ADVERTISEMENT

ಜನವರಿಯಲ್ಲಿ ಮಂಗಳೂರಿನಲ್ಲಿ ಅಹಿಂದ ಸಮಾವೇಶ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 8:58 IST
Last Updated 23 ಅಕ್ಟೋಬರ್ 2017, 8:58 IST

ಮಂಗಳೂರು: ದೇಶದಲ್ಲಿ ಆರ್ಥಿಕ ವ್ಯವಸ್ಥೆ ಕುಂಠಿತವಾಗಿದೆ. ಇದಕ್ಕೆ ಕಾರಣವಾದ ಕೇಂದ್ರ ಸರ್ಕಾರ ಬದಲಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಅಹಿಂದ ಜನ ಚಳುವಳಿ ಅಧ್ಯಕ್ಷ ವಾಸುದೇವ್‌ ಬೋಳೂರು ಹೇಳಿದ್ದಾರೆ.

ನಗರದ ವುಡ್‌ಲ್ಯಾಂಡ್ಸ್‌ನಲ್ಲಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಪ್ರಸಕ್ತ ಸನ್ನಿವೇಶವನ್ನು ಅವಲೋಕಿಸುವಾಗ ನಮ್ಮ ದೇಶದ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆ ಅಧೋಗತಿಗಿಳಿಯುತ್ತದೆ. ಕೇಂದ್ರ ಸರ್ಕಾರ ಕೈಗೊಂಡ ನೋಟು ಅಮಾನ್ಯೀಕರಣ ಹಾಗೂ ಜಿ.ಎಸ್‌ಟಿ ವ್ಯವಸ್ಥೆಯಿಂದ ದೇಶದ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದ್ದು, ವ್ಯಾಪಾರಿಗಳು, ಕೃಷಿಕರು, ಬಡವರು ಮತ್ತು ಮಧ್ಯಮ ವರ್ಗದ ಜೀವನಕ್ಕೆ ಕುತ್ತು ಬಂದಿದೆ.

ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಸಂಪೂರ್ಣ ವೈಫಲ್ಯ ಹೊಂದಿದ್ದಾರೆ. ಅವರನ್ನು ಕೇಂದ್ರ ಸರ್ಕಾರ ಬದಲಾಯಿಸಿ ಆರ್ಥಿಕತೆ ಬಗ್ಗೆ ನೈಪುಣ್ಯತೆ ಹೊಂದಿರುವ ವಿತ್ತ ಸಚಿವರನ್ನು ನೇಮಿಸಬೇಕು. ಇಂತಹ ತುರ್ತು ಪರಿಸ್ಥಿತಿಗೆ ಕಾರಣವಾದ ಕೇಂದ್ರ ಸರ್ಕಾರ ರಾಜೀನಾಮೆ ನೀಡಿ ದೇಶದ ಒಳಿತಿಗಾಗಿ ರಾಷ್ಟ್ರೀಯ ಸರಕಾರವನ್ನು ಅಸ್ತಿತ್ವಕ್ಕೆ ತರಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಅಹಿಂದ ಚಳುವಳಿಯ ಬಗ್ಗೆ ಜನಜಾಗೃತಿ ಮೂಡಿಸಲು 2018ರ ಜನವರಿಯಲ್ಲಿ ಮಂಗಳೂರಿನಲ್ಲಿ ಅಹಿಂದ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಪದ್ಮನಾಭ ನರಿಂಗಾನ, ಬಿ.ಎ ಮಹಮ್ಮದ್‌ ಹನೀಫ್‌, ಯೂಸುಫ್‌ ವಕ್ತಾರ್‌, ಗುರುವಪ್ಪ ಪೂಜಾರಿ ಇರಾ, ಶರತ್‌ ಕುಮಾರ್‌ ಬಂಟ್ವಾಳ, ಕೆ.ಎಚ್. ಮಹಮ್ಮದ್‌, ಯಾಕೂಬ್‌ ಇರಾ, ಇಬ್ರಾಹಿಂ, ರಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.