ADVERTISEMENT

ದ.ಕ: ಏ.2ರಿಂದ ನಾಗರಿಕ ಸನ್ನದು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 8:55 IST
Last Updated 8 ಮಾರ್ಚ್ 2012, 8:55 IST

ಮಂಗಳೂರು: ನಾಗರಿಕರಿಗೆ ಸಮಯ ಮಿತಿಯಲ್ಲಿ ಸೇವೆ ಕೊಡುವ ನಾಗರಿಕ ಸೇವಾ ಖಾತರಿ ಕಾಯ್ದೆ ಪುತ್ತೂರಿನಲ್ಲಿ ಮಾರ್ಚ್ ಒಂದರಿಂದ ಜಾರಿಗೆ ಬಂದಿದ್ದು, ಈ ಸಂಬಂಧ ಸಂಬಂಧಪಟ್ಟು 11 ಇಲಾಖೆಗಳು ಅರ್ಜಿ ಸ್ವೀಕರಿಸಿ, ಉತ್ತರಿಸಿರುವ ಕುರಿತು ಹಾಗೂ ಎದುರಾದ ಸಮಸ್ಯೆಗಳು ಮತ್ತು ಬೇಡಿಕೆ ಆಲಿಸಲು ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪಗೌಡ ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ  ಕರೆದಿದ್ದರು.

ಪುತ್ತೂರು ಆರ್‌ಟಿಒ ಕಚೇರಿ ಕಾಯ್ದೆಯಡಿ ಅತಿ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದು, ಅರ್ಜಿಯನ್ನು ನಿಗದಿತ ಸಮಯದೊಳಗೆ ವಿಲೇ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಆರ್‌ಟಿಒ ಸಿ.ಮಲ್ಲಿಕಾರ್ಜುನ್ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
 
ಇಲಾಖೆ ಆನ್ ಲೈನ್ ಆಗಿರುವುದರಿಂದ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಹೊರತುಪಡಿಸಿದರೆ ತಮ್ಮ ಇಲಾಖೆಯಲ್ಲಿ ಸಕಾಲವನ್ನು ಯಶಸ್ವಿಯಾಗಿ ಜಾರಿಗೊಳಿಸುವುದಾಗಿ ಉತ್ತರಿಸಿದರು. ಆದರೆ, ಮಂಗಳೂರಿನ ಕಚೇರಿಯಲ್ಲಿ ಇಲಾಖೆಯಲ್ಲಿ  ಐದು ಸೇವೆಗೆ ಪ್ರತಿದಿನ 800 ಅರ್ಜಿಗಳು ಬರುತ್ತಿದ್ದು, ತಾಂತ್ರಿಕ ಹಾಗೂ ನುರಿತ ಸಿಬ್ಬಂದಿಗಳ ಅಗತ್ಯವಿದೆ ಎಂಬುದನ್ನು ಆರ್‌ಟಿಒ ಸಭೆಯ ಗಮನಕ್ಕೆ ತಂದರು.

ಪುತ್ತೂರು ಆರೋಗ್ಯ ಇಲಾಖೆಯಲ್ಲಿ 117 ಅರ್ಜಿಗಳು ಬಂದಿದ್ದು, ಅರ್ಜಿಗಳ ತುರ್ತು ವಿಲೇಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಓ ಶ್ರೀರಂಗಪ್ಪ ಅವರು ವಿವರಿಸಿದರು.

ಈ ಸಂಬಂಧ ತಮ್ಮ ಇಲಾಖಾ ಮುಖ್ಯಸ್ಥರ ಗಮನ ಸೆಳೆದಿರುವುದಾಗಿಯೂ ಸಭೆಯ ಗಮನಕ್ಕೆ ತಂದರು. ಎಲ್ಲ 11 ಇಲಾಖೆಗಳು ಕಾಯ್ದೆ ಅನುಷ್ಠಾನಕ್ಕೆ ಪೂರಕವಾಗಿ ತಮಗೆ ಬೇಕಿರುವ ಅಗತ್ಯಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.

ಸಕಾಲದ ಸಮಗ್ರ ಅನುಷ್ಠಾನಕ್ಕೆ ಜಿಲ್ಲೆಗೆ ಒಬ್ಬ ನೋಡೆಲ್ ಅಧಿಕಾರಿ ನೇಮಿಸುವ ಬಗ್ಗೆ ಹಾಗೂ ಈ ಸಂಬಂಧ ದಿನನಿತ್ಯದ ಪ್ರಗತಿಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಏಪ್ರಿಲ್ ಎರಡರಿಂದ ದ.ಕ. ಜಿಲ್ಲೆಯಾದ್ಯಂತ ಪೂರ್ಣ ಪ್ರಮಾಣದಲ್ಲಿ ಕಾಯ್ದೆ ಜಾರಿಯಾಲಿದ್ದು ಇದಕ್ಕೆ ಪೂರಕವಾಗಿ ಪೂರ್ವ ತಯಾರಿ ನಡೆಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಮಾರ್ಚ್ 12ರಿಂದ 30ರವರೆಗೆ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಅಧಿಕಾರಿಗಳಿಗೆ ಈ ಸಂಬಂಧ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಯಿಂದ ಅಧಿಕಾರಿಗಳು ಕಾರ್ಯಾಗಾರಕ್ಕೆ ಹಾಜರಾಗಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ದಯಾನಂದ, ಪುತ್ತೂರು ಎಎಸ್‌ಪಿ ಅನುಚೇತ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.