ADVERTISEMENT

‘ಗೌರಿ ಲಂಕೇಶ್‌ ಎಡ ಪಂಥೀಯರಾಗಿರಲಿಲ್ಲ’

‘ಗೌರಿ ನೆನಪು ’ ಕಾರ್ಯಕ್ರಮದಲ್ಲಿ ಚಿಂತಕ ಶಿವಸುಂದರ್‌

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 10:05 IST
Last Updated 3 ಅಕ್ಟೋಬರ್ 2017, 10:05 IST

ಮಂಗಳೂರು: ‘ಪತ್ರಕರ್ತೆ ಗೌರಿ ಲಂಕೇಶ್‌ ಎಡಪಂಥೀಯರಾಗಿರಲಿಲ್ಲ. ಅವರಿಗೆ ಮಾರ್ಕ್ಸ್‌ವಾದದ ಕುರಿತು ಪ್ರೀತಿ ಇರಲಿಲ್ಲ’ ಎಂದು ಚಿಂತಕ, ಹೋರಾಟ ಗಾರ ಶಿವಸುಂದರ್‌ ಹೇಳಿದರು.

ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ನಗರದ ಸೇಂಟ್ ಅಲೋಶಿಯಸ್ ಕಾಲೇಜಿನ ಸಭಾಂ ಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಗೌರಿ ಲಂಕೇಶ್‌ ನೆನಪು ಮತ್ತು ಅಭಿವ್ಯಕ್ತಿ ಅವಲೋಕನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗೌರಿ ಎಡಪಂಥೀಯರಾಗಿದ್ದರು, ನಕ್ಸಲ್‌ವಾದಿಯಾಗಿದ್ದರು ಎಂದು ಆಕೆಯ ವಿರೋಧಿಗಳು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ. ಆಕೆ ನಿಜವಾದ ಅರ್ಥದಲ್ಲಿ ಜೀವಪರ ವ್ಯಕ್ತಿಯಾಗಿದ್ದರು’ ಎಂದರು.

‘ಕಂಡದನ್ನನ್ನು ಹಾಗೆಯೇ ಬರೆಯುವ ಮತ್ತು ಮಾತನಾಡುವ ಸಾಂವಿಧಾನಿಕ ನೈತಿಕತೆಯನ್ನು ಗೌರಿ ಉಳಿಸಿಕೊಂಡಿದ್ದರು. ಪತ್ರಿಕೋದ್ಯಮದಲ್ಲಿ ಸಾಂವಿಧಾನಿಕ ನೈತಿಕತೆಯನ್ನು ಉಳಿಸುವುದಕ್ಕಾಗಿ ಜೀವನವನ್ನೇ ಮುಡಿಪಾಗಿ ಇರಿಸಿದ್ದರು. ಅದಕ್ಕಾಗಿಯೇ ಅವರು ಸುಖಕರ ಜೀವನದಿಂದ ಸಂಘರ್ಷದ ಜೀವನದ ಹಾದಿ ತುಳಿದಿದ್ದರು’ ಎಂದು ಹೇಳಿದರು.

ADVERTISEMENT

‘ನಕ್ಸಲೀಯರನ್ನು ಮುಖ್ಯವಾಹಿನಿಗೆ ಕರೆತರುವುದಕ್ಕೆ ಸಂಬಂಧಿಸಿದ ಪ್ರಯತ್ನದಲ್ಲಿ ನಾನೂ ಅವರೊಂದಿಗೆ ಇದ್ದೆ. ಅದಕ್ಕಾಗಿ 40ಕ್ಕೂ ಹೆಚ್ಚು ಬಾರಿ ಅವರೊಂದಿಗೆ ವಿಧಾನಸೌಧಕ್ಕೆ ಹೋಗಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಯಾವತ್ತೂ ಆ ಗೌರವವನ್ನು ವೈಯಕ್ತಿಕ ಲಾಭಕ್ಕಾಗಿ ಬಳಕೆ ಮಾಡಲಿಲ್ಲ. ವಿಧಾನ ಪರಿಷತ್‌ ಸದಸ್ಯೆಯಾಗುವಂತೆ ಆಹ್ವಾನ ನೀಡಿದಾಗಲೂ ತಿರಸ್ಕರಿಸಿದ್ದರು’ ಎಂದರು.

ಕಾರ್ಪೋರೇಟ್‌ ಬಂಡವಾಳಷಾಹಿ ಮತ್ತು ಹಿಂದುತ್ವ ಸತ್ಯ ಹೇಳುವವರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ತೀರಾ ಬಿಕ್ಕಟ್ಟಿನಲ್ಲಿದೆ. 2014ರ ಮೇ 23ರಿಂದ 2017ರ ಮೇ 20ರವರೆಗೆ ಭಾರತದಲ್ಲಿ 53 ಮಂದಿ ಪತ್ರಕರ್ತರ ಕೊಲೆ ನಡೆದಿದೆ. ಕೊಲೆಗಾರರೇ ಇಲ್ಲದೇ ಕೊಲೆಗಳು ನಡೆಯುವಂತಹ ಕಾಲ ಸೃಷ್ಟಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾ ಲಯದ ಕುಲಪತಿ ಡಾ.ಸಬಿಹಾ ಭೂಮಿ ಗೌಡ, ‘ಗೌರಿ ಯಾವ ವಾದವನ್ನೂ ಒಪ್ಪಿಕೊಂಡವರಲ್ಲ. ಆಕೆಯದ್ದು ಸಂತತನಕ್ಕೆ ಸಮೀಪವಾದ ವ್ಯಕ್ತಿತ್ವ. ಸಮೀಪಕ್ಕೆ ಬಂದ ಎಲ್ಲರನ್ನೂ ತನ್ನತ್ತ ಸೆಳೆದು ಪ್ರೀತಿ ಹಂಚುವಂತಹ ಆಕರ್ಷಕ ವ್ಯಕ್ತಿಯಾಗಿದ್ದರು. ಅವರ ಬದುಕಿನ ಸರಳತೆ ಸೂಜಿಗಲ್ಲಿನ ರೀತಿ ಸೆಳೆಯುತ್ತಿತ್ತು. ಎಲ್ಲ ಬಗೆಯ ಶಿಷ್ಟಾಚಾರದ ಗೋಡೆಗಳನ್ನು ಒಡೆದು ಬದುಕಲು ಪ್ರಯತ್ನಿಸುತ್ತಿದ್ದರು’ ಎಂದರು.

ತಳ ಸಮುದಾಯಗಳ ಜನರ ಕುರಿತು ಗೌರಿಯವರು ಅಂತಃಕರಣದಲ್ಲಿಯೇ ಪ್ರೀತಿ ಹೊಂದಿದ್ದರು. ಅವರಂತಹ ಪತ್ರಕರ್ತರು ಅಂಗರಕ್ಷಕರನ್ನು ಇರಿಸಿಕೊಂಡು ಓಡಾಡುತ್ತಾ ಇರುವ ಹೊತ್ತಿನಲ್ಲಿ, ಬೆದರಿಕೆಯ ಕರೆಗಳನ್ನೂ ಆಕೆ ತಮಾಷೆಯಾಗಿ ಬಿಂಬಿಸುತ್ತಿದ್ದರು. ನಿಷ್ಠುರವಾಗಿ ಮಾತನಾಡುವುದನ್ನು ಮತ್ತು ಸರಳವಾಗಿ ಬದುಕುವುದನ್ನು ಸಹಿಸದೇ ಇರುವವರೇ ಆಕೆಯನ್ನು ಕೊಂದರು ಎಂದು ಹೇಳಿದರು.

‘ಸಾಮಾಜಿಕ ಮಾಧ್ಯಮಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂಬ ವಿಷಯ ಕುರಿತು ಹರ್ಷಕುಮಾರ್ ಕುಗ್ವೆ ಮಾತನಾಡಿದರು. ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಡಾ.ಬಿ.ಎಂ.ರೋಹಿಣಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.