ADVERTISEMENT

ಕೇಂದ್ರದ ಅನುದಾನ ನಿಧಾನಗತಿ ಬಳಕೆ

ಸಂಸದ ನಳಿನ್‌ಕುಮಾರ್‌ ಕಟೀಲ್‌ ಆರೋಪ

​ಪ್ರಜಾವಾಣಿ ವಾರ್ತೆ
Published 4 ಮೇ 2018, 11:05 IST
Last Updated 4 ಮೇ 2018, 11:05 IST

ಮಂಗಳೂರು: ಬಿಜೆಪಿ ಅವಧಿಯಲ್ಲಿ ನಡೆದ ಕೆಲಸಗಳನ್ನು ತನ್ನ ಸಾಧನೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್‌. ಲೋಬೊ ಹೇಳಿಕೊಳ್ಳುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಸ್ಮಾರ್ಟ್ ಸಿಟಿ ಮತ್ತು ಅಮೃತ್‌ ಯೋಜನೆಯ ಅನುದಾನವನ್ನು ಸಮರ್ಥವಾಗಿ ಬಳಸಿಕೊಳ್ಳುವುದು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ₹ 200 ಕೋಟಿ ಅನುದಾನವನ್ನು ಮಂಗಳೂರು ನಗರ ಅಭಿವೃದ್ಧಿಗೆ ನೀಡಿದ್ದರು. ಈ ಅನುದಾನದ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕ ಲೋಬೊ ಅವರು ಉದ್ಘಾಟಿಸಿದ್ದು ಬಿಟ್ಟರೆ ಬೇರೇನೂ ಕೆಲಸ ಮಾಡಿಲ್ಲ. ರಾಜ್ಯ ಸರ್ಕಾರ ಕಳೆದ ಅವಧಿಯಲ್ಲಿ ಮಹಾನಗರ ಪಾಲಿಕೆಗೆ ಬಿಡುಗಡೆಗೊಳಿಸಿದ್ದು ಕೇವಲ ₹ 59 ಕೋಟಿ ಮಾತ್ರ ಎಂದು ಅವರು ಹೇಳಿದರು.

‘ಸ್ಮಾರ್ಟ್‍ಸಿಟಿ ಯೋಜನೆಯ 2ನೇ ಹಂತದಲ್ಲಿ ಮಂಗಳೂರು ಆಯ್ಕೆಯಾಗಿದೆ. ಒಟ್ಟು ₹1 ಸಾವಿರ ಕೋಟಿ ಮೊತ್ತದಲ್ಲಿ 216 ಕೋಟಿ ಮೊತ್ತವನ್ನು ಮೊದಲ ಹಂತದಲ್ಲಿ ಕೇಂದ್ರ ಸರ್ಕಾರ  ಬಿಡುಗಡೆಗೊಳಿಸಿದೆ. ಆದರೆ ಸ್ಮಾರ್ಟ್ ಸಿಟಿ ಯೋಜನೆಯ ಎಸ್‍ಪಿವಿ ರಚನೆಯನ್ನೇ ಸರ್ಕಾರ ವಿಳಂಬ ಮಾಡಿತು. ಸೌಜನ್ಯಕ್ಕಾದರೂ ಶಾಸಕರು ಇದರ ಸಭೆಗಳಿಗೆ ಸಂಸದನ ನೆಲೆಯಲ್ಲಿ ನನ್ನನ್ನು ಆಹ್ವಾನಿಸಿಲ್ಲ. ಸ್ಮಾರ್ಟ್‍ ಸಿಟಿ ಅನುಷ್ಠಾನಗೊಂಡರೆ ಅದರ ಯಶಸ್ಸು ಬಿಜೆಪಿಗೆ ಸಲ್ಲುತ್ತದೆ ಎಂಬ ಕಾರಣಕ್ಕೆ ಯೋಜನೆಯನ್ನು ವಿಳಂಬ ಮಾಡಲಾಗುತ್ತಿದೆ’ ಎಂದು ದೂರಿದರು.

ADVERTISEMENT

ಪ್ರಧಾನಿ ಆವಾಸ್ ಯೋಜನೆಯಲ್ಲಿ 2024 ರೊಳಗೆ ಎಲ್ಲರಿಗೆ ಮನೆ ನಿರ್ಮಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದಕ್ಕಾಗಿ ಮಂಗಳೂರಿನ ಶಕ್ತಿನಗರದಲ್ಲಿ ಪ್ರಧಾನಿ ಆವಾಸ್ ಯೋಜನೆ ಅನುಷ್ಠಾನಗೊಳ್ಳಲಿದೆ. ಆದರೆ ಶಾಸಕ ಲೋಬೊ ಇದನ್ನು ತಮ್ಮ ಸಾಧನೆ ಎಂದು ಬಿಂಬಿಸುತ್ತಿದ್ದಾರೆ ಎಂದು ಅವರು ದೂರಿದರು.

ಮಂಗಳೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆಗೆ ಅಗತ್ಯವಾದ 80 ಎಕರೆ ಜಾಗವನ್ನು ರಾಜ್ಯ ಸರ್ಕಾರ ಮಂಜೂರುಗೊಳಿಸಿಲ್ಲ. ಪ್ಲಾಸ್ಟಿಕ್ ಪಾರ್ಕ್‍ಗೆ ಜಾಗ ನೀಡಿಲ್ಲ. ವಿಶ್ವದರ್ಜೆಯ ರೈಲು ನಿಲ್ದಾಣಕ್ಕೆ ಅವಶ್ಯವಾದ 25 ಎಕರೆ ಜಾಗವನ್ನು ನೀಡಿಲ್ಲ. ಇದನ್ನು ಅನುಷ್ಠಾನಗೊಳಿಸಲು ದಕ್ಷ ಅಧಿಕಾರಿಯೊಬ್ಬರು ಇದ್ದಿದ್ದರೆ ಸಾಧ್ಯವಾಗುತ್ತಿತ್ತು  ಎಂದು ಅವರು ಹೇಳಿದರು.

ಮಾಜಿ ಶಾಸಕ ರುಕ್ಮಯ ಪೂಜಾರಿ, ಮುಖಂಡರಾದ ರವಿಶಂಕರ ಮಿಜಾರ್‌, ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ, ರೂಪಾ ಬಂಗೇರ ಇದ್ದರು.

ನಿರ್ದಿಷ್ಟ ಪಕ್ಷಕ್ಕೆ ಮತ ಕೇಳುವ ಪ್ರಕಾಶ್‌

ಹಿಂದೂ ಧರ್ಮಕ್ಕೆ ಬೈದು, ನಿರ್ದಿಷ್ಟ ಪಕ್ಷವೊಂದಕ್ಕೆ ಮತ ಕೇಳುವ ಪ್ರಕಾಶ್‌ ರೈ, ತಾವು ಬುದ್ಧಿಜೀವಿ ಎಂದು ಗುರುತಿಸಿಕೊಳ್ಳಲು ಹೊರಟಿದ್ದಾರೆ. ಅವರಿಗೆ ಹಿಂದೂ ಧರ್ಮದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಮುಂದಿನ ದಿನಗಳಲ್ಲಿ ಅವರು ನಿರ್ದಿಷ್ಟ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವ ಕನಸು ಕಾಣುತ್ತಿದ್ದಾರೆ ಎಂದು ನಳಿನ್‌ಕುಮಾರ್‌ ಕಟೀಲ್‌ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.