ADVERTISEMENT

`ತುಳುನಾಡಿಗೂ ಸಿಂಧೂ ನಾಗರಿಕತೆಗೂ ಸಂಬಂಧ'

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 10:28 IST
Last Updated 17 ಡಿಸೆಂಬರ್ 2012, 10:28 IST

ಮಂಗಳೂರು: ತುಳುನಾಡಿಗೂ ಸಿಂಧೂ ಕಣಿವೆಯ ನಾಗರಿಕತೆಗೂ ಸಂಬಂಧವಿದೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಅ.ಸುಂದರ ಅಭಿಪ್ರಾಯಪಟ್ಟರು.

ಕದ್ರಿ ಮಂಜುನಾಥ ದೇವಸ್ಥಾನ, ತುಳು ಸಾಹಿತ್ಯ ಅಕಾಡೆಮಿ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಇತಿಹಾಸ ಅಧ್ಯಾಪಕರ ಸಂಘದ (ಮಾನುಷ) ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ತುಳುನಾಡು ನುಡಿಯ ಚಾರಿತ್ರಿಕ ಅವಲೋಕನ `ತುಳುವ ಐಸಿರಿ'ಯ ಸಮಾರೋಪದ ಅಧ್ಯಕ್ಷತೆ ವಹಿಸಿ ಭಾನುವಾರ ಅವರು ಮಾತನಾಡಿದರು.

`ಗಾವಳಿ ಬಂಡೆಯ ಮೇಲಿರುವ ಜೋಡೆತ್ತಿನ ಚಿತ್ರದಲ್ಲಿ ಗೂಳಿಯ ಕಾಲು ಮಂಡಲವೊಂದರಲ್ಲಿ ನೆಟ್ಟಿದೆ. ಕೊಂಬುಗಳ ಮೇಲಿನ ಸಂಕೇತಗಳು ಹರಪ್ಪ ಕಾಲದ ಮುದ್ರಿಕೆಗಳಲ್ಲಿವೆ. ಚಿತ್ರದ ಮಂಡಲಗಳೂ ಹರಪ್ಪ ಸಂಸ್ಕೃತಿಯಲ್ಲಿ ಕಾಣಸಿಗುತ್ತವೆ. ಇಂತಹ ಮಂಡಲಗಳನ್ನೇ ಕರಾವಳಿ ಭಾಗದ ಪುರೋಹಿತರು ನಾಂದಿ ಸಂಪ್ರದಾಯದ ವೇಳೆ ಬಿಡಿಸುತ್ತಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕು' ಎಂದರು.

`ಸಿಂಧೂ ನಾಗರಿಕತೆ ಸಂಪೂರ್ಣ ನಾಶ ಹೊಂದಿಲ್ಲ. ಈ ಸಂಸ್ಕೃತಿಯ ಜನ ವಿವಿಧೆ ಕಡೆ ವಲಸೆ ಹೋದರು. ಒಂದು ಗುಂಪು ದಕ್ಷಿಣಕ್ಕೂ ಬಂತು. ದೇಶದಲ್ಲಿ ಗುರುತಿಸಲಾದ  25 ಅತಿ ಪ್ರಾಚೀನ ಭಾಷೆಗಳಲ್ಲಿ ಸ್ಥಾನ ಪಡೆದ ಪಂಜಾಬಿ, ರಾಜಸ್ತಾನಿ, ಗುಜರಾತಿ ಭಾಷೆಗಳಲ್ಲಿ ಹರಪ್ಪ ಪದಗಳಿವೆ. ತುಳು ಭಾಷೆ ಇತರ ದ್ರಾವಿಡ ಭಾಷೆಗಳಂತಿಲ್ಲ. ಸಂಶೋಧನೆ ನಡೆಸಿದರೆ ತುಳುವಿನಲ್ಲೂ ಹರಪ್ಪ ಪದಗಳು ಸಿಗಬಹುದು' ಎಂದು ಅವರು ವಿಶ್ಲೇಷಿಸಿದರು.

ಮುಂಬೈನ ಬಾಬು ಶಿವ ಪೂಜಾರಿ ಮಾತನಾಡಿ, `ತುಳುವಿಗೂ ಸಿಂಧೂ ಕಣಿವೆಯ ನಾಗರಿಕತೆಗೂ ನಂಟಿರುವ ಬಗ್ಗೆ ತುಳುನಾಡಿನಲ್ಲಿ ಈಗಲೂ ಅನೇಕ ನಿದರ್ಶನಗಳು ಸಿಗುತ್ತವೆ. ನಾಲ್ಕು ಸುತ್ತಲೂ ಮೆಟ್ಟಿಲುಗಳಿರುವ ಕೆರೆ, ಇಲ್ಲಿನ ಕೆರೆಗಳಿಗೆ ತೂಬು ಇರುವುದು ಇದಕ್ಕೆ ಪುರಾವೆಗಳು. ಹರಪ್ಪ ಮೊಹೆಂಜೊದಾರೊಗೆ ತುಳುನಾಡಿನಿಂದ ಲೋಹಗಳು ರಫ್ತಾಗುತ್ತಿದ್ದ ಬಗ್ಗೆ ಕೆಲವು ಇತಿಹಾಸ ತಜ್ಞರು ಉಲ್ಲೇಖಿಸಿದ್ದಾರೆ' ಎಂದರು.

`ನಮ್ಮಲ್ಲಿನ ಸಂಶೋಧಕರು ಯಾರೂ ಈ ನಿಟ್ಟಿನಲ್ಲಿ ಗಮನ ಹರಿಸಿಲ್ಲ. ತುಳುವಿನ ನೆಲೆ ಹುಡುಕಲು ವಿದೇಶಿಯರ ಸಂಶೋಧನೆಯತ್ತಲೂ ಮುಖಮಾಡಬೇಕಿದೆ' ಎಂದರು.

ಸಮಾಪನ ಸಂದೇಶ ನೀಡಿದ ಮುಂಬೈ ವಿ.ವಿ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್, `ತುಳುನಾಡಿನಲ್ಲಿ ಧರ್ಮ ಸಮನ್ವಯ, ಧರ್ಮ ಸಂಪನ್ನತೆ, ಧರ್ಮ ಸಹಿಷ್ಣುತೆ ಇದ್ದುದಕ್ಕೆ ಅಗಾಧ ಉದಾಹರಣೆಗಳು ಸಿಗುತ್ತವೆ. ಬಪ್ಪಬ್ಯಾರಿ ಕಟ್ಟಿಸಿದ ಬಪ್ಪನಾಡು ದೇವಸ್ಥಾನ, ಉಳ್ಳಾಲ ದರ್ಗಾದ ಮೇಲೆ ಹಿಂದೂಗಳು ನಂಬಿಕೆ ಇಟ್ಟಿರುವುದು ಇದಕ್ಕೆ ಉದಾಹರಣೆಗಳು. ಕೂಡಿ ಬಾಳುವುದೇ ನೆಲದ ಸಂಸ್ಕೃತಿ' ಎಂದರು.

`ಕದ್ರಿ ಮಂಜುನಾಥೇಶ್ವರ ಬೌದ್ಧ ವಿಹಾರವಾಗಿತ್ತು ಎಂಬುದಕ್ಕೆ ಇಲ್ಲಿನ ಗರ್ಭಗುಡಿ ಮುಂದಿರುವ ಕಂಬದ ಕೆತ್ತನೆಗಳು ಹಾಗೂ ಅವಲೋಕಿತೇಶ್ವರನ ವಿಗ್ರಹವೇ ಸಾಕ್ಷಿ. ಇತಿಹಾಸದ ಯಾವುದೋ ಕಾಲಘಟ್ಟದಲ್ಲಿ ದೇವಾಂತರ ಕಾರ್ಯ ನಡೆದಿರುವ ಸಾಧ್ಯತೆ ಇದೆ.

ಮಂಗಳಾದೇವಿ ಬಿಂಬವೂ ತೀರಾ ಕರಡು ರೂಪದಲ್ಲಿದೆ. ಬೌದ್ಧರಲ್ಲೂ ತಾರಾ ಭಗವತಿಗೆ ಮಂಗಳಾ ಎಂಬ ಇನ್ನೊಂದು ಹೆಸರಿದೆ. ಕೇರಳಕ್ಕೆ ಸಾಗಿದಂತೆ ಭಗವತಿ ಆರಾಧನಾ ಕೇಂದ್ರಗಳು ಹೆಚ್ಚು ಸಿಗುತ್ತವೆ. ಈ ದೇವಾಲಯಗಳ ವಾಸ್ತುವಿನ ಹಿನ್ನೆಲೆ ಬೌದ್ಧ ವಾಸ್ತುಶಿಲ್ಪವನ್ನು ಹೋಲುತ್ತವೆ' ಎಂದರು.

ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ವಿಠಲದಾಸ ತಂತ್ರಿ, ಡಾ.ಪಿ.ಅನಂತಕೃಷ್ಣ ಭಟ್, ಪ್ರೊ.ತುಕಾರಾಮ ಪೂಜಾರಿ, ನಿವೇದಿತಾ ಎನ್.ಶೆಟ್ಟಿ, ದೇವದಾಸ ಕುಮಾರ್, ಸುರೇಖಾ ರಾಜ್, ನಿಂಗಯ್ಯ, ಸುಧಾಕರ ರಾವ್ ಪೇಜಾವರ ಮತ್ತಿತರರು ಇದ್ದರು.

ಗೋಷ್ಠಿಗಳು: ತುಳುನಾಡಿನ ಕುಣಿತಗಳ ಬಗ್ಗೆ ವಿಚಾರ ಮಂಡಿಸಿದ ಡಾ.ಪೂವಪ್ಪ ಕಣಿಯೂರು, `ಇಲ್ಲಿನ ಕುಣಿತಗಳು ಕಾಲ ಹಾಗೂ ಸ್ಥಳ ಸಂಬಂಧಿ ಆರಾಧನಾ ನೆಲೆಯಲ್ಲಿ ಹುಟ್ಟಿಕೊಂಡವುಗಳು. ಅನ್ಯ ಜಾನಪದ ಕುಣಿತಗಳ ರಭಸ ಇಲ್ಲಿನ ಕುಣಿತಗಳಿಗಿಲ್ಲ. ಹಾಗಾಗಿ ಆವಿಷ್ಕಾರ ಹಾಗೂ ಪರಿಷ್ಕಾರಕ್ಕೆ ಒಳಗಾಗುವ ಸಾಮರ್ಥ್ಯ ಇವುಗಳಿಗಿಲ್ಲ' ಎಂದರು.

ತುಳುನಾಡಿನ ದೈವಾರಾಧನೆ ಬಗ್ಗೆ ವಿಚಾರ ಮಂಡಿಸಿದ ಡಾ.ಗಣೇಶ್ ಅಮೀನ್ ಸಂಕಮಾರ್, `13ನೇ ಶತಮಾನದಲ್ಲಿ ತುಳುನಾಡಿನ ಜನಪದ ಆಚರಣೆಗೆ ವೈದಿಕದ ಸ್ಪರ್ಶ ಆಯಿತು' ಎಂದರು.

ಡಾ.ಪಿ.ಸತ್ಯನಾರಾಯಣ ಭಟ್ ನಾಟಿ ವೈದ್ಯ ಪದ್ಧತಿ ಬಗ್ಗೆ, ಸುಶೀಲಾ ಉಪಾಧ್ಯಾಯ ತುಳುನಾಡಿನ ಸ್ತ್ರೀ ದೈವಗಳ ಬಗ್ಗೆ, ದಯಾನಂದ ಕತ್ತಲಸಾರ್ ದೈವಗಳ ಕೊಡಿಯಡಿ ಬಗ್ಗೆ, ಕದ್ರಿ ನವನೀತ ಶೆಟ್ಟಿ ರಂಗಭೂಮಿ ಬಗ್ಗೆ, ಭಾಸ್ಕರ ರೈ ಕುಕ್ಕುವಳ್ಳಿ ತುಳು ಯಕ್ಷಗಾನ ಪ್ರಸಂಗಗಳ ಬಗ್ಗೆ, ಮನೋಹರ ಪ್ರಸಾದ್ ನದಿ ಸಂಸ್ಕೃತಿ ಬಗ್ಗೆ, ಕಾರ್ಕಳದ ಡಾ.ಪ್ರಭಾಕರ ಆಚಾರ್ ಪ್ರಾಕೃತಿಕ ಸಂಪತ್ತು ಮತ್ತು ಪ್ರಾಣಿ ಸಂಕುಲದ ಬಗ್ಗೆ, ಡಾ.ಗಣನಾಥ ಎಕ್ಕರು ತುಳುನಾಡಿನ ಕ್ರೀಡೆಗಳ ಬಗ್ಗೆ, ಡಾ.ನರೇಂದ್ರ ರೈ ದೇರ್ಲ ಕೃಷಿ ಪಲ್ಲಟದ ಬಗ್ಗೆ, ಡಾ.ಸುಂದರ ಕೇನಾಜೆ ಜಾತ್ರೆಗಳ ಬಗ್ಗೆ ವಿಚಾರ ಮಂಡಿಸಿದರು. ಯು.ಪಿ.ಉಪಾಧ್ಯಾಯ, ಡಾ.ಎಂ.ಪ್ರಭಾಕರ ಜೋಷಿ, ಪ್ರೊ.ತುಕಾರಾಮ ಪೂಜಾರಿ ವಿವಿಧ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.