ADVERTISEMENT

`ಕೆಜೆಪಿಯಿಂದ ಬಿಜೆಪಿಗೆ ನಷ್ಟವಿಲ್ಲ'

ಪುತ್ತೂರು: ಸಂಸದ ನಳಿನ್ ಕುಮಾರ್

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 9:44 IST
Last Updated 15 ಡಿಸೆಂಬರ್ 2012, 9:44 IST

ಪುತ್ತೂರು: `ಜಿಲ್ಲೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರು ಯಾರೂ ಕೆಜಿಪಿಗೆ ಹೋಗುವುದಿಲ್ಲ. ಬಿಜೆಪಿಯಲ್ಲಿ ಈ ಹಿಂದೆ ಎಲ್ಲ ರೀತಿಯ ಲಾಭಗಳನ್ನು ಪಡೆದು ಕಳೆದ ಕೆಲವು ಸಮಯದಿಂದ ಪಕ್ಷದಿಂದ ದೂರ ಉಳಿದು ಕೊಂಡವರು ಮಾತ್ರ ಹೋಗಿದ್ದಾರೆ. ಇದರಿಂದ ಬಿಜೆಪಿಗೆ ನಷ್ಟವಿಲ್ಲ' ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ  ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಭಾಗವಹಿಸಲು ಪುತ್ತೂರಿಗೆ ಆಗಮಿಸಿದ್ದ ಅವರು ಸಭೆಗೆ ಮುನ್ನ ಸುದ್ದಿಗಾರರ ಜತೆ ಮಾತನಾಡಿದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಪಕ್ಷದ ಸ್ಥಳೀಯ ನಾಯಕರ, ಕಾರ್ಯಕರ್ತರ ಅಭಿಪ್ರಾಯ ಪಡೆದುಕೊಂಡು ರಾಜ್ಯ ನಾಯಕರು ಅಭ್ಯರ್ಥಿಗಳ ಆಯ್ಕೆ ಮಾಡುವರು.

ಪಕ್ಷದ ನಿಷ್ಠಾವಂತರಿಗೆ, ಪಕ್ಷ ಸಂಘಟನೆಯಲ್ಲಿ ತೊಡಗಿದವರಿಗೆ ಅವಕಾಶ ನೀಡುವರು ಎಂದು ಹೇಳಿದ ನಳಿನ್, ಜಿಲ್ಲೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಮಾತ್ರ ಎದುರಾಳಿ. ಇಲ್ಲಿ ತ್ರಿಕೋನ ಅಥವಾ ಚತುಷ್ಕೋನ ಸ್ಪರ್ಧೆ ಇದ್ದರೆ ಅದರಿಂದ ಬಿಜೆಪಿಗೇ ಲಾಭ ಹೆಚ್ಚು ಎಂದರು.

ಮುಂಬರುವ ನಗರ ಸಭೆ, ಮಹಾನಗರಪಾಲಿಕೆ ಮತ್ತು ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ಪೂರ್ವ ತಯಾರಿಯಲ್ಲಿ ತೊಡಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಜನವರಿಯೊಳಗಾಗಿ ಬೂತ್ ಸಮಿತಿಗಳನ್ನು ಸಕ್ರಿಯಗೊಳಿಸುವ ಮತ್ತು ಸಮಿತಿಗಳು ಇಲ್ಲದ ಕಡೆ ಹೊಸದಾಗಿ ಸಮಿತಿಗಳನ್ನು ರಚಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

ಜನವರಿ 15ರೊಳಗೆ ಜಿಲ್ಲಾ ಮಟ್ಟದಲ್ಲಿ ಬೂತ್ ಕಮಿಟಿ ಮತ್ತು ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಲಾಗುವುದು ಎಂದೂ  ಅವರು ತಿಳಿಸಿದರು.

ಪಕ್ಷದಲ್ಲಿನ ಗೊಂದಲ ನಿವಾರಿಸುವ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ಮುಖಂಡರನ್ನು ಒಳಗೊಂಡ ನಾಲ್ಕು  ತಂಡಗಳು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿವೆ. ಜೊತೆಗೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳ -ಆಕಾಂಕ್ಷಿಗಳ ಪಟ್ಟಿ ತಯಾರಿಸಲಿದೆ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಒಳಗೊಂಡ ತಂಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದೆ ಎಂದರು.

ಮುಂಬರುವ ಫೆಬ್ರುವರಿ 3ರಂದು ನಡೆಯಲಿರುವ ಆರೆಸ್ಸೆಸ್‌ನ ವಿಶೇಷ ಸಾಂಘಿಕ ಬೈಠಕ್ ಬಗ್ಗೆಯೂ ಜಿಲ್ಲೆಯಲ್ಲಿ ತಯಾರಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಶಾಸಕಿ ಮಲ್ಲಿಕಾ ಪ್ರಸಾದ್, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಪ್ರಭಾ ಸಂಪ್ಯ, ಪುರಸಭಾಧ್ಯಕ್ಷೆ ಕಮಲಾ ಆನಂದ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು,  ಕ್ಷೇತ್ರ ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ರಾಜೀವ ಭಂಡಾರಿ ಮತ್ತು ಜಯರಾಮ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.