ADVERTISEMENT

ಚುನಾವಣಾ ಅಖಾಡ: ನಾಮಪತ್ರ ಸಲ್ಲಿಕೆ ಪೂರ್ಣ

ಕೊನೆಯ ದಿನ 71 ಮಂದಿ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 11:28 IST
Last Updated 18 ಏಪ್ರಿಲ್ 2013, 11:28 IST

ಮಂಗಳೂರು: ವಿಧಾನಸಭಾ ಚುನಾವಣೆಗಾಗಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಬುಧವಾರ ಮಧ್ಯಾಹ್ನ 3 ಗಂಟೆಗೆ ಮುಗಿದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 58 ಮಂದಿ ಅಭ್ಯರ್ಥಿಗಳು 71 ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ ಒಟ್ಟು 98 ಮಂದಿ 139 ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ.

ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಯು.ಟಿ.ಖಾದರ್, ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್‌ನ ಮೊಯಿದಿನ್ ಬಾವ, ಬಂಟ್ವಾಳದಲ್ಲಿ ಕಾಂಗ್ರೆಸ್‌ನ ಬಿ.ರಮಾನಾಥ ರೈ, ಪುತ್ತೂರಿನಲ್ಲಿ ಕಾಂಗ್ರೆಸ್‌ನ ಶಕುಂತಲಾ ಶೆಟ್ಟಿ, ಮೂಡುಬಿದಿರೆಯಲ್ಲಿ ಬಿಜೆಪಿಯ ಉಮಾನಾಥ ಕೋಟ್ಯಾನ್, ಬೆಳ್ತಂಗಡಿಯಲ್ಲಿ ಬಿಜೆಪಿಯ ರಂಜನ್ ಗೌಡ ಬುಧವಾರ ನಾಮಪತ್ರ ಸಲ್ಲಿಸಿದವರಲ್ಲಿ ಪ್ರಮುಖರು.

ಕೊನೆಯ ದಿನ ಸಲ್ಲಿಕೆಯಾದ ನಾಮಪತ್ರದಲ್ಲಿ ಬಿಜೆಪಿಯ 13, ಕಾಂಗ್ರೆಸ್‌ನ 8, ಸಿಪಿಎಂನ, ಆರ್‌ಪಿಐ, ಐಯುಎಂಎಲ್, ಎನ್‌ಸಿಪಿಯ ತಲಾ 1, ಜೆಡಿಎಸ್‌ನ 5, ಜೆಡಿಯು, ಎಸ್‌ಡಿಪಿಐನ ತಲಾ 3, ಕೆಜೆಪಿಯ 6 ಹಾಗೂ ಪಕ್ಷೇತರರ 29 ನಾಮಪತ್ರಗಳು ಸೇರಿವೆ. ಬೆಳ್ತಂಗಡಿ, ಮೂಡುಬಿದಿರೆಯಲ್ಲಿ ತಲಾ 5, ಮಂಗಳೂರು ನಗರ ಉತ್ತರದಲ್ಲಿ 8, ಮಂಗಳೂರು ನಗರ ದಕ್ಷಿಣದಲ್ಲಿ 13, ಮಂಗಳೂರಿನಲ್ಲಿ 23, ಬಂಟ್ವಾಳದಲ್ಲಿ 6, ಪುತ್ತೂರಿನಲ್ಲಿ 9 ಹಾಗೂ ಸುಳ್ಯದಲ್ಲಿ 2 ನಾಮಪತ್ರಗಳು ಸಲ್ಲಿಕೆಯಾಗಿವೆ. ಯು.ಟಿ.ಖಾದರ್ ಅವರು ನಾಲ್ಕು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು.

ಗುರುವಾರ ಮತ್ತು ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರಗಳನ್ನು ಹಿಂಪಡೆಯಲು ಶನಿವಾರ ಕೊನೆಯ ದಿನ. ಹೀಗಾಗಿ ಕಣದಲ್ಲಿ ಉಳಿಯುವ ಅಂತಿಮ ಅಭ್ಯರ್ಥಿಗಳ ಪಟ್ಟಿ ಶನಿವಾರ ಸಂಜೆಯ ವೇಳೆಗೆ ಲಭ್ಯವಾಗಲಿದೆ.

ಬಂಡಾಯ: ಬಂಡಾಯದ ಬಿಸಿ ಮುಖ್ಯವಾಗಿ ಕಾಂಗ್ರೆಸ್ ವಲಯದಲ್ಲಿ ಕಂಡುಬಂತು. ಮಂಗಳೂರು ಉತ್ತರದಲ್ಲಂತೂ ಅದರ ಬಿಸಿ ತೀವ್ರವಾಗಿತ್ತು. ಹೀಗಾಗಿ ಮೊಯಿದಿನ್ ಬಾವ ಅವರು ಕಾರ್ಯಕರ್ತರ ಸಭೆ ನಡೆಸಿ ನಾಮಪತ್ರ ಸಲ್ಲಿಸಲು ಮುಡಾ ಕಚೇರಿಗೆ ಬಂದಾಗ ಮಧ್ಯಾಹ್ನ 1.30 ಕಳೆದಿತ್ತು. ಆದರೂ ಪಕ್ಷದಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ, ಇನ್ನು ಮುಂದೆ ಎಲ್ಲರೂ ಒಗ್ಗೂಡಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ ಎಂಬ ವಿಶ್ವಾಸದ ಮಾತುಗಳನ್ನು ನಾಮಪತ್ರ ಸಲ್ಲಿಕೆಯ ಕೊನೆಯಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಹೇಳಿದರು.

ಬಹುತೇಕ ಎಲ್ಲಾ ಪಕ್ಷಗಳೂ ಪ್ರಚಾರ ಕಾರ್ಯ ಆರಂಭಿಸಿದ್ದರೂ, ಪ್ರಚಾರದ ಬಿಸಿ ಮಾತ್ರ ಏರಿಕೆಯಾಗಿಲ್ಲ.

ನಾಮಪತ್ರ ಸಲ್ಲಿಕೆ ವಿವರ
ಬೆಳ್ತಂಗಡಿಯಲ್ಲಿ 12 (9 ಮಂದಿ), ಮೂಡುಬಿದಿರೆ 12 (9 ಮಂದಿ), ಮಂಗಳೂರು ನಗರ ಉತ್ತರ 13 (12 ಮಂದಿ), ಮಂಗಳೂರು ನಗರ ದಕ್ಷಿಣ 24 (18 ಮಂದಿ), ಮಂಗಳೂರು 40 (20 ಮಂದಿ), ಬಂಟ್ವಾಳ 12 (11 ಮಂದಿ), ಪುತ್ತೂರು 12 (9 ಮಂದಿ), ಸುಳ್ಯ 14 (10 ಮಂದಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.