ADVERTISEMENT

ಜೀವ ಉಳಿಸುವ ಪ್ರಥಮ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 10:40 IST
Last Updated 11 ಫೆಬ್ರುವರಿ 2011, 10:40 IST

ಮಂಗಳೂರು: ‘ನಿಮಗೆ ಪ್ರಥಮ ಚಿಕಿತ್ಸೆ ಗೊತ್ತಿದ್ದರೆ ರೋಗಿಯ ಜೀವ ಅರ್ಧ ಉಳಿದಂತೆಯೇ, ಪ್ರತಿಯೊಬ್ಬರೂ ಪ್ರತಿ ಶಾಲೆಯೂ ಈ ಸಂಬಂಧ ಜಾಗೃತಿ ಮೂಡಿಸಬೇಕಾಗಿದೆ’...ಹೀಗೆ ಪ್ರಥಮ ಚಿಕಿತ್ಸೆಯ ಅಗತ್ಯವನ್ನು ಒತ್ತಿಹೇಳಿದವರು ಹೆಸರಾಂತ ಬಾಲಿವುಡ್ ನಟ ಜಾಕಿ ಶ್ರಾಫ್. ನಗರದ ಬೋಳೂರಿನಲ್ಲಿ ನೂತನ ಸರೋಜ್ ಆಸ್ಪತ್ರೆಯನ್ನು ಗುರುವಾರ ಉದ್ಘಾಟಿಸಿದ ಜಾಕಿ ಮಾತನಾಡಿದ್ದು ಕೆಲ ಕ್ಷಣ ಮಾತ್ರ.

1980ರ ದಶಕದಲ್ಲಿ ‘ಹೀರೊ’ ಚಿತ್ರದ ಮೂಲಕ ಹೀರೋ ಆಗಿಯೇ ಬಾಲಿವುಡ್ ಪ್ರವೇಶಿಸಿದ ಜಾಕಿ ‘ನನಗೆ ಕೆಲಸ ಮಾಡುವುದಷ್ಟೇ ಗೊತ್ತು, ಮಾತು-ಭಾಷಣ ತಿಳಿದಿಲ್ಲ’ ಎನ್ನುತ್ತಲೇ ಮಾತಿಗಿಳಿದರು.

‘ವೈದ್ಯ ವಿಜ್ಞಾನದಲ್ಲಿ ಆಯುರ್ವೇದ ಶ್ರೇಷ್ಠ. ಆದರೆ ಯಾವ ವಿಜ್ಞಾನ ಗೊತ್ತಿದ್ದರೂ ಪ್ರಥಮ ಚಿಕಿತ್ಸೆ ಮಾತ್ರ ಎಲ್ಲರಿಗೂ ಗೊತ್ತಿರಬೇಕು. ಟ್ರಾಫಿಕ್ ಕಿರಿಕಿರಿ ಮಿತಿಮೀರಿರುವ ಮುಂಬೈಯಂತಹ ಮಹಾನಗರಗಳಲ್ಲಿ ಆ್ಯಂಬ್ಯುಲೆನ್ಸ್‌ನಲ್ಲಿ ರೋಗಿ ಆಸ್ಪತ್ರೆ ತಲುಪುವಷ್ಟರಲ್ಲಿ ಸಾವಿನ ಅಂಚಿಗೆ ಬಂದಿರುತ್ತಾನೆ. ಆದರೆ ಪ್ರಥಮ ಚಿಕಿತ್ಸೆ ಮೂಲಕ ಅನೇಕ ಸಂದರ್ಭಗಳಲ್ಲಿ ರೋಗಿಯ ಜೀವ ಉಳಿಸಬಹುದು, ಈ ಬಗ್ಗೆ ಹೆಚ್ಚು ಪ್ರಚಾರ ಕೈಗೊಳ್ಳುವುದು ಅಗತ್ಯವಿದೆ’ ಎಂಬ ಕಳಕಳಿ ವ್ಯಕ್ತಪಡಿಸಿದರು.

ಆಸ್ಪತ್ರೆಗಳು ಸಹ ಪ್ರಥಮ ಚಿಕಿತ್ಸಾ ವ್ಯವಸ್ಥೆಯನ್ನು ಪ್ರೋತ್ಸಾಹಿಸಬೇಕು ಎಂಬುದು ತಮ್ಮ ನಿಲುವು. ಅತ್ಯಾಧುನಿಕ ಆರೋಗ್ಯ ಸೌಕರ್ಯ ಒದಗಿಸಲು ಅಪಾರ ಹಣ ಬೇಕು ನಿಜ. ಆದರೆ ಇದೇ ಹೊತ್ತಿಗೆ ಉತ್ತಮ ಸೇವೆಯೂ ಸಿಗಬೇಕು. ‘ಹಣ ಮಾಡಿ ಆದರೆ ಜನರ ಜೀವ ಉಳಿಸಿ’ ಎಂದು ಜಾಕಿ ಈ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಮನವಿ ಮಾಡಿಕೊಂಡರು.

ಮೇಯರ್ ರಜನಿ ದುಗ್ಗಣ್ಣ, ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಸತ್ಯಮೂರ್ತಿ, ಉಡುಪಿಯ ಖ್ಯಾತ ಆಯುರ್ವೇದ ವೈದ್ಯ ಡಾ. ಶ್ರೀನಿವಾಸ ಆಚಾರ್, ಎಂಆರ್‌ಪಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಲಕ್ಷ್ಮಿ ಕುಮರನ್, ಮುಂಬೈ ವೈದ್ಯ ಡಾ. ಪಿ.ಕೆ.ಜೈನ್, ಸರೋಜ್ ಆಸ್ಪತ್ರೆ ಅಧ್ಯಕ್ಷ ಡಾ. ಎನ್.ಜೆ.ಪ್ರಭು, ವೈದ್ಯಕೀಯ ನಿರ್ದೇಶಕ ಡಾ. ಗಜಾನನ ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.