ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಆಡಳಿತದೊಂದಿಗೆ ಅಸಹಕಾರ ಧೋರಣೆ ತೋರುತ್ತಿರುವ ಪಿಡಿಒ ಅವರ ವರ್ಗಾವಣೆ ಭರವಸೆ ಈಡೇರದ್ದನ್ನು ಪ್ರತಿಭಟಿಸಿ ಸುಳ್ಯ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಕಾಂಗ್ರೆಸ್ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ಆರಂಭಗೊಂಡಿದೆ.
ಸೋಮವಾರ ಬೆಳಿಗ್ಗೆ 10 ಗಂಟೆಗೆ ವಿವಿಧ ಕಡೆಗಳಿಂದ ಆಗಮಿಸಿದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಧಾರಾಕಾರ ಸುರಿವ ಮಳೆಯನ್ನೂ ಲೆಕ್ಕಿಸದೇ ತಾ.ಪಂ ಕಚೇರಿಯ ದ್ವಾರದಲ್ಲಿ ಪ್ರತಿಭಟನೆ ಆರಂಭಿಸಿದರು.
ತಾಲ್ಲೂಕು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವರಾಮ ರೈ ಮಾತನಾಡಿ ಪಿಡಿಒ ವರ್ಗಾವಣೆ ಆದೇಶ ಆಗದ ಹೊರತು ಇಲ್ಲಿಂದ ಕದಲುವುದಿಲ್ಲ. ಅಹೋರಾತ್ರಿ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಜಿ.ಪಂ ಸದಸ್ಯರಾದ ಕೆ.ಎಸ್. ದೇವರಾಜ್, ಸರಸ್ವತಿ ಕಾಮತ್, ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಎನ್.ಜಯಪ್ರಕಾಶ್ ರೈ, ತಾ.ಪಂ. ಸದಸ್ಯೆ ವಿಮಲಾ ರಂಗಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಯತೀಶ್ ಗೌಡ, ಜಿಲ್ಲಾ ಮುಖಂಡೆ ಕೃಪಾ ಅಮರ್ ಆಳ್ವ ಮೊದಲಾದವರು ಮಾತನಾಡಿ ಪಿಡಿಒರನ್ನು ವರ್ಗಾಯಿಸಲು ಅಧಿಕಾರಿಗಳು ನಿರ್ಧರಿಸಿದ್ದರೂ ಇದೀಗ ಶಾಸಕರು ಮತ್ತು ತಾ.ಪಂ. ಅಧ್ಯಕ್ಷರು ವರ್ಗಾಯಿಸದಂತೆ ಒತ್ತಡ ತರುತ್ತಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ಗ್ರಾ.ಪಂ.ಗಳಲ್ಲಿ ಕೆಲಸ ಆಗದಂತೆ ನೋಡಿಕೊಂಡು ಜನತೆಗೆ ಆಡಳಿತದ ಮೇಲೆ ಅಸಮಾಧಾನ ಬರಲಿ ಎನ್ನುವುದು ಇವರ ಉದ್ದೇಶ. ಇಂಥ ಧೋರಣೆಯನ್ನು ಖಂಡಿಸುತ್ತೇವೆ ಎಂದರು.
ಮಾತುಕತೆ: ಸಂಜೆಯ ಸುಮಾರಿಗೆ ಪ್ರತಿಭಟನಾ ನಿರತರೊಂದಿಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಲ್ಲೇಸ್ವಾಮಿ, ತಹಶೀಲ್ದಾರ್ ವೈದ್ಯನಾಥ್, ಸರ್ಕಲ್ ಇನ್ಸ್‌ಪೆಕ್ಟರ್ ಸುದರ್ಶನ್ ಮಾತುಕತೆ ನಡೆಸಿದರು. ಆದರೆ ವರ್ಗಾವಣೆಯ ಆದೇಶದ ಪಟ್ಟನ್ನು ನಾಯಕರು ಸಡಿಲಿಸಲಿಲ್ಲ. ಬಳಿಕ ಹೊರಗೆ ಬಂದು ಮಾತನಾಡಿದ ಎಂ.ವೆಂಕಪ್ಪ ಗೌಡರು ನಮ್ಮ ಬೇಡಿಕೆ ಈಡೇರದಿದ್ದರೆ ಸುಬ್ರಹ್ಮಣ್ಯ ಬಂದ್ ಮಾಡಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು. ಪಿ.ಎಸ್. ಗಂಗಾಧರ್, ಜಿ.ಕೆ. ಹಮೀದ್, ದಿನೇಶ್ ಅಂಬೆಕಲ್ಲು, ಡಾ.ರಘು, ಅನಿಲ್ ರೈ ಬೆಳ್ಳಾರೆ, ಪಿ.ಎ ಮಹಮ್ಮದ್, ಕೆ.ಎಂ. ಮುಸ್ತಫಾ, ಕೆ.ಗೋಕುಲದಾಸ್, ಸುಧೀರ್ ರೈ ಮೇನಾಲ, ಫಝಲ್ ಕೋಡಿಂಬಾಳ, ರವಿ ಕೊಡಿಯಾಲಬೈಲು, ಎಸ್.ಸಂಶುದ್ದೀನ್, ಆರ್.ಕೆ. ಮಹಮ್ಮದ್, ಮಹಮ್ಮದ್ ಕುಂಞಿ ಗೂನಡ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.