ADVERTISEMENT

ತರಗತಿಯತ್ತ ವಿದ್ಯಾರ್ಥಿಗಳ ಹೆಜ್ಜೆ

ಮುಗಿದ ಬೇಸಿಗೆ ರಜೆ: ಜಿಲ್ಲೆಯಾದ್ಯಂತ ಶಾಲೆಗಳ ಪ್ರಾರಂಭೋತ್ಸವ

​ಪ್ರಜಾವಾಣಿ ವಾರ್ತೆ
Published 29 ಮೇ 2018, 9:07 IST
Last Updated 29 ಮೇ 2018, 9:07 IST
ಮಂಗಳೂರಿನಲ್ಲಿ ಸೋಮವಾರ ಶಿಕ್ಷಕಿಯರ ಜತೆಗೆ ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿನಿಯರು.
ಮಂಗಳೂರಿನಲ್ಲಿ ಸೋಮವಾರ ಶಿಕ್ಷಕಿಯರ ಜತೆಗೆ ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿನಿಯರು.   

ಮಂಗಳೂರು: ಜಿಲ್ಲೆಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭಗೊಂಡಿದ್ದು, ಎರಡು ತಿಂಗಳ ರಜೆಯ ನಂತರ ಮಕ್ಕಳು ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದರು. ಮೊದಲ ದಿನವಾದ್ದರಿಂದ ಕೆಲ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಗೆ ಇರಲಿಲ್ಲ. ಮಂಗಳವಾರದಿಂದ ಶಾಲೆಯಲ್ಲಿ ನಿಗದಿತ ತರಗತಿಗಳು ಶುರುವಾಗಲಿದ್ದು, ಹಾಜರಾತಿಯೂ ಹೆಚ್ಚಾಗುವ ನಿರೀಕ್ಷೆ ಇದೆ.

ಖಾಸಗಿ ಶಾಲೆಗಳು ಸೋಮವಾರ ಪ್ರಾರಂಭೋತ್ಸವ ನಡೆಸಿದ್ದು, ಸರ್ಕಾರಿ ಶಾಲೆಗಳಲ್ಲಿ ಮಂಗಳವಾರ ಪ್ರಾರಂಭೋತ್ಸವ ನಡೆಯಲಿದೆ. ಶಾಲಾ ಪ್ರಾರಂಭೋತ್ಸವವನ್ನು ಮಕ್ಕಳ ಸ್ನೇಹಿಯಾಗಿ ಮಾಡಬೇಕು. ಮತ್ತೆ ಮಕ್ಕಳನ್ನು ಶಾಲೆಗೆ ಸ್ವಾಗತಿಸುವ ಪ್ರಕ್ರಿಯೆ ನಡೆಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳ, ಪಾಲಕರು ಸೇರಿದಂತೆ ಮಕ್ಕಳನ್ನು ಗಣ್ಯರಂತೆ ಸ್ವಾಗತಿಸಬೇಕು. ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.

ADVERTISEMENT

ಮಂಗಳವಾರ ಶಾಲಾ ಪ್ರಾರಂಭೋತ್ಸವದ ದಿನದಿಂದಲೇ ಪಾಠ ಪ್ರವಚನಗಳನ್ನು ಆರಂಭಿಸುವ ಮೂಲಕ ಪ್ರಾರಂಭೋತ್ಸವವನ್ನು ಅರ್ಥಪೂರ್ಣಗೊಳಿಸಬೇಕು. ಮೊದಲ ದಿನ 2 ಅವಧಿಗಳಲ್ಲಿ ಮಕ್ಕಳನ್ನು ಸ್ವಾಗತಿಸುವ ಕಾರ್ಯಕ್ರಮ ಹಮ್ಮಿಕೊಂಡು, ಮೂರನೇ ಅವಧಿಯಿಂದಲೇ ಪಾಠಗಳನ್ನು ಆರಂಭಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಪಠ್ಯಪುಸ್ತಕ ಪೂರೈಕೆ: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಪಠ್ಯಪುಸ್ತಕಗಳು ಉಚಿತವಾಗಿ ದೊರೆಯುತ್ತವೆ. ಆದರೆ ಖಾಸಗಿ ಶಾಲೆಗಳಲ್ಲಿ ಮಕ್ಕಳೇ ಖರೀದಿಸಬೇಕಾಗುತ್ತದೆ. ಸರ್ಕಾರದಿಂದ ಈಗಾಗಲೇ ಶೇ 75ರಷ್ಟು ಪಠ್ಯಪುಸ್ತಕ
ಗಳು ಸರಬರಾಜು ಆಗಿದ್ದು, ಶಾಲಾ ಆರಂಭೋತ್ಸವದಂದೇ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲು ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದು ಡಿಡಿಪಿಐ ವೈ. ಶಿವರಾಮಯ್ಯ ತಿಳಿಸಿದ್ದಾರೆ.

ಕಳೆದ ವರ್ಷವೂ ಶಾಲೆ ಆರಂಭವಾಗುವ ಹೊತ್ತಿಗೆ ಶೇ 75 ರಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿದ್ದು, ಉಳಿದ ಪುಸ್ತಕಗಳು ಜೂನ್‌ ತಿಂಗಳಿನಲ್ಲಿ ಸರಬರಾಜು ಆಗಿದ್ದವು. ಇನ್ನು ನೋಟ್‌ಬುಕ್‌, ಡ್ರಾಯಿಂಗ್‌ ಬುಕ್‌, ಕ್ರಾಫ್ಟ್‌ ಪೇಪರ್‌ ಹೀಗೆ ಹತ್ತು ಹಲವು ಸಾಮಗ್ರಿಗಳನ್ನು ಕೆಲ ಖಾಸಗಿ ಶಾಲೆಗಳೇ ವಿದ್ಯಾರ್ಥಿಗಳಿಗೆ ಪೂರೈಸುತ್ತಿವೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಬರೆಯುವ ಪುಸ್ತಕಗಳನ್ನು ಮಕ್ಕಳು ಹೊಂದಿಸಿಕೊಳ್ಳಬೇಕಾಗುತ್ತದೆ.

ಒಂದೆಡೆ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕಿದರೆ, ಇನ್ನೊಂದೆಡೆ ಪಾಲಕರು ಸ್ಕೂಲ್ ಬ್ಯಾಗ್‌, ನೋಟ್‌ಬುಕ್‌ ಸೇರಿದಂತೆ ಅಗತ್ಯ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಸೋಮವಾರ ಅಂಗಡಿಗಳಲ್ಲಿ ಮಕ್ಕಳು ಹಾಗೂ ಪಾಲಕರ ಸಂಖ್ಯೆ ಹೆಚ್ಚಾಗಿಯೇ ಇತ್ತು.

ಇನ್ನೂ ಬಂದಿಲ್ಲ ಸಮವಸ್ತ್ರ: ಶಾಲಾ ಪ್ರಾರಂಭೋತ್ಸವದಂದೇ ಹೊಸ ಸಮವಸ್ತ್ರಗಳನ್ನು ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಈ ಬಾರಿ ಸ್ವಲ್ಪ ನಿರಾಸೆ ಆಗಲಿದೆ. ಸರ್ಕಾರಿ ಶಾಲೆಗಳ ಮಕ್ಕಳಿಗೆ ಸರ್ಕಾರದಿಂದಲೇ ಸಮವಸ್ತ್ರಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಈ ಬಾರಿ ಸರ್ಕಾರಿ ಶಾಲೆಗಳ ಸಮವಸ್ತ್ರಗಳು ಇನ್ನೂ ಪೂರೈಕೆ ಆಗಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಶಿಕ್ಷಣ ಇಲಾಖೆಯಿಂದ ಈಗಾಗಲೇ 20 ಜಿಲ್ಲೆಗಳಿಗೆ ಸಮವಸ್ತ್ರ ಪೂರೈಸಲಾಗಿದ್ದು, ಮೈಸೂರು ಹಾಗೂ ಬೆಂಗಳೂರು ವಿಭಾಗಕ್ಕೆ ಜೂನ್‌ 1 ರ ವೇಳೆಗೆ ಸರಬರಾಜು ಆಗುವ ನಿರೀಕ್ಷೆ ಇದೆ. ಶಿಕ್ಷಣ ಇಲಾಖೆ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ರವಾನಿಸುತ್ತಿದ್ದು, ಅಲ್ಲಿಂದ ಶಾಲೆಗಳಿಗೆ ಸಮವಸ್ತ್ರಗಳನ್ನು ಪೂರೈಸಲಾಗುತ್ತಿದೆ.

ಇನ್ನು ಖಾಸಗಿ ಶಾಲೆಗಳು ನಿರ್ದಿಷ್ಟ ಸಮವಸ್ತ್ರಗಳನ್ನು ನಿಗದಿಪಡಿಸಿದ್ದು, ಆಯಾ ಅಂಗಡಿಗಳಲ್ಲಿಯೇ ಸಮವಸ್ತ್ರಗಳು ಲಭ್ಯವಾಗಿವೆ. ಹೀಗಾಗಿ ಕೆಲ ಅಂಗಡಿಗಳಲ್ಲಿ ಕಳೆದ 2–3 ದಿನಗಳಿಂದ ಪಾಲಕರು, ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಶಾಲಾ ಸಮವಸ್ತ್ರದ ಜತೆಗೆ, ಬೆಲ್ಟ್‌, ಟೈ, ಬೂಟು, ಸಾಕ್ಸ್‌ಗಳು, ರೇನ್‌ ಕೋಟ್‌ ಸೇರಿದಂತೆ ಹತ್ತಾರು ವಸ್ತುಗಳ ಖರೀದಿ ಜೋರಾಗಿ ನಡೆದಿದೆ.

‘31ರೊಳಗೆ ಪಠ್ಯಪುಸ್ತಕ ಪೂರೈಕೆ’

ಶಾಲಾ ಆರಂಭಕ್ಕೆ ಸಿದ್ಧತೆಗಳನ್ನು ಮಾಡಲಾಗಿದೆ. ಮೇ 24ರಂದು ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕರ ಸಭೆ ನಡೆಸಲಾಗಿದೆ. ಮೇ 28ರಂದು ಶಾಲೆಗಳು ಆರಂಭಗೊಂಡಿವೆ. ಮೇ 29ರಂದು ಶಾಲಾ ಪ್ರಾರಂಭೋತ್ಸವದ ಬಳಿಕ ಪಾಠ ಪ್ರವಚನಗಳು ಆರಂಭಗೊಳ್ಳಲಿವೆ ಎಂದು ಡಿಡಿಪಿಐ ವೈ. ಶಿವರಾಮಯ್ಯ ತಿಳಿಸಿದ್ದಾರೆ.

ಈಗಾಗಲೇ ಬಹುತೇಕ ಪಠ್ಯಪುಸ್ತಕಗಳು ಶಾಲೆಗಳಿಗೆ ಸರಬರಾಜು ಆಗಿವೆ. ಇದೇ 31ರೊಳಗೆ ಬಾಕಿ ಇರುವ ಎಲ್ಲ ಪಠ್ಯಪುಸ್ತಕಗಳು ಸರಬರಾಜು ಆಗಲಿವೆ. ಸಮವಸ್ತ್ರಗಳು ನಮ್ಮ ಜಿಲ್ಲೆಗೆ ಈ ತಿಂಗಳಾಂತ್ಯದೊಳಗೆ ಬರುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

**
ಸ್ನೇಹಿತರೊಂದಿಗೆ ಆಟ ಆಡಿ, ಪಾಠ ಕೇಳುವುದೇ ಒಂದು ಮಜ. ಎರಡು ತಿಂಗಳ ನಂತರ ಮತ್ತೆ ಶಾಲೆ ಆರಂಭವಾಗಿರುವುದು ಸಂತಸ ತಂದಿದೆ 
ಅಮೃತ್, 6 ನೇ ತರಗತಿ ವಿದ್ಯಾರ್ಥಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.