ADVERTISEMENT

ಜೆಡಿಎಸ್ ಜಿಲ್ಲಾ ಅಧ್ಯಕ್ಷರ ವಿರುದ್ಧ ಭುಗಿಲೆದ್ದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 8:25 IST
Last Updated 9 ಅಕ್ಟೋಬರ್ 2012, 8:25 IST

ಮಂಗಳೂರು: ಜಿಲ್ಲೆಯ ಜಾತ್ಯತೀತ ಜನತಾ ದಳದಲ್ಲಿನ ಗುಂಪುಗಾರಿಕೆ ಸೋಮವಾರ ಬೀದಿಗೆ ಬಂದಿದ್ದು, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸದಾಶಿವ ಮತ್ತು ಕಾರ್ಯಾಧ್ಯಕ್ಷ ವಿಟ್ಲ ಮಹಮ್ಮದ್ ಕುಂಞಿ ಅವರ ವಿರುದ್ಧ ಧಿಕ್ಕಾರ ಕೂಗಿದ ಪ್ರಸಂಗ ಪಕ್ಷದ ಕಚೇರಿಯಲ್ಲೇ ನಡೆದಿದೆ.

ಪಕ್ಷದ ಕಾರ್ಮಿಕ ಘಟಕದ ಸಭೆ ಸೋಮವಾರ ಮಧ್ಯಾಹ್ನ ನಿಗದಿಯಾಗಿತ್ತು. ಸಭೆಗೆ ಎ.ಬಿ.ಸದಾಶಿವ ಸಹಿತ ಎಲ್ಲಾ ಗಣ್ಯರನ್ನೂ ಆಹ್ವಾನಿಸಲಾಗಿತ್ತು. ಇತ್ತೀಚೆಗೆ ಪಕ್ಷಕ್ಕೆ ಸೇರಿದ ಬಿ.ನಾಗರಾಜ ಶೆಟ್ಟಿ ಅವರಿಗೆ ಪಕ್ಷದ ಕಚೇರಿಯಲ್ಲಿ ಸನ್ಮಾನ ಮಾಡುವುದು ಕಾರ್ಮಿಕ ಘಟಕದವರ ಉದ್ದೇಶವಾಗಿತ್ತು.

ನಾಗರಾಜ ಶೆಟ್ಟಿ ಅವರು ನಗರದಲ್ಲಿ ಇಲ್ಲದ ಕಾರಣ ಅವರು ಸಭೆಗೆ ಬಂದಿರಲಿಲ್ಲ. ನಾಗರಾಜ ಶೆಟ್ಟಿ ಅವರನ್ನು ಬದಿಗೆ ಸರಿಸಲು ಅಧ್ಯಕ್ಷರು ಯತ್ನಿಸುತ್ತಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿ, ಅವರ ವಿರುದ್ಧ ಮತ್ತು ಸಭೆಯಲ್ಲೇ ಇದ್ದ ಮಹಮ್ಮದ್ ಕುಂಞಿ ವಿರುದ್ಧ ಘೋಷಣೆ ಕೂಗಿದರು. `ಜನತಾದಳವನ್ನು `ಸದಾ ಶವ~ ಮಾಡಿದ ಎಂಬಿ ರಾಜೀನಾಮೆ ಕೊಡಿ~, `ನೀವು ಲಯನ್ ಅಲ್ಲ ಪಾಯ್ಸನ್~, `ಪಕ್ಷ ಉಳಿಸಿ ಇಲ್ಲವೇ ಪಕ್ಷ ತ್ಯಜಿಸಿ~ ಎಂಬ ಫಲಕ ಹಿಡಿದ ಕಾರ್ಯಕರ್ತರು, ಅಧ್ಯಕ್ಷರು, ಕಾರ್ಯಾಧ್ಯಕ್ಷರ ವರ್ತನೆಯನ್ನು ಖಂಡಿಸಿದರು.

ಸಭೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಈ ಎಲ್ಲ ಬೆಳವಣಿಗೆಗಳು ನಡೆದು ಹೋದವು. ಪಕ್ಷದ ಕಾರ್ಮಿಕ ಘಟಕ ಅಧ್ಯಕ್ಷ ಮೊಹಮ್ಮದ್ ರಫಿ ಮಾತನಾಡಿ, ಜೆಡಿಎಸ್ ಕೇವಲ ಮೂವರ ಕೈಯಲ್ಲಿ ನಲುಗುತ್ತಿದೆ, ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ತಳೆದಿದ್ದಾರೆ ಎಂದರು.

ಶಶಿರಾಜ್ ಶೆಟ್ಟಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ಕ್ರಮವನ್ನು ಖಂಡಿಸಿದ ಅವರು, ಅಧ್ಯಕ್ಷರ ವಿರುದ್ಧ ನೇರ ಆರೋಪ ಮಾಡಿದ ತಮಗೂ ನಾಳೆ ಉಚ್ಚಾಟನೆಯ ಶಿಕ್ಷೆ ನೀಡಿದರೂ ಅಚ್ಚರಿ ಇಲ್ಲ ಎಂದರು.
ಗುರುಪುರ ಬ್ಲಾಕ್ ಅಧ್ಯಕ್ಷ ಸುದರ್ಶನ್ ಮಾತನಾಡಿ, ಪಕ್ಷದ ನಾಯಕರ ಕಾರ್ಯವೈಖರಿ ವಿರುದ್ಧ ಮಾತನಾಡಿದ ತಮಗೆ ನಾಲ್ಕು ತಿಂಗಳ ಹಿಂದೆಯೇ ಷೋಕಾಸ್ ನೋಟಿಸ್ ನೀಡಲಾಗಿದೆ ಎಂದರು.

ಇಷ್ಟೆಲ್ಲ ಆಕ್ರೋಶದ ನಡುವೆಯೇ ಸಭೆ ನಡೆಯಿತು ಹಾಗೂ ಪಕ್ಷಕ್ಕೆ ಕೆಲವು ಕಾರ್ಯಕರ್ತರನ್ನು ಸೇರ್ಪಡೆಗೊಳಿಸಲಾಯಿತು. ಪಕ್ಷದ ನಾಯಕರಾದ ಸುಶೀಲ್ ನರೋನ್ಹಾ, ಎಂ.ಜಿ.ಹೆಗಡೆ, ಅಬ್ದುಲ್ ಅಜೀಜ್ ಮಲಾರ್, ಡಿ.ಎಂ.ಅಸ್ಲಂ, ಸೌಂದರ್ಯ ರಮೇಶ್, ಸುರೇಶ್ಚಂದ್ರ ಶೆಟ್ಟಿ, ವಿಠಲ ಭಂಡಾರಿ ಹರೇಕಳ, ಪಿ.ಎ.ರಹೀಂ, ಇಸ್ಮಾಯಿಲ್ ದೊಡ್ಡಮನೆ, ಅಬ್ದುಲ್ ಮಜೀದ್ ಸೂರಲ್ಪಾಡಿ ಮತ್ತಿತರರು ಇದ್ದರು.

`ಒಡಕು ಸೃಷ್ಟಿಸುವ ಪ್ರಯತ್ನ~
`ನಾಗರಾಜ ಶೆಟ್ಟಿ ಮತ್ತು ನನಗೆ ಉತ್ತಮ ಸಂಬಂಧ ಇಲ್ಲ ಎಂದು ಬಿಂಬಿಸಲು ಕೆಲವರು ಇಂತಹ ಯತ್ನ ನಡೆಸಿದಂತಿದೆ. ವಾಸ್ತವವಾಗಿ ನಾನು ಮತ್ತು ನಾಗರಾಜ ಶೆಟ್ಟಿ ಅವರು ನಿರಂತರ ಪರಸ್ಪರ ಸಂಪರ್ಕದಲ್ಲಿದ್ದೇವೆ. ಅವರ ಆಗಮನದಿಂದ ಪಕ್ಷಕ್ಕೆ ಶಕ್ತಿ ಬಂದಿದೆ ಎಂದು ನಾನು ಈಗಲೂ ಹೇಳುತ್ತಿದ್ದೇನೆ.

ಶಶಿರಾಜ ಶೆಟ್ಟಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದಕ್ಕೆ ಪ್ರತೀಕಾರವಾಗಿ ಪಕ್ಷದ ಕಚೇರಿಯಲ್ಲಿ ಇಂತಹ ಪ್ರಸಂಗ ನಡೆದಂತಿದೆ. ವಾಸ್ತವ ವರದಿ ತರಿಸಿಕೊಂಡು ಇದೆಲ್ಲವನ್ನೂ ಪಕ್ಷದ ವರಿಷ್ಠರ ಗಮನಕ್ಕೆ ತರಲಿದ್ದೇನೆ~ ಎಂದು ತಮ್ಮ ಪುತ್ರನ ಆರೈಕೆಯ ಸಲುವಾಗಿ ಬೆಂಗಳೂರಿನಲ್ಲಿದ್ದ ಎಂ.ಬಿ.ಸದಾಶಿವ ಅವರು `ಪ್ರಜಾವಾಣಿ~ಗೆ ದೂರವಾಣಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.