ADVERTISEMENT

ಚತುಷ್ಪಥ: ಪ್ರಮುಖ ಕಾಮಗಾರಿ ವರ್ಷದೊಳಗೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 10:43 IST
Last Updated 4 ಜುಲೈ 2013, 10:43 IST

ಮಂಗಳೂರು:ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಳಿಸುವ ಯೋಜನೆಯ ಸೇತುವೆಗಳು ಹಾಗೂ ಮೇಲ್ಸೇತುವೆಗಳು ಸಹಿತ ಪ್ರಮುಖ ಕಾಮಗಾರಿಗಳು ವರ್ಷ ದೊಳಗೆ ಪೂರ್ಣಗೊಳ್ಳಲಿವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀರಾಂ ಮಿಶ್ರಾ ತಿಳಿಸಿದರು.

ಶಾಸಕ ಜೆ.ಆರ್.ಲೋಬೊ ಅವರು ಬುಧವಾರ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಪರಿಶೀಲನೆ ನಡೆಸಿದ ವೇಳೆ ಅವರು ಕಾಮಗಾರಿಯ ಪ್ರಗತಿಯ ಬಗ್ಗೆ ವಿವರ ನೀಡಿದರು.

`ಸುರತ್ಕಲ್‌ನಿಂದ ತಲಪಾಡಿವರೆಗೆ ಒಟ್ಟು 22 ಮೇಲ್ಸೇತುವೆ ಹಾಗೂ ಕೆಳಸೇತುವೆ ಗಳು ಬರಲಿವೆ. ಪಡೀಲ್‌ನಲ್ಲಿ ಇನ್ನೊಂದು ರೈಲ್ವೆ ಕೆಳಸೇತುವೆ ನಿರ್ಮಾಣಗೊಳ್ಳಲಿದೆ. ಬೈಕಂಪಾಡಿ  ಹಾಗೂ ಬಂಟ್ವಾಳದಲ್ಲಿ ಎರಡು ರೈಲ್ವೆ ಮೇಲ್ಸೇತುವೆಗಳು ಮಂಜೂರಾಗಿದ್ದು, ವರ್ಷದೊಳಗೆ ಕಾಮಗಾರಿ ಪೂರ್ಣ ಗೊಳ್ಳಲಿದೆ' ಎಂದು ಮಿಶ್ರಾ ತಿಳಿಸಿದರು.

`ಬಿಕರ್ನಕಟ್ಟೆ ಮೇಲ್ಸೇತುವೆ ಆಗಸ್ಟ್ ಅಂತ್ಯದಲ್ಲಿ ಜನಬಳಕೆಗೆ ಲಭ್ಯವಾಗಲಿದೆ. ಕೊಟ್ಟಾರಚೌಕಿ ಮೇಲ್ಸೇತುವೆ ಪಕ್ಕದ 3 ಮೀಟರ್ ಅಗಲದ  ಸರ್ವೀಸ್ ರಸ್ತೆಯನ್ನು 5 ಮೀಟರ್‌ಗೆ ವಿಸ್ತರಿ ಸಲಾಗುವುದು. ಇದಕ್ಕೆ ಪ್ರತ್ಯೇಕ ಭೂಸ್ವಾಧೀನದ ಅಗತ್ಯವಿಲ್ಲ. ಸುರತ್ಕಲ್‌ನಿಂದ ಬಿ.ಸಿ.ರೋಡ್‌ವರೆಗೆ ಒಟ್ಟು 34 ಕಡೆ ಬಸ್‌ನಿಲ್ದಾಣಗಳನ್ನು ನಿರ್ಮಿಸಲಾ ಗುವುದು' ಎಂದು ಅವರು ತಿಳಿಸಿದರು.

`ಕೆಪಿಟಿ ಬಳಿ ಮೇಲ್ಸೇತುವೆ ನಿರ್ಮಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಂಪ್‌ವೆಲ್‌ನಲ್ಲಿ ಮೇಲ್ಸೇತುವೆ ನಿರ್ಮಾಣ ಗೊಳ್ಳಲಿದ್ದು, ಈ ಕುರಿತ ವಿನ್ಯಾಸವನ್ನು ಅಧಿಕಾರಿಗಳು ಜನಪ್ರತಿನಿಧಿಗಳಿಗೆ ತೋರಿಸಿ ಚರ್ಚಿಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ಲೋಬೋ ತಿಳಿಸಿದರು.

`ಬಿಕರ್ನಕಟ್ಟೆ ಮೇಲ್ಸೇತುವೆ ಪಕ್ಕದಲ್ಲಿ ಕುಲಶೇಖರ ಕಡೆಗೆ ಹೋಗುವ ಸರ್ವೀಸ್ ರಸ್ತೆ ತೀರಾ ಕಿರಿದಾಗಿದೆ. ಈ ರಸ್ತೆಯನ್ನು ಕನಿಷ್ಠ 5 ಮೀಟರ್‌ಗೆ ವಿಸ್ತರಿಸಲು ಭೂ ಸ್ವಾಧೀನ ನಡೆಸಲಾಗುವುದು' ಎಂದು ಲೋಬೊ ತಿಳಿಸಿದರು.

ನಂತೂರು ಮೇಲ್ಸೇತುವೆ- ಚಿಗುರಿದ ಕನಸು: `ನಗರದ ನಂತೂರು ವೃತ್ತದಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಫ್ಲೈಓವರ್ ನಿರ್ಮಿಸುವ ಪ್ರಸ್ತಾವ ಮತ್ತೆ ಚರ್ಚೆಯಲ್ಲಿದೆ. ಇದಕ್ಕೆ ರೂ  20 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಸುರತ್ಕಲ್-ತಲಪಾಡಿ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣಗೊಳ್ಳಲಿದೆ. ಇದರಿಂದ ನಂತೂರು ವೃತ್ತದ ವಾಹನ ದಟ್ಟಣೆ ಸಮಸ್ಯೆ ಬಹುತೇಕ ಬಗೆಹರಿಯಲಿದೆ' ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಶ್ರೀರಾಂ ಮಿಶ್ರಾ ತಿಳಿಸಿದರು.

ವಿವಿಧ ಕಾರಣಗಳಿಂದ ನಂತೂರು ಮೇಲ್ಸೇತುವೆ ನಿರ್ಮಾಣವನ್ನು ಎನ್‌ಚ್‌ಎಐ ಈ ಹಿಂದೆ ಕೈಬಿಟ್ಟಿತ್ತು.

`ನಂತೂರಿನಿಂದ ತಲಪಾಡಿವರೆಗಿನ ಹೆದ್ದಾರಿಯನ್ನು 60 ಮೀಟರ್ ಅಗಲ ಹಾಗೂ ನಂತೂರಿನಿಂದ ಸುರತ್ಕಲ್ ಕಡೆಗಿನ ಹೆದ್ದಾರಿಯನ್ನು 45 ಮೀ. ಅಗಲ ಗೊಳಿಸಲಾಗುವುದು. ಇಲ್ಲಿ ಕೂಡುವ ನಾಲ್ಕೂ ರಸ್ತೆಗಳಲ್ಲಿ ಮುಕ್ತ ಎಡ ತಿರುವಿಗೆ ಅವಕಾಶ ಕಲ್ಪಿಸುತ್ತೇವೆ. ಬಿಕರ್ನಕಟ್ಟೆ ಕಡೆಯಿಂದ ಬರುವ ವಾಹ ನಗಳು ಕೆಪಿಟಿ ಕಡೆಗೆ ಸಾಗಲು ಸಬ್‌ವೇ ನಿರ್ಮಿಸುವ ಪ್ರಸ್ತಾವವೂ ಇದೆ' ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು. 

ಪಡುಬಿದ್ರಿ: ರಾಜ್ಯ ಸರ್ಕಾರ ಸೂಚಿಸಿದಂತೆ ಕ್ರಮ `ಪಡುಬಿದ್ರಿಯಲ್ಲಿ ಬೈಪಾಸ್ ನಿರ್ಮಿಸಬೇಕೋ, ಮೇಲ್ಸೇ ತುವೆ ನಿರ್ಮಿಸಬೇಕೋ ಎಂಬ ಗೊಂದಲ ಇನ್ನೂ ಬಗೆಹರಿದಿಲ್ಲ. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ಸರ್ಕಾರ ನೀಡುವ ಸೂಚನೆಯಂತೆ ಕ್ರಮ ಕೈಗೊಳ್ಳುತ್ತೇವೆ' ಎಂದು ಶ್ರೀರಾಂ ಮಿಶ್ರಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.