೀಟರ್ ರಸ್ತೆ ಒಂದುವಾರದೊಳಗೆ ಪೂರ್ಣಗೊಳ್ಳಬೇಕು. ನಾರಾವಿ- ಬಜಗೋಳಿ ರಾಜ್ಯ ಹೆದ್ದಾರಿ ರಸ್ತೆ ಭಾಗಕ್ಕೆ ಪ್ಯಾಚ್ ವರ್ಕ್ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು. ಮೇಳಕ್ಕೆ ಬರುವವರಿಗಾಗಿ ಸರ್ಕಾರ ಬಸ್ ಖಾಸಗಿ, ಹೆಚ್ಚುವರಿ ಬಸ್ ಸೇವೆ ಒದಗಿಸುವಂತೆ ಸಾರಿಗೆ ಇಲಾಖೆಗೆ ನಿರ್ದೇಶನ ನೀಡಿದ ಅವರು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಶಾಲೆಗಳಿಗೆ ಸಮ್ಮೇಳನದ ದಿನಗಳಲ್ಲಿ ರಜೆ ಘೋಷಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದರು.

108 ಆರೋಗ್ಯ ಸೇವೆ ವಾಹನ ಪೂರ್ಣಾವಧಿ ಸೇವೆ, ವಿಶೇಷ ಕ್ಲಿನಿಕ್ ಸ್ಥಾಪಿಸುವಂತೆ, ಸ್ವಚ್ಛತಾ ಕಾರ್ಯಕ್ರಮಗಳ ಪೂರ್ಣ ವ್ಯವಸ್ಥೆ ಏರ್ಪಡಿಸಲು ಆರೋಗ್ಯ ಇಲಾಖೆ, ಕಾರ್ಕಳ ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳಿಗೆ ಸೂಚಿಸಿದರು. ಸಮ್ಮೇಳನದ ಸಂದರ್ಭ ಪೊಲೀಸ್ ಹೊರ ಠಾಣೆ ಸ್ಥಾಪನೆ, ಜತೆಗೆ ನೂರು ಮಂದಿ ಪಿ.ಸಿ. ಗಳು, 50 ಹೋಂ ಗಾರ್ಡ್‌ಗಳನ್ನು ಒದಗಿಸಿ ಭದ್ರತಾ ವ್ಯವಸ್ಥೆಯಲ್ಲಿ ಅಧಿಕಾರಿಗಳಿಗೆ ನೆರವಾಗುವ ವ್ಯವಸ್ಥೆ ಏರ್ಪಡಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದರು. ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಮಾತನಾಡಿ ಕೃಷಿ ಕ್ಷೇತ್ರಕ್ಕೆ ಸರ್ಕಾರ ತೋರುವ ಮುತುವರ್ಜಿಗೆ ಜನಸ್ಪಂದನೆ ಸಿಗುವ ನಿಟ್ಟಿನಲ್ಲಿ ಸಮ್ಮೇಳನ ದಿಕ್ಸೂಚಿಯಾಗಬೇಕು ಎಂದರು.

ಶಾಸಕ ಗೋಪಾಲ ಭಂಡಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಾ. ಎಲ್.ಎಚ್. ಮಂಜುನಾಥ್, ಪ್ರಭಾರ ಜಿಲ್ಲಾಧಿಕಾರಿ ಪ್ರಭಾಕರ್, ಸಹಾಯಕ ಆಯುಕ್ತ ಸದಾಶಿವ ಪ್ರಭು, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಅಧಿಕಾರಿ, ಕೃಷಿ ಮೇಳದ ಅಧ್ಯಕ್ಷ ಮಹಾವೀರ ಜೈನ್, ಮಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರಿಶ್ಚಂದ್ರ ತೆಂಡೂಲ್ಕರ್, ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ರೂಪ ಜೈನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.