ಮಂಗಳೂರು: `ಆಮ್ ಆದ್ಮಿ ಪಕ್ಷದಿಂದ ಚುನಾವಣಾ ಕಣಕ್ಕೆ ಇಳಿಯುವ ಅಭ್ಯರ್ಥಿಗೆ ಚಾರಿತ್ರ್ಯವೇ ಬಂಡವಾಳ. ಚಾರಿತ್ರ್ಯವಂತ ಅಭ್ಯರ್ಥಿಗಳ ಆಯ್ಕೆಗೆ ಪಕ್ಷವು ನಿರ್ದಿಷ್ಟ ಕಾರ್ಯಸೂಚಿ ಹೊಂದಿದೆ' ಎಂದು ಪಕ್ಷದ ರಾಜ್ಯ ಘಟಕದ ಖಜಾಂಚಿ ಚಂದ್ರಕಾಂತ್ ಹೇಳಿದರು.
ಇಲ್ಲಿನ ಸಹೋದಯ ಸಭಾಂಗಣದಲ್ಲಿ ಭಾನುವಾರ ನಡೆದ ಪಕ್ಷದ ಜಿಲ್ಲಾ ಘಟಕದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
`ಪಕ್ಷದಿಂದ ಕಣಕ್ಕಿಳಿಯುವವರು ನಿಸ್ವಾರ್ಥ ಕಾರ್ಯಕರ್ತರಾಗಿರಬೇಕು. ಅವರು ಕ್ಷೇತ್ರದ 500 ಮತದಾರರ ಸಹಿಯನ್ನು ಪಡೆಯಬೇಕು.
ಹೀಗೆ ಆಯ್ಕೆಯಾದವರಲ್ಲಿ ಐವರ ಪಟ್ಟಿಯನ್ನು ತಯಾರಿಸುತ್ತೇವೆ. ಅವರಲ್ಲೊಬ್ಬರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ. ಅಭ್ಯರ್ಥಿ ಹಣ ಬಲ, ಹಾಗೂ ತೋಳು ಬಲದಿಂದ ಅಭ್ಯರ್ಥಿಯ ಆಯ್ಕೆ ನಡೆಯುವುದಿಲ್ಲವಾದ್ದರಿಂದ ಚುನಾವಣಾ ವೆಚ್ಚಕ್ಕೆ ಕಾರ್ಯಕರ್ತರೇ ದೇಣಿಗೆ ನೀಡಬೇಕಾಗುತ್ತದೆ' ಎಂದರು.
`ದೆಹಲಿಯ ವಿಧಾನಸಭೆಗೆ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದ್ದು, ಎಲ್ಲಾ 70 ಕ್ಷೇತ್ರಗಳಲ್ಲೂ ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. 29 ಅಭ್ಯರ್ಥಿಗಳ ಆಯ್ಕೆ ನಡೆಸಲಾಗಿದೆ. 9 ಕಡೆ ಅಂತಿಮ ಐವರ ಪಟ್ಟಿ ಸಿದ್ಧವಾಗಿದೆ. ದೆಹಲಿಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೋ ಇಲ್ಲವೋ ಗೊತ್ತಿಲ್ಲ. ಅಧಿಕಾರ ಕಿತ್ತುಕೊಳ್ಳುವುದು ನಮ್ಮ ಉದ್ದೇಶವೂ ಅಲ್ಲ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಚುನಾವಣಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವುದು ನಮ್ಮ ಉದ್ದೇಶ' ಎಂದರು.
`ದೆಹಲಿ ಚುನಾವಣಾ ವೆಚ್ಚಕ್ಕೆ 14 ಕೋಟಿ ರೂಪಾಯಿ ಅಗತ್ಯವಿದೆ. ಈಗಾಗಲೇ 3.4 ಕೋಟಿ ದೇಣಿಗೆ ಸಂಗ್ರಹವಾಗಿದೆ. ದೇಣಿಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಇಲ್ಲಿಂದ 9 ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ' ಎಂದರು.
`ದೆಹಲಿಯಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಪೂರೈಕೆ ವ್ಯವಸ್ಥೆಯ ಖಾಸಗೀಕರಣ ವಿರೋಧಿಸಿ ಪಕ್ಷವು ನಡೆಸಿದ ಅಸಹಕಾರ ಆಂದೋಲನದಲ್ಲಿ ಪಕ್ಷದ 1.2 ಲಕ್ಷ ಕಾರ್ಯಕರ್ತರು 19 ಲಕ್ಷ ಕುಟುಂಬಗಳನ್ನು ಭೇಟಿ ಮಾಡಿ, ಖಾಸಗೀಕರಣದ ಹಿಂದಿನ ಹುನ್ನಾರ ವಿವರಿಸಿದರು. ಈ ಪೈಕಿ 10.36 ಲಕ್ಷ ಕುಟುಂಬಗಳು ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದವು. ಈ ಆಂದೋಲನದಲ್ಲಿ ದೇಶದ ಹಾಗೂ ವಿದೇಶಿ ವಿದ್ಯಾರ್ಥಿಗಳು 3 ತಿಂಗಳು ರಜೆ ಹಾಕಿ ಸ್ವಯಂಸೇವಕರಾಗಿ ಪಾಲ್ಗೊಂಡರು' ಎಂದರು.
ಅತ್ಯಾಚಾರ ತಡೆಗೆ ಸಮಿತಿ: `ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಲು ಪಕ್ಷವು ಪ್ರತಿ ವಾರ್ಡ್‌ನಲ್ಲಿ ಮಹಿಳಾ ರಕ್ಷಣಾ ಬಳಗಗಳನ್ನು ಹೊಂದಲಿದೆ. ದೆಹಲಿಯಲ್ಲಿ ಈ ಯೋಜನೆಕಾರ್ಯರೂಪಕ್ಕೆ ತರಲಾಗಿದೆ' ಎಂದರು.
`ಪಕ್ಷದ ಕರ್ನಾಟಕ ಘಟಕಕ್ಕೆ ಅರವಿಂದ ಕೇಜ್ರೀವಾಲ್ ಅವರು ಇದೇ 27ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ' ಎಂದು ಗಿರಿಧರ್ ತಿಳಿಸಿದರು.
ಪಕ್ಷದ ಪ್ರಮುಖರಾದ ಶಮ್ಮಿ ಶಿರಿ, ನಂದಗೋಪಾಲ್, ರೋಹನ್ ಶಿರಿ, ಸಂತೋಷ್ ಎನ್. ಮತ್ತಿತರರಿದ್ದರು.
ಪಕ್ಷದ ಪದಾಧಿಕಾರಿ ಆಯ್ಕೆ ಸಭೆಗೆ ಪತ್ರಕರ್ತರಿಗೆ ಅವಕಾಶ ಕಲ್ಪಿಸದ ಬಗ್ಗೆ ಅಸಮಾಧಾನ ವ್ಯಕ್ತವಾಯಿತು.
ಎತ್ತಿನಹೊಳೆ, ನಿಡ್ಡೋಡಿ ಯೋಜನೆ ಹೋರಾಟಕ್ಕೆ ಬೆಂಬಲ
ಎತ್ತಿನಹೊಳೆಯ ನೀರನ್ನು ಬಯಲುಸೀಮೆಗೆ ಕೊಂಡೊಯ್ಯುವ ಹಾಗೂ ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಿಸುವ ಯೋಜನೆಗಳ ವಿರುದ್ಧದ ಹೋರಾಟದಲ್ಲಿ ಆಮ್ ಆದ್ಮಿ ಪಕ್ಷವೂ ಕೈಜೋಡಿಸಲಿದೆ ಎಂದು ಪಕ್ಷದ ಜಿಲ್ಲಾ ಹಂಗಾಮಿ ಸಮಿತಿ ಸಂಚಾಲಕ ರಾಬರ್ಟ್ ರೊಜಾರಿಯೊ ತಿಳಿಸಿದರು.
`ಯಾವುದೇ ಹೋರಾಟಕ್ಕೂ ಮುನ್ನ ನಾವು ಅದರ ಸಾಧಕ ಬಾಧಕಗಳ ಬಗ್ಗೆ ತಜ್ಞರಲ್ಲಿ ಸಮಾಲೋಚನೆ ನಡೆಸುತ್ತೇವೆ' ಎಂದು ಚಂದ್ರಕಾಂತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.