ಮಂಗಳೂರು: ರಾಜ್ಯದಲ್ಲಿರುವ ಎಲ್ಲಾ ಕಂದಾಯ ಸರ್ವೆ ಕಾರ್ಯಗಳನ್ನು 3-4 ವರ್ಷದೊಳಗೆ ಮುಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಯೊಂದು ರೂಪುಗೊಂಡಿದ್ದು, ಅದೇ ರೀತಿಯಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುವುದಕ್ಕೂ ಕಾರ್ಯತಂತ್ರವೊಂದನ್ನು ರೂಪಿಸಬೇಕು ಎಂದು ವಿಧಾನಸಭೆಯ ಉಪಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಹೇಳಿದರು.
ರಾಜ್ಯ ವಕೀಲರ ಪರಿಷತ್ತು ಮತ್ತು ಮಂಗಳೂರು ವಕೀಲರ ಸಂಘದ ಆಶ್ರಯದಲ್ಲಿ ಇಲ್ಲಿ ನಡೆದ 2012ನೇ ಸಾಲಿನ ವಕೀಲರ ಪ್ರಾದೇಶಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಅವರು ಮಾತನಾಡಿದರು.
ಈಗಿನ ವ್ಯವಸ್ಥೆಯಲ್ಲೇ ರಾಜ್ಯದಲ್ಲಿ ಸರ್ವೆ ವಿವಾದಗಳನ್ನು ಬಗೆಹರಿಸುತ್ತ ಹೋದರೆ ಸರ್ವೆ ಸೆಟ್ಲ್‌ಮೆಂಟ್‌ಗೆ 12 ವರ್ಷ ಬೇಕಾದೀತು ಎಂಬ ಉತ್ತರ ಕೇಳಿಬಂದಿತ್ತು. ಅದನ್ನು 3ರಿಂದ 4 ವರ್ಷದೊಳಗೆ ಮುಗಿಸುವ ನಿಟ್ಟಿನಲ್ಲಿ ಇದೀಗ ಅಧಿಕಾರಿಗಳ ತಂಡದಿಂದ ಕಾರ್ಯಕ್ರಮ ಆರಂಭವಾಗಿದೆ.
ಆಡಳಿತಾತ್ಮಕ ಸುಧಾರಣೆಯಲ್ಲಿ ಇದೊಂದು ಮಹತ್ವದ ಹೆಜ್ಜೆ. ನ್ಯಾಯಾಂಗ ಕ್ಷೇತ್ರದಲ್ಲೂ ಇಂತಹದೇ ಕ್ರಾಂತಿಕಾರಿ ಬೆಳವಣಿಗೆ ನಡೆದು ಬಾಕಿ ಪ್ರಕರಣಗಳನ್ನು ಬೇಗ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪುಗೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು.
ನ್ಯಾಯಾಂಗಕ್ಕೆ ಮೂಲಸೌಲಭ್ಯ ಒದಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದ ಅವರು, ಮಂಗಳೂರಿನ ಜಿಲ್ಲಾ ನ್ಯಾಯಾಲಯ ಕಟ್ಟಡ ಕಾಮಗಾರಿ ಶೀಘ್ರ ಕೊನೆಗೊಳ್ಳಲಿದೆ. ಮೂಡುಬಿದಿರೆ ಸಹಿತ ಇತರೆಡೆ ಸಹ ನ್ಯಾಯಾಲಯ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ಬಿ.ವಿ.ಪಿಂಟೊ ಮಾತನಾಡಿ, ಬಾಕಿ ಉಳಿದಿರುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಗುಜರಾತ್‌ನಲ್ಲಿ ಸಂಜೆ ಹೊತ್ತಲ್ಲೂ ಕಲಾಪ ನಡೆಯುತ್ತಿದೆ, ರಾಜ್ಯದಲ್ಲೂ ಇದೇ ವ್ಯವಸ್ಥೆ ಜಾರಿಗೆ ತರಲು ನ್ಯಾಯಾಂಗ ಅಧಿಕಾರಿಗಳ ಕೊರತೆ ಇದೆ ಎಂದರು.
ದ.ಕ. ಜಿಲ್ಲೆಯ 28 ಮಂದಿ ನ್ಯಾಯಾಧೀಶರು ಇಂದು ವಿವಿಧ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಈ ಸಂಖ್ಯೆ ತೀರಾ ಕಡಿಮೆ ಇದೆ. ರಾಜ್ಯದಲ್ಲಿ ಒಟ್ಟು 1000 ನ್ಯಾಯಾಂಗ ಅಧಿಕಾರಿಗಳಿದ್ದು, ಪ್ರತಿ ಜಿಲ್ಲೆಯಲ್ಲೂ ಸರಾಸರಿ 30ರಷ್ಟು ನ್ಯಾಯಾಂಗ ಅಧಿಕಾರಿಗಳು ತಯಾರಾಗುವ ಅಗತ್ಯ ಇದೆ. ಇದಕ್ಕಾಗಿ ಯುವ ವಕೀಲರಿಗೆ ಹೆಚ್ಚಿನ ತರಬೇತಿ ನೀಡುವ ಕೆಲಸ ನಡೆಯಬೇಕು ಎಂದರು.
ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ನಟರಾಜ್, ರಾಜ್ಯ ವಕೀಲರ ಪರಿಷತ್‌ನ ಉಪಾಧ್ಯಕ್ಷ ಎಲ್.ಶ್ರೀನಿವಾಸ ಬಾಬು, ಕೇಂದ್ರೀಯ ವಕೀಲರ ಪರಿಷತ್‌ನ ಸದಸ್ಯ ಎಸ್.ಎಲ್.ಬೋಜೇಗೌಡ, ಜಿಲ್ಲಾ ನ್ಯಾಯಾಧೀಶ ಎಚ್.ಆರ್.ದೇಶಪಾಂಡೆ, ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಪಿ.ಪಿ.ಹೆಗ್ಡೆ, ರವೀಂದ್ರನಾಥ ರೈ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ಇತರರು ಇದ್ದರು.
ನಿರ್ಣಯ
* ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್‌ನ ಪೀಠ ಸ್ಥಾಪಿಸಬೇಕು
* ಹೈಕೋರ್ಟ್‌ನ ಸಂಚಾರಿ ಪೀಠವನ್ನು ಮಂಗಳೂರಿನಲ್ಲೂ ಸ್ಥಾಪಿಸಬೇಕು
* ನ್ಯಾಯಾಂಗ ಅಧಿಕಾರಿಗಳ ಪರೀಕ್ಷೆ: 7 ವರ್ಷ ಸೇವಾ ಅನುಭವ ಕಡ್ಡಾಯವಾಗಲಿ
* ರಾಜ್ಯ ವಕೀಲರ ಪರಿಷತ್‌ನ ಚುನಾವಣಾ ಬೈಲಾದಲ್ಲಿ ಬದಲಾವಣೆ ತರಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.