ADVERTISEMENT

ಚತುಷ್ಪಥ ಕಾಮಗಾರಿ: ಬೇಡಿಕೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 9:30 IST
Last Updated 8 ಫೆಬ್ರುವರಿ 2011, 9:30 IST

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗುತ್ತಿರುವ ಸಮಸ್ಯೆ ಮತ್ತು ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಬ್ರಹ್ಮಾವರದ ನಾಗರಿಕರು ಮತ್ತು ಕಾಂಗ್ರೆಸ್ ಮುಖಂಡರು ಭಾನುವಾರ ಪಟ್ಟಣಕ್ಕೆ ಭೇಟಿ ನೀಡಿದ ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಚಿವ ಜಿತಿನ್ ಪ್ರಸಾದ್ ಅವರಲ್ಲಿ ವಿನಂತಿಸಿ  ಮನವಿ ಸಲ್ಲಿಸಿದರು.

ಪಟ್ಟಣದ ಬಸ್ ನಿಲ್ದಾಣದ ಬಳಿ ರಾತ್ರಿ ಸುಮಾರು 8 ಗಂಟೆಗೆ ಆಗಮಿಸಿದ ಸಚಿವರಲ್ಲಿ ಬಸ್ ನಿಲ್ದಾಣದ ಬಳಿಯಲ್ಲಿ ನಿರ್ಮಿಸಲಾಗುತ್ತಿರುವ ಅಂಡರ್‌ಪಾಸ್‌ನಿಂದ ಬಸ್ ನಿಲ್ದಾಣಕ್ಕೆ ಬಸ್‌ಗಳು ಬರಲು ಯಾವುದೇ ತೊಂದರೆ ಆಗಬಾರದು. 17 ಅಡಿ ಎತ್ತರದ ಅಂಡರ್‌ಪಾಸ್ 12 ಅಡಿಗೆ ತಗ್ಗಿಸಬೇಕು. ರಸ್ತೆ ಅಗಲ ಕಾರ್ಯವನ್ನು 60 ಮೀ. ಬದಲಾಗಿ 45 ಮೀಟರ್ ಕಡಿತಗೊಳಿಸಬೇಕು.
 
ಜಾಗ ಕಳೆದುಕೊಳ್ಳುವ ಸಂತ್ರಸ್ತರಿಗೆ ಸರ್ಕಾರ ನಿಗದಿಪಡಿಸುವ ಪರಿಹಾರದ ಬದಲು ಚಾಲ್ತಿಯಲ್ಲಿರುವ ಮಾರ್ಕೆಟ್ ದರ ನೀಡಬೇಕು ಮತ್ತು ಸರ್ವಿಸ್ ರಸ್ತೆಗೆ ಯಾವುದೇ ಸಮಸ್ಯೆ ಆಗಬಾರದು... ಹೀಗೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಿಕೊಂಡರು. ನಂತರ ಸಚಿವರು ಮಾತನಾಡಿ ಚತುಷ್ಪಥದಿಂದ ಬ್ರಹ್ಮಾವರ ಹೃದಯ ಭಾಗದಲ್ಲಿ ಯಾವುದೇ ತೊಂದರೆಗಳಾಗದಂತೆ ಕಾಮಗಾರಿ ಪೂರೈಸುವುದಾಗಿ ಭರವಸೆ ನೀಡಿದರು. ಕಾಂಗ್ರೆಸ್ ಮುಖಂಡರಾದ ಜಯಪ್ರಕಾಶ್ ಹೆಗ್ಡೆ, ವಸಂತ ವಿ. ಸಾಲ್ಯಾನ್, ಪ್ರಮೋದ್ ಮಧ್ವರಾಜ್, ಭುಜಂಗ ಶೆಟ್ಟಿ, ಎಸ್.ನಾರಾಯಣ್, ಎಂ.ಎ.ಗಫೂರ್, ರಾಜೇಶ್ ಶೆಟ್ಟಿ ಬಿರ್ತಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಖ್ಯಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.