ADVERTISEMENT

ತುಳುನಾಡಿನ ಮೂಡೆ, ನೀರ್‌ದೊಸೆ ನೆನೆದ ಮೋದಿ

ತುಳುನಾಡಿನ ಜನರ ಪ್ರೀತಿಗೆ ಮನಸೋತ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 6 ಮೇ 2018, 12:29 IST
Last Updated 6 ಮೇ 2018, 12:29 IST

ಮಂಗಳೂರು: ತುಳುನಾಡಿನ ಜನರ ಪ್ರೀತಿ ಅದಮ್ಯವಾದುದು. ಪ್ರತಿಬಾರಿ ಮಂಗಳೂರಿಗೆ ಬಂದಾಗ ನನಗೆ ಇದೇ ರೀತಿಯ ಪ್ರೀತಿ ನೀಡಿದ್ದೀರಿ. ನಿಮ್ಮ ಪ್ರೀತಿಯನ್ನು ಬಡ್ಡಿ ಸಮೇತ ಹಿಂದಿರುಗಿಸುತ್ತೇನೆ’ ಎಂದು ಪ್ರಧಾನಿ ಮೋದಿ ಹೇಳಿದರು.

ಕಿಕ್ಕಿರಿದು ತುಂಬಿದ್ದ ನಗರದ ನೆಹರೂ ಮೈದಾನದಲ್ಲಿ ಜನರನ್ನು ಉದ್ದೇಶಿಸಿ ತುಳುವಿನಲ್ಲಿಯೇ ಭಾಷಣ ಆರಂಭಿಸಿದ ಮೋದಿ, ‘ಮಂಜುನಾಥ ಸ್ವಾಮಿಗ್ ಎನ್‌ ಪ್ರಣಾಮೊಲು, ತುಳುನಾಡದ್‌ ಜನಕ್ಲ್‌ಗೆ ಎನ್ನ ಪ್ರೀತಿದ ನಮಸ್ಕಾರ’ ಎನ್ನುವ ಮೂಲಕ ಕರತಾಡತನದ ಅಭಿನಂದನೆ ಸ್ವೀಕರಿಸಿದರು.

ಕೋಟಿ ಚೆನ್ನಯ, ರಾಣಿ ಅಬ್ಬಕ್ಕ, ಬ್ರಹ್ಮಶ್ರೀ ನಾರಾಯಣ ಗುರು, ಕಾರ್ನಾಡ್‌ ಸದಾಶಿವರಾವ್‌ ಅವರಿಗೆ ನಮನಗಳು ಎಂದು ಹೇಳಿದರು.

ADVERTISEMENT

ಈ ಹಿಂದೆ ಲಕ್ಷದ್ವೀಪಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮಂಗಳೂರಿನಲ್ಲಿ ವಾಸ್ತವ್ಯ ಮಾಡಬೇಕಿತ್ತು. ಅದಕ್ಕಾಗಿ ತಡರಾತ್ರಿ 1 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದೆ. ಆಗಲೂ ಅಪಾರ ಸಂಖ್ಯೆಯಲ್ಲಿ ಜನರು ನನ್ನನ್ನು ಸ್ವಾಗತಿಸಿದ್ದರು. ಇಂದು ಕೂಡ ಅದೇ ಸನ್ನಿವೇಶ ಕಾಣುತ್ತಿದೆ ಎಂದು ಹೇಳಿದರು.

ಲಕ್ಷದ್ವೀಪಕ್ಕೆ ಹೊರಡುವ ಮುನ್ನ ಸವಿದ ಇಲ್ಲಿನ ಮೂಡೆ, ನೀರ್‌ ದೋಸೆ, ಸಜ್ಜಿಗೆ ಬಜಿಲ್‌ ಅನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಮಂಗಳೂರಿನ ಆತಿಥ್ಯವನ್ನು ಸ್ಮರಿಸಿದರು.

ಇಂದು ವಿಮಾನ ನಿಲ್ದಾಣದಿಂದ ನೆಹರೂ ಮೈದಾನಕ್ಕೆ ಬರುವ ದಾರಿಯ ಇಕ್ಕೆಲಗಳಲ್ಲಿ ಮಾನವ ಸರಪಳಿ ಅಲ್ಲ, ಮಾನವ ಗೋಡೆಯೇ ನಿರ್ಮಾಣವಾದಂತೆ ಭಾಸವಾಗಿತ್ತು. ನೆಹರೂ ಮೈದಾನವನ್ನು ನೋಡಿದರೆ, ನಿಮ್ಮ ಪ್ರೀತಿ ಎಂಥದ್ದು ಎನ್ನುವುದು ಕಾಣುತ್ತದೆ ಎಂದರು.

ಈ ಮಧ್ಯೆ ಮಾತು ಆರಂಭಿಸುತ್ತಿದ್ದಂತೆಯೇ ಪ್ರಧಾನಿ ಅವರ ಭಾಷಣದ ಕನ್ನಡ ತರ್ಜುಮೆ ಮಾಡಲಾಯಿತು. ಕೂಡಲೇ ಪ್ರೇಕ್ಷಕರಿಂದ ಅನುವಾದ ಬೇಡ ಎನ್ನುವ ಕೂಗು ಕೇಳಿ ಬಂತು. ಇದರಿಂದ ಇನ್ನಷ್ಟು ಪ್ರೋತ್ಸಾಹಿತರಾದ ಪ್ರಧಾನಿ ಮೋದಿ, ‘ನನ್ನ ಮೇಲೆ ಇಷ್ಟೊಂದು ಪ್ರೀತಿಯೇ’ ಎಂದರು.

ಈಗಲೂ ಯಾರ ತಲೆಯಲ್ಲಾದರೂ ಅತಂತ್ರ ವಿಧಾನಸಭೆ ಬರಲಿದೆ ಎಂಬ ವಿಚಾರಗಳಿದ್ದರೆ, ಅಂಥವರು ಇಲ್ಲಿ ಸೇರಿರುವ ಜನಸಾಗರವನ್ನು ನೋಡಲಿ. ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.