ADVERTISEMENT

ದಿನವಿಡೀ ಸಂಚಾರ ಅಡಚಣೆ, ದೂಳಿನ ಕಾಟ

ಮಹಮ್ಮದ್ ಅಲಿ ವಿಟ್ಲ
Published 1 ಏಪ್ರಿಲ್ 2015, 6:05 IST
Last Updated 1 ಏಪ್ರಿಲ್ 2015, 6:05 IST

ವಿಟ್ಲ: ಅತಿ ಹೆಚ್ಚು ಅಪಘಾತ ಸಂಭವಿಸುವ ಮಾಣಿ-–ಮೈಸೂರು ರಾಜ್ಯ ಹೆದ್ದಾರಿಯ ಮಾಣಿ ಜಂಕ್ಷನ್‌ನಲ್ಲಿ ಒಳಚರಂಡಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ರಸ್ತೆ ಮಧ್ಯದಲ್ಲಿ ಹೊಂಡ ತೋಡಿದ್ದರಿಂದ ದಿನವಿಡೀ ಸಂಚಾರ ಸಮಸ್ಯೆ ಹಾಗೂ ದೂಳಿನ ಸಮಸ್ಯೆಯಿಂದ ವಾಹನ ಚಾಲಕರು, ಶಾಲಾ-–ಕಾಲೇಜು  ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುತ್ತಿದ್ದಾರೆ.

ವಾರದ ಹಿಂದೆ ಕೆಆರ್‌ಡಿಸಿಎಲ್ ವತಿಯಿಂದ ಮಾಣಿ-–ಮೈಸೂರು ರಾಜ್ಯ ಹೆದ್ದಾರಿಯ ಮಾಣಿ ಜಂಕ್ಷನ್‌ನಲ್ಲಿ ಒಳಚ ರಂಡಿ ನಿರ್ಮಾಣ ಮಾಡುವ ಉದ್ದೇಶ ದಿಂದ ರಸ್ತೆ ಮಧ್ಯದಲ್ಲಿ ಬೃಹದಾಕಾರದ ಹೊಂಡ ತೋಡಿ ಕಾಮಗಾರಿ ಪ್ರಾರಂಭಿಸಲಾಗಿತ್ತು.

ವಾರ  ಕಳೆದರೂ ಇನ್ನೂ ಅರ್ಧ ದಷ್ಟು ಕಾಮಗಾರಿ ಮುಗಿದಿಲ್ಲ. ಇದರಿಂದ ದ್ವಿಮುಖ ಸಂಚಾರಕ್ಕೆ ತೊಂದರೆ ಯಾಗುತ್ತಿದೆ ಎಂದು ಸಾರ್ವಜನಿಕರು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಂದು ಬದಿಯ ಕಾಮಗಾರಿ ಮುಗಿದ ಬಳಿಕ ಇನ್ನೊಂದು ಬದಿಯಲ್ಲಿ ಇದೇ ರೀತಿಯ ಹೊಂಡ ತೋಡಿ ಕಾಮಗಾರಿ ನಡೆಸಲಿದ್ದು, ಮತ್ತೊಮ್ಮೆ ಇದೇ ಪರಿಸ್ಥಿತಿ ಮುಂದುವರೆಯಲಿದೆ., ಅಲ್ಲಿಯೂ ಆಮೆಗತಿಯಲ್ಲಿ ಕಾಮಗಾರಿ ಮುಂದುವರಿದರೆ ವರ್ಷವಿಡೀ ಇಲ್ಲಿ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ರಸ್ತೆಯ ಒಂದು ಭಾಗದಲ್ಲಿ ವಾಹನಗಳು ಹೋಗಲು ಹಾಗೂ ಬರಲು ಚಿಕ್ಕದಾದ ಸ್ಥಳವನ್ನು ಬಿಡಲಾಗಿದೆ. ಈ ಸ್ಥಳದಲ್ಲಿ ಆಟೊ ರಿಕ್ಷಾ ಕೂಡಾ ಸರಿಯಾಗಿ ಸಂಚರಿಸಲು ಪರದಾಡುವಂತಹ ಪರಿಸ್ಥಿತಿ ಇದೆ. ಶಿರಾಡಿ ಘಾಟಿ ಬಂದ್ ಆದ ಹಿನ್ನೆಲೆಯಲ್ಲಿ ಮಂಗಳೂರು-–ಬೆಂಗಳೂ ರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಬೆಂಗಳೂರು ಕಡೆ ತೆರಳುವ ವಾಹನಗಳು ಇದೇ ರಾಜ್ಯ ಹೆದ್ದಾರಿಯಲ್ಲಿ ತೆರಳುತ್ತಿದ್ದು, ಬೆಳಗ್ಗಿನಿಂದ ರಾತ್ರಿ ವರೆಗೂ ನಿರಂತರ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.

ಮಾಣಿ ಗ್ರಾಮ ಪಂಚಾಯಿತಿ ವತಿಯಿಂದ ಬಸ್ ತಂಗುದಾಣ ನಿರ್ಮಿಸ ಲು ಕಲ್ಲುಗಳನ್ನು ತಂದು ಹಾಕಲಾಗಿದ್ದು, ಈ ಚರಂಡಿ ಕಾಮಗಾರಿಯಿಂದ ಅದರ ಕೆಲಸ ಅರ್ಧಕ್ಕೆ ನಿಂತಿದೆ. ಮಾಣಿ ಪರಿಸರದಲ್ಲಿ ಹಲವು ಶಾಲಾ-–ಕಾಲೇಜ್‌ ಗಳಿದ್ದು, ಶಾಲೆ ಬಿಡುವ ವೇಳೆ ಸಂಚಾರ ದಟ್ಟಣೆ ಜಾಸ್ತಿ ಇರುತ್ತದೆ. ಅದಲ್ಲದೇ ಇಲ್ಲಿಯ ದೂಳಿನಿಂದ ಜನರು ರೋಸಿ ಹೋಗಿದ್ದಾರೆ.

ಕಾಮಗಾರಿಯ ಹೊಣೆ ಹೊತ್ತವರು ತಮಗೆ ಇಷ್ಟಬಂದಂತೆ ಕೆಲಸ ನಿರ್ವಹಿಸು ತ್ತಿದ್ದು, ಇದರಿಂದ ಸದ್ಯಕ್ಕೆ ಈ ಕಾಮಗಾರಿ ಮುಗಿವಂತೆ ಕಾಣುತ್ತಿಲ್ಲ. ಭಾನುವಾರ   ಕಾಮಗಾರಿಗೂ ರಜೆ. ಸೋಮ ವಾರ ಕೂಡಾ ಕೆಲಸ ಪ್ರಾರಂಭಿಸಿಲ್ಲ. ಮಂಗಳವಾರ ಸಂಬಂಧ ಪಟ್ಟವರಿಗೆ ಸಾರ್ವಜನಿಕರು ತಿಳಿಸಿದಾಗ ಮಧ್ಯಾಹ್ನ ವೇಳೆ ಕೆಲಸಗಾರರು ಬಂದಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮಾಣಿ ಜಂಕ್ಷನ್‌ಗೆ ಅಪಘಾತ ವಲಯ ಎಂಬ ಹೆಸರಿದ್ದು, ಇದು ಈ ಹಿಂದೆ ಹಲವು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇದೀಗ ಅದೇ ಜಂಕ್ಷ ನ್‌ನಲ್ಲಿ ಹೊಂಡ ತೋಡಿ ಕಾಮಗಾರಿ ನಡೆಸುತ್ತಿರುವುದರಿಂದ ಇಕ್ಕಟ್ಟಿನ ರಸ್ತೆ ಯಲ್ಲಿ ವಾಹನಗಳು ಸಂಚರಿಸಲು ಹರಸಾಹಸ ಪಡುತ್ತಿದ್ದು, ಇದು ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿ ಮಾಡುತ್ತಿದೆ.

ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಸಂಬಂಧಪಟ್ಟವರು ಚುರುಕು ಮುಟ್ಟಿಸಿ ಬೇಗನೇ ಕಾಮಗಾರಿ ಮುಗಿಸದಿದ್ದಲ್ಲಿ ಇದರ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸು ವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.